Advertisement

ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಜೋರು

11:04 AM Dec 21, 2018 | |

ಬೆಂಗಳೂರು: ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಹಿಡಿದು ಪುನರ್ವಸತಿ ಕಲ್ಪಿಸುವಂತೆ ರಾಜ್ಯಪಾಲರ ಹೆಚ್ಚುವರಿ ಕಾರ್ಯದರ್ಶಿ (ಆಡಳಿತ) ಬಿಬಿಎಂಪಿಗೆ ಬರೆದಿರುವ ಪತ್ರ ಪಾಲಿಕೆಯ ಅಧಿಕಾರಿಗಳಿಗೆ
ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೆಕ್ಕುಗಳನ್ನು ಹಿಡಿಯದಿದ್ದರೆ ರಾಜ್ಯಪಾಲರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇನ್ನು ಬೆಕ್ಕು ಗಳನ್ನು ಹಿಡಿದು ಬೇರೆ ಕಡೆ ಬಿಡಲು ಹೋದರೆ ಪ್ರಾಣಿದಯಾ ಸಂಘಟನೆಗಳು ಪಾಲಿಕೆಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುತ್ತಾರೆ. ಆಹಿನ್ನೆಲೆಯಲ್ಲಿ ಬೆಕ್ಕುಗಳನ್ನು ಹಿಡಿಸಬೇಕೇ? ಬೇಡವೇ?
ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಿದೆ.

Advertisement

ರಾಜಭವನ ಉದ್ಯಾನದ ಹಿರಿಯ ತೋಟಗಾರಿಕೆ ನಿರ್ದೇಶಕರು ನೀಡಿರುವ ಪತ್ರವನ್ನು ಉಲ್ಲೇಖೀಸಿ ಪಾಲಿಕೆಯ ಪಾಶುಪಾಲನಾ ವಿಭಾಗದ ಜಂಟಿ ಆಯುಕ್ತರಿಗೆ ಹೆಚ್ಚುವರಿ ಕಾರ್ಯದರ್ಶಿ ಆರ್‌. ಪ್ರಭುಶಂಕರ್‌ ಅವರು ಪತ್ರ ಬರೆದಿದ್ದಾರೆ. ಅದರಂತೆ ಕೂಡಲೇ ಬೆಕ್ಕುಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ಪುನರ್ವಸತಿ ಕಲ್ಪಿಸುವಂತೆ ಕೋರಿದ್ದಾರೆ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ರಾಜಭವನ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಉದ್ಯಾನದಲ್ಲಿ 35ಕ್ಕೂ ಹೆಚ್ಚು ಬೆಕ್ಕುಗಳಿರುವುದು ಕಂಡುಬಂದಿದೆ. ಜತೆಗೆ ಕಬ್ಬನ್‌ ಉದ್ಯಾನ, ಇಂದಿರಾ ಗಾಂಧಿ ಕಾರಂಜಿ, ನೆಹರೂ ತಾರಾಲಯ, ವಿಧಾನಸೌಧ ಭಾಗಗಳಿಂದ ಬೆಕ್ಕುಗಳು ಬಂದಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಅದರಂತೆ ಉದ್ಯಾನದಲ್ಲಿರುವ ಇಲಿಗಳು ಹಾಗೂ ಪಾರಿವಾಳಗಳು ಬೆಕ್ಕುಗಳ ಆಹಾರವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಕ್ಕು ಹಿಡಿಯಲು ಆಯುಕ್ತರ ಮೊರೆ ಬೀದಿ ನಾಯಿಗಳನ್ನು ಹಿಡಿಯುವ ವಿಚಾರದಲ್ಲಿ ಪಶುಪಾಲನಾ ವಿಭಾಗದ ಅಧಿಕಾರಿಗಳ ವಿರುದ್ಧ ನಗರದ ವಿವಿಧ ಕಡೆಗಳಲ್ಲಿ ಪ್ರಾಣಿಪ್ರಿಯರು ದೂರು ದಾಖಲಿಸಿದ್ದಾರೆ. ಇದೀಗ ಮತ್ತೆ ಬೆಕ್ಕುಗಳನ್ನು ಹಿಡಿದರೆ ಕೇಸುಗಳು ದಾಖಲಾಗಬಹುದು ಎಂಬ ಭಯದಿಂದ ಬೆಕ್ಕುಗಳನ್ನು ಹಿಡಿಯಲು ಬಿಬಿಎಂಪಿ ಆಯುಕ್ತರ ಅನುಮತಿ ಪಡೆಯಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಆಯುಕ್ತರ ಅನುಮತಿ ಮೇರೆಗೆ ಬೆಕ್ಕುಗಳನ್ನು ಹಿಡಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.

ರಾಜಭವನದಲ್ಲಿರುವ ಬೆಕ್ಕುಗಳನ್ನು ಯಾರೂ ಸಾಕಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಬೆಕ್ಕುಗಳನ್ನು ಹಿಡಿದು
ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರೆ ಪ್ರಾಣಿದಯಾ ಸಂಘಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಹೀಗಾಗಿ ಪ್ರಾಣಿದಯಾ ಸಂಘಟನೆಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
 ಗಂಗಾಂಬಿಕೆ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next