Advertisement

ಕೋಟೆಯಲ್ಲಿ ಅದ್ಧೂರಿ ಗ್ರಾಮೀಣ ದಸರಾ

09:00 PM Oct 01, 2019 | Team Udayavani |

ಎಚ್‌.ಡಿ.ಕೋಟೆ: ಪಟ್ಟಣದಲ್ಲಿ ಗ್ರಾಮೀಣ ದಸರಾ ಅದ್ಧೂರಿಯಾಗಿ ಜರುಗಿತು. ಆಕರ್ಷಕ ಜಾನಪದ ಕಲಾತಂಡ, ಸ್ತಬ್ಧಚಿತ್ರಗಳೊಂದಿಗೆ ನಾಡದೇವತೆ ಚಾಮುಂಡೇಶ್ವರಿ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಲಕ್ಷ್ಮೀವರದರಾಜಸ್ವಾಮಿ ದೇವಸ್ಥಾನದ ಎದುರು ನಂದಿ ಧ್ವಜಕ್ಕೆ ಶಾಸಕ ಅನಿಲ್‌ ಚಿಕ್ಕಮಾದು ಪೂಜೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂದಿಧ್ವಜ, ವೀರಗಾಸೆ, ಡೊಳ್ಳುಕುಣಿತ, ಕಂಸಾಳೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

Advertisement

ತಾಲೂಕಿನ ಎರಡು ಇಲಾಖೆ ಹೊರತು ಪಡಿಸಿದ ಇನ್ನುಳಿದ ಇಲಾಖೆಗಳಿಂದ ತಯಾರಿಸಿದ್ದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಮೆರಗು ನೀಡಿದವು. ಮಹಿಷಾನನ್ನು ಸಂಹರಿಸುವ ಸ್ತಬ್ಧಚಿತ್ರ ಹಾಗೂ ಬೀಸಿ ಕಂಸಾಳೆ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಶಾಸಕರು ಸೇರಿದಂತೆ ತಾಲೂಕು ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮ:ಉತ್ಸವ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಗ್ರಾಮೀಣ ಸೊಗಡಿನ ಕ್ರೀಡೆ, ಕಲೆಗಳು ನಶಿಸಬಾರದು ಎಂಬ ಉದ್ದೇಶದಿಂದ ವಿಶ್ವವಿಖ್ಯಾತ ಮೈಸೂರು ದಸರಾ ವೇಳೆ ತಾಲೂಕು ಮಟ್ಟದ ಗ್ರಾಮೀಣ ರೈತ ದಸರಾ ಆಚರಿಸಲಾಗುತ್ತಿದೆ. ಗ್ರಾಮೀಣ ಸೊಗಡಿನ ಕ್ರೀಡೆ ಮತ್ತು ಕಲೆಗಳ ಉಳಿವಿಗೆ ಯುವ ಜನತೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆ, ಬೆಳೆಯಾಗಿದೆ. ತಾಲೂಕಿನ ಕಬಿನಿ, ತಾರಕ ಸೇರಿದಂತೆ ನಾಲ್ಕು ಜಲಾಶಯಗಳು ಭರ್ತಿಯಾಗಿವೆ. ಈ ಭಾಗದ ರೈತರ ಜಮೀàನುಗಳಿಗೆ ಜಲಾಶಯದ ನಾಲೆಗಳಿಂದ ನೀರು ಹರಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ರೈತರು ಯಾವುದೇ ಆತಂಕ ಪಡದೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕಿನ ಮಹಿಳೆಯರು, ರೈತರು ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ಅಧಿಕಾರಿಗಳ ಸಹಕಾರಿದಂದ ದಸರಾ ಯಶಸ್ವಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ವೆಂಕಟಸ್ವಾಮಿ, ನುಯಿಮಾಸುಲ್ತಾನ, ತಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಂಜುಳಾ, ಸರಗೂರು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಪುರಸಭೆ ಸದಸ್ಯರಾದ ಎಚ್‌.ಸಿ.ನರಸಿಂಹಮೂರ್ತಿ, ನಂಜಪ್ಪ, ಮಧು, ಲೋಕೇಶ್‌, ತಾಪಂ ಸದಸ್ಯರಾದ ರವಿ, ಸಿದ್ದರಾಜು, ಎಂ.ಡಿ.ಮಂಚಯ್ಯ, ಸೋಮಶೇಖರ್‌, ಬಸವರಾಜು, ರಾಜು, ತಹಶೀಲ್ದಾರ್‌ ಆರ್‌.ಮಂಜುನಾಥ್‌, ತಾಪಂ ಇಒ ರಾಮಲಿಂಗಯ್ಯ, ಶಿಕ್ಷಣ ಇಲಾಖೆಯ ಮಹದೇವಯ್ಯ, ಖಲಿಂಉಲ್ಲಾಖಾನ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

ಎಸ್ಸೆಸ್ಸೆಲ್ಸಿ ಫೇಲ್‌ ಆದ್ರೂ ಜಾನಪದ ಕೈಬಿಡಲಿಲ್ಲ: ಖ್ಯಾತ ಜಾನಪದ ಗಾಯಕ ಅಮ್ಮರಾಮಚಂದ್ರ ಮಾತನಾಡಿ, ತಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಫೇಲ್‌ ಆಗಿದ್ದರೂ ಜಾನಪದ ಕಲೆ ನನ್ನ ಕೈಬಿಡಲಿಲ್ಲ. ಜಾನಪದ ಗಾಯನದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಿಂದ ಹಾಡುವ ಭಾಗ್ಯ ದೊರೆಯಿತು.

ಈ ದಿನ ಗ್ರಾಮೀಣ ದಸರಾ ಉದ್ಘಾಟನೆ ಭಾಗ್ಯ ಲಭಿಸಿದ್ದು ಹರ್ಷ ತಂದಿದೆ ಎಂದರು. ಗ್ರಾಮೀಣ ದಸರಾ ಆಚರಣೆಯಲ್ಲಿ ಗ್ರಾಮೀಣ ಸೊಗಡಿನ ಜಾನಪದ ಕಲೆ, ಕ್ರೀಡೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next