Advertisement

ಕೊಡೇರಿಯಲ್ಲಿ ಬಾರ್‌ ಬೇಡ ಗ್ರಾಮಸ್ಥರ ಬೃಹತ್‌ ಪ್ರತಿಭಟನೆ

03:45 AM Jul 02, 2017 | Team Udayavani |

ಉಡುಪಿ: ಸುಪ್ರೀಂ ಕೋರ್ಟಿನ ಆದೇಶದಂತೆ ಕಿರಿಮಂಜೇಶ್ವರ ಗ್ರಾಮದ ನಾಗೂರಿನಲ್ಲಿದ್ದ ಬಾರ್‌ ಒಂದು ಅಲ್ಲಿಂದ ಸ್ಥಳಾಂತರಗೊಂಡು ಗಂಗೆಬೈಲು, ಹೊಸಹಿತ್ಲು, ಗಾಂಧಿ ನಗರದ ಮುಖ್ಯ ಸಂಪರ್ಕ ರಸ್ತೆಯಾದ ಕೊಡೇರಿಯಲ್ಲಿ ಆರಂಭವಾಗುವ ಮುನ್ಸೂಚನೆ ಸಿಕ್ಕಿದ್ದು, ಕೊಡೇರಿಯಲ್ಲಿ ತೆರೆಯುವುದನ್ನು ವಿರೋಧಿಸಿ ಸುಮಾರು 300 ಕ್ಕೂ ಅಧಿಕ ಗ್ರಾಮಸ್ಥರು ಉಡುಪಿಯ ಜಿಲ್ಲಾ ಅಬಕಾರಿ ಇಲಾಖೆಯ ಕಚೇರಿ ಎದುರು ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿದರು. 

Advertisement

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ತ್ರೀ  ಶಕ್ತಿ ಸಂಘ, ಸಿಂಗಾರ ಗರಡಿ ಹಾಗೂ ಕೇರಿ ಸ್ಥಳ ದೈವದ ಮನೆ ನಾಗೂರು, ಶ್ರೀ ರಾಮ ಭಜನಾ ಮಂದಿರ ಹೊಸಹಿತ್ಲು, ಶ್ರೀ ರಾಮ ಭಜನಾ ಮಂದಿರ ಗಂಗೇಬೈಲು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಅದಕ್ಕೂ ಮುನ್ನ ಮಣಿಪಾಲ ರಜತಾದ್ರಿಯಲ್ಲಿ ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಅವರಿಗೆ ಕೊಡೇರಿ ಭಾಗಕ್ಕೆ ಬಾರ್‌ಗೆ ಅನುಮತಿ ನೀಡದಂತೆ ಮನವಿ ಸಲ್ಲಿಸಲಾಯಿತು. ಉಡುಪಿ ಅಬಕಾರಿ ಇಲಾಖೆಯ ಉಪ ಅಧೀಕ್ಷಕರಿಗೂ ಮನವಿ ಸಲ್ಲಿಸಲಾಯಿತು. 

ರಾಷ್ಟ್ರೀಯ ಹೆದ್ದಾರಿಯಿಂದ 250 ಮೀ. ಒಳಗಿರುವ ಮದ್ಯದ ಅಂಗಡಿ ತೆರವು ಮಾಡಬೇಕು ಎಂದು ಸುಪ್ರೀಂಕೋರ್ಟಿನ ಆದೇಶವಿದ್ದು, ಜು. 1 ರಿಂದಲೇ ಆ ನಿಯಮ ಜಾರಿಗೆ ಬಂದಿರುತ್ತದೆ. ಈಗ ನಾಗೂರಿನಲ್ಲಿರುವ ಬಾರ್‌ ಕೊಡೇರಿ ಪ್ರದೇಶಕ್ಕೆ ಸ್ಥಳಾಂತರಿಸಲು ಈಗ ತಯಾರಿ ನಡೆಯುತ್ತಿದೆ. ಸ್ಥಳ ಪರಿಶೀಲನೆ ಸಹ ನಡೆಸಲಾಗಿದೆ. ಅದಲ್ಲದೆ ಕುಂದಾಪುರ ತಾಲೂಕಿನ ಅಬಕಾರಿ ಅಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
 
ಆ ಪ್ರದೇಶದಲ್ಲಿ ಮದ್ಯದ ಅಂಗಡಿ ಹಾಗೂ ಮಾಂಸಾಹಾರಿ ಅಂಗಡಿ ತೆರಯುವ ಸ್ಥಳದಿಂದ 20 ಮೀ. ಅಂತರದಲ್ಲಿ ದೈವಸ್ಥಾನವಿದೆ. 2-3 ದೇವಸ್ಥಾನಗಳು ಸಹ ಹತ್ತಿರದಲ್ಲಿವೆ. ಆ ರಸ್ತೆಯು ಕಿರಿದಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ತೆರಳಬೇಕಿದೆ. ಜನ ನಿಬಿಡ ಪ್ರದೇಶವಾಗಿರುವುದರಿಂದ ಕುಡಕರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಕೊಡೇರಿ ಬಂದರಿನ ಮೀನುಗಾರಿಕಾ ವಹಿವಾಟು ಇದೇ ರಸ್ತೆಯಲ್ಲಿ ನಡೆಯುವುದರಿಂದ ಸಮಸ್ಯೆಗಳಾಗಲಿವೆೆ. ಗ್ರಾ. ಪಂ. ಸಹ ಬಾರ್‌ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದು ಗ್ರಾ.ಪಂ. ಸದಸ್ಯ ರಮೇಶ್‌ ಖಾರ್ವಿ ಹೇಳಿದರು. 

ಮನವಿ ಸ್ವೀಕರಿಸಿ ಮಾತನಾಡಿದ ಉಡುಪಿ ಅಬಕಾರಿ ಉಪ ಅಧೀಕ್ಷಕ ವಿನೋದ್‌ ಕುಮಾರ್‌ ಬಾರ್‌ ಸ್ಥಳಾಂತರ ಸಂಬಂಧಪಟ್ಟ ಇಲಾಖೆಗೆ ಯಾವುದೇ ಅರ್ಜಿ ಬಂದಿಲ್ಲ. ಬಂದರೆ ಪರಿಶೀಲಿಸಿ, ಜನರಿಗೆ ತೊಂದರೆಯಾಗದ ರೀತಿಯಲ್ಲಿ  ಕ್ರಮಕೈಗೊಳ್ಳುತ್ತೇವೆ ಎಂದರು. 

ಗ್ರಾಮಾಭಿವೃದ್ಧಿ ಯೋಜನೆಯ ಸೀತಾ ಮೊಗವೀರ, ಸವಿತಾ ಖಾರ್ವಿ, ಸ್ತ್ರೀ ಶಕ್ತಿ ಸಂಘದ ಲಕ್ಷ್ಮೀ, ಸುಶೀಲಾ, ಶ್ರೀರಾಮ ಭಜನಾ ಮಂದಿರ ಗಂಗೇಬೈಲು ಹಾಗೂ ಹೊಸಹಿತ್ಲುವಿನ ಮಂಜುನಾಥ್‌ ಖಾರ್ವಿ, ಚಂದ್ರಕಾಂತ್‌, ವೆಂಕಟೇಶ್‌ ಪೂಜಾರಿ, ರಾಜ ಮೊಗವೀರ, ಶ್ರೀ ಕೇರಿಸ್ಥಳ ದೈವದ ಮನೆ ನಾಗೂರಿನ ಸಂತೋಷ್‌, ಅಶೋಕ್‌ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next