Advertisement

ಕಾಶ್ಮೀರದ ಇಂಚಿಂಚು ಭೂಮಿ ನಮ್ಮದು

12:22 AM Sep 25, 2019 | Team Udayavani |

ಬೆಂಗಳೂರು: ಕಾಶ್ಮೀರದ ಇಂಚಿಂಚು ಭೂಮಿ ನಮ್ಮದು. ಈ ವಿಚಾರದಲ್ಲಿ ನೆರೆ- ಹೊರೆ ದೇಶಗಳು ಮೂಗು ತೂರಿಸುವ ಅವಶ್ಯಕತೆಯಿಲ್ಲ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ. ಮಂಗಳವಾರ ವಿಜಯ ಕಾಲೇಜಿನಲ್ಲಿ ಬಿ.ಎಚ್‌.ಎಸ್‌. ಹೈಯರ್‌ ಎಜುಕೇಷನ್‌ ಸೊಸೈಟಿ ಹಮ್ಮಿ ಕೊಂಡಿದ್ದ “ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಕೂಡ ಇತರ ದೇಶಗಳ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.

Advertisement

ಅದೇ ರೀತಿಯಲ್ಲಿ ನಮ್ಮ ನೆರೆ- ಹೊರೆ ದೇಶಗಳು ಕೂಡ ಇದೇ ಮಾರ್ಗವನ್ನು ಅನುಸರಿಸುವುದು ಉತ್ತಮ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. 370ನೇ ವಿಧಿ ರದ್ದತಿ ರಾಷ್ಟ್ರೀಯ ವಿಚಾರವಾಗಿದೆ. ಇದನ್ನು ಯಾರು ರಾಜಕೀಯ ವಿಚಾರಕ್ಕೆ ಬಳಕೆ ಮಾಡಿ ಕೊಳ್ಳಬಾರದು. ಆದರೆ ಇತಿಹಾಸದ ಬಗ್ಗೆ ಅರಿವಿಲ್ಲದವರು ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಹಲವು ವಿಚಾರಗಳಲ್ಲಿ ವಿಶ್ವವೇ ಭಾರತದತ್ತ ದಿಟ್ಟಿಸಿ ನೋಡುತ್ತಿದೆ. ಸಣ್ಣ, ಸಣ್ಣ ದೇಶಗಳು ಕೂಡ ಭಾರತದೊಂದಿಗೆ ಸಂಬಂಧ ಹೊಂದಲು ಹವಣಿಸುತ್ತಿವೆ. ಮುಂದಿನ ದಿನಗಳಲ್ಲಿ ಆರ್ಥಿಕ ಕ್ಷೇತ್ರದಲ್ಲೂ ಭಾರತ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದರು.

ಭಾರತದಲ್ಲಿ ಶೇ.65 ರಷ್ಟು ಯುವ ಸಮುದಾಯದವರಿದ್ದಾರೆ. ಯುವ ಭಾರತವನ್ನು ಕೇಂದ್ರೀಕರಿಸಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ, ಸ್ವಚ್ಛ್ ಭಾರತ್‌, ಫಿಟ್‌ ಇಂಡಿಯಾ ಸೇರಿದಂತೆ ಹಲವು ಅನುಪಮ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಯುವಕರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸುತ್ತಿರುವುದು ಸ್ವಾಗತಾರ್ಹ ವಿಚಾರ ಎಂದರು.

ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಪರಿಸ್ಥಿತಿ ನಿರ್ಮಾಣ: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಕಲಿಯುತ್ತಿದ್ದು, ಇದು ಆರೋಗ್ಯಕರವಾದ ಬೆಳವಣಿಗೆಯಲ್ಲ. ಶಿಕ್ಷಣ ಹಲವು ಕೌಶಲ್ಯಗಳನ್ನು ಕಲಿಸಿಕೊಡಲಿದ್ದು ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಪರಿಸ್ಥಿತಿ ದೂರ ಮಾಡಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಹಲವು ರೀತಿಯ ಬದಲಾವಣೆಯಾಗಬೇಕಾಗಿದ್ದು, ಗುರುಕುಲ ಪದ್ಧತಿಯನ್ನು ಮತ್ತೆ ಹುಟ್ಟು ಹಾಕಬೇಕಾ ಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ನುಡಿದರು.

