Advertisement
ಬೆಳಗ್ಗೆ 9.08ರ ಸುಮಾರಿಗೆ ಶ್ರೀಪಾದರಿಗೆ ಇಡಲಾದ ವೆಂಟಿಲೇಟರ್‌ನ್ನು ತೆಗೆಯಲಾಯಿತು. ಶ್ರೀಪಾದರು ವೆಂಟಿಲೇಟರ್ ತೆಗೆದ ಬಳಿಕವೂ ಸುಮಾರು ಹತ್ತು ನಿಮಿಷಗಳ ಉಸಿರಾಟ ಮಾಡಿರುವುದಾಗಿ ಮಠದ ಮೂಲಗಳು ತಿಳಿಸಿವೆ. ಪೇಜಾವರ ಮಠದ ಕಿರಿಯ ಯತಿಗಳು ಹಿರಿಯ ಶ್ರೀಗಳ ಬಾಯಿಗೆ ದೇವರ ತೀರ್ಥವನ್ನು ಹಾಕಿ, ಗಂಧ ಪ್ರಸಾದವನ್ನು ಹಣೆಗೆ ಹಚ್ಚುತ್ತಿದ್ದಂತೆ ಕೊನೆಯ ಉಸಿರು ಎಳೆದರು. 9.20ರ ಸುಮಾರಿಗೆ ಮಠದ ಆಪ್ತರಾದ ವಾಸುದೇವ್ ಭಟ್ ಅವರು ಮೂರು ಬಾರಿ ಗೋವಿಂದ ನಾಮ ಕೂಗುವ ಮೂಲಕ ಶ್ರೀಗಳ ನಿರ್ಯಾಣವನ್ನು ಘೋಷಿಸಿದರು.
ದೇವರ ಸ್ಮರಣೆಯೊಂದಿಗೆ ಶ್ರೀಗಳ ಶರೀರವನ್ನು ಶಿಖೀ(ಬುಟ್ಟಿ)ಯಲ್ಲಿ ಇರಿಸಿ ಪೇಜಾವರ ಮಠದ ಮುಖ್ಯ ದ್ವಾರದ ಮೂಲಕ ರಥಬೀದಿಯಲ್ಲಿ ಶ್ರೀಕೃಷ್ಣ ಮಠದ ಮುಖ್ಯ ದ್ವಾರಕ್ಕೆ ತರಲಾಯಿತು. 10.32ಕ್ಕೆ ಮಧ್ವಸರೋವರಕ್ಕೆ ತರಲಾಯಿತು. ವೇದ ಮಂತ್ರ ಹಾಗೂ ಗೋವಿಂದ ನಾಮ ಸ್ಮರಣೆಯೊಂದಿಗೆ ಶ್ರೀಪಾದರ ಶರೀರವನ್ನು ಮೂರು ಬಾರಿ ಸರೋವರದಲ್ಲಿ ಮುಳುಗಿಸಲಾಯಿತು. ಅನಂತರ ಶ್ರೀಕೃಷ್ಣ ಮಠದ ತೀರ್ಥಮಂಟಪದಲ್ಲಿ ಶ್ರೀಪಾದರನ್ನು ಕುಳ್ಳಿರಿಸಿ ತುಳಸಿ ಮಾಲೆ ಹಾಕಲಾಯಿತು. ಬಳಿಕ ಪಲಿಮಾರು ಶ್ರೀಪಾದರು ಅಗಲಿದ ಶ್ರೀಗಳ ಕೈಯಿಂದ ಶ್ರೀ ಕೃಷ್ಣನಿಗೆ ಆರತಿಯನ್ನು ಮಾಡಿಸಿದರು. ಸುಮಾರು 15 ನಿಮಿಷಗಳ ಕಾಲ ವೇದ ಮಂತ್ರ ಘೋಷ ನಡೆಯಿತು. ವಾದ್ಯ, ಶಂಖ, ಜಾಗಟೆ ನಾದದೊಂದಿಗೆ ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಸಹಿತ ರಥಬೀದಿಗೆ ಒಂದು ಸುತ್ತು ಹಾಕಲಾಯಿತು. ಅನಂತರ ಪಾರ್ಥಿವ ಶರೀರವನ್ನು ಅಜ್ಜರಕಾಡು ಮೈದಾನಕ್ಕೆ ಕಳುಹಿಸಲಾಯಿತು.
Related Articles
ಸಂತಾಪ ಸೂಚಕವಾಗಿ ಬೆಡಿ ಸಿಡಿಸಲಾಯಿತು ಹಾಗೂ ಶ್ರೀ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನ ಮೇಲ್ಭಾಗದಲ್ಲಿ ನಿರಂತರವಾಗಿ ನಗಾರಿ ಬಾರಿಸಲಾಯಿತು. ಹಿಂದಿನ ಕಾಲದಲ್ಲಿ ಶ್ರೀಗಳು ನಿರ್ಯಾಣ ಹೊಂದಿದರೆ ಸಾರ್ವಜನಿಕರಿಗೆ ಕೊಡುವ ಸೂಚನೆ ಇದಾಗಿತ್ತು. ರವಿವಾರ ಬೆಳಗ್ಗಿನಿಂದಲೇ ಮಠದ ಪರಿಸರದಲ್ಲಿ ನಿರಂತರ ನಗಾರಿ ಶಬ್ದ ಕೇಳಿಸುತ್ತಿತ್ತು.
Advertisement