Advertisement

ಹಳ್ಳಿಗಳತ್ತ ಮುಖ ಮಾಡಬೇಕು: ಹಳ್ಳಿಗಳು ಬೆಳವಣಿಗೆ ಸಾಧಿಸಿದರೆ ಮಾತ್ರ ದೇಶ ಬೆಳವಣಿಗೆ ಸಾಧ್ಯ ಎಂದು ಮಹಾತ್ಮಗಾಂಧೀಜಿ ಅವರು ಹೇಳಿದ್ದಾರೆ. ಶಿಕ್ಷಣ ಕ್ಷೇತ್ರ ಕೂಡ ಪ್ರಬಲವಾದ ಆಯುಧವಾಗಿದ್ದು, ಶಿಕ್ಷಣ ಸಂಸ್ಥೆಗಳು ಕೂಡ ಕೇವಲ ನಗರ, ಪಟ್ಟಣ್ಣ ಪ್ರದೇಶವನ್ನು ಕೇಂದ್ರೀಕರಿಸದೆ ಹಳ್ಳಿಗಳತ್ತ ಮುಖ ಮಾಡಬೇಕು ಎಂದು ಮನವಿ ಮಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಿ.ಎಚ್‌.ಎಸ್‌. ಹೈಯರ್‌ ಎಜುಕೇಷನ್‌ ಸೊಸೈಟಿಯನ್ನು ಹಲವು ವರ್ಷಗಳಿಂದ ಭಲ್ಲೆ.

ಬೆಂಗಳೂರು ದಕ್ಷಿಣ ಭಾಗದಲ್ಲಿ ಹಲವು ಶೈಕ್ಷಣಿಕ ಕಾಲೇಜುಗಳನ್ನು ತೆರೆದಿರುವ ಈ ಸಂಸ್ಥೆ, ಹಳ್ಳಿಗಾಡು ಪ್ರದೇಶ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಶಾಲೆಯನ್ನು ಸ್ಥಾಪನೆ ಮಾಡಿರುವುದು ಸಂತಸ ವಿಚಾರ ಎಂದರು. ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಬಿ.ಎಚ್‌.ಎಸ್‌.ಹೈಯರ್‌ ಎಜುಕೇಷನ್‌ ಸೊಸೈಟಿಯ ಬೆಳವಣಿಗೆಗೆ ಹಲವರು ಕೊಡುಗೆ ನೀಡಿದ್ದಾರೆ.ಇಂತಹ ಶಿಕ್ಷಣ ಸಂಸ್ಥೆಯಲ್ಲಿ ನಾನು ಕಾನೂನು ಶಿಕ್ಷಣ ಪೂರೈಸಿರುವುದು ಸಂತಸ ನೀಡಿದೆ ಎಂದು ಹೇಳಿದರು.

ಸಂಸದ ಪಿ.ಸಿ.ಮೋಹನ್‌, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಬಿ.ಎಚ್‌.ಎಸ್‌.ಹೈಯರ್‌ ಎಜುಕೇಷನ್‌ ಸೊಸೈಟಿಯ ಅಧ್ಯಕ್ಷ ಜಿ.ವಿ.ವಿಶ್ವನಾಥ್‌, ಸಂಸ್ಥೆಯ ಉಪಾಧ್ಯಕ್ಷ ಎನ್‌.ವಿ.ಭಟ್‌, ಡಾ.ಕೆ.ಎಸ್‌.ಸಮೀರ ಸಿಂಹ, ಡಾ.ಎ.ಕೆ.ಅತ್ರೆ, ಡಾ. ಆರ್‌.ವಿ.ಪ್ರಭಾಕ್‌ ಇದ್ದರು.

ರಾಗಿ ಮುದ್ದೆ- ಬಸ್ಸಾರು ಸೇವಿಸಿ: ಯುವ ಸಮೂಹ ದೇಶಿಯ ಆಹಾರ ಶೈಲಿಗೆ ಹೆಚ್ಚು ಒತ್ತು ನೀಡಬೇಕು. ಫೀಜಾ-ಬರ್ಗರ್‌ ಸಂಸ್ಕೃತಿಗೆ ಮಾರು ಹೋಗದೇ ರಾಗಿ ಮುದ್ದೆ-ಬಸ್ಸಾರು, ಬೆಳೆ ಸಾರು, ಇಡ್ಲಿ, ದೋಸೆಗಳನ್ನು ಸೇವಿಸುವುದನ್ನು ಕಲಿಯಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next