ಮಡಿಕೇರಿ/ ಸುಬ್ರಹ್ಮಣ್ಯ: ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ ಸೋಮವಾರ ಮಧ್ಯಾಹ್ನ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ.
ಸುಂಟಿಕೊಪ್ಪ ಪರಿಸರದಲ್ಲಿ ಭೂಕಂಪನದಿಂದ ಕೆಲವು ಮನೆಗಳಲ್ಲಿ ಪಾತ್ರೆ, ಮಂಚ, ಕುರ್ಚಿ, ಮೇಜು ಹಾಗೂ ಇನ್ನಿತರ ವಸ್ತುಗಳು ಅಲುಗಾಡಿವೆ. ಗುಡುಗಿನಂತಹ ಶಬ್ದದೊಂದಿಗೆ ಭೂಮಿ ಕಂಪಿಸಿದ್ದರಿಂದ ಜನ ಭಯ ಭೀತರಾದರು. ಕಲ್ಲೂರಿನ ಗ್ರಾಮಸ್ಥರು ಮಳೆಯ ನಡುವೆಯೇ ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಮಿ ಕಂಪಿಸಿದ್ದರಿಂದ ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದಲ್ಲಿ ಬರೆಯ ಮೇಲಿದ್ದ ದೊಡ್ಡ ಕಲ್ಲೊಂದು ಕೆಳಭಾಗದ ನಿರ್ಜನಕ್ಕೆ ಪ್ರದೇಶಕ್ಕೆ ಬಿದ್ದಿದೆ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ತಿಳಿಸಿದ್ದಾರೆ.
ಕಂಪನ ದಾಖಲಾಗಿಲ್ಲ: ಕೊಡಗು ಜಿಲ್ಲೆಯಲ್ಲಿ ಕಂಡುಬಂದ ಭೂಕಂಪನ ಪ್ರಮಾಣ 1 ಮ್ಯಾಗ್ನಿಟ್ಯೂಡ್‌ಗಿಂತ ಕಡಿಮೆ ಇರುವುದರಿಂದ ಭೂಕಂಪನದ ತೀವ್ರತೆ ಮಾಪಕದಲ್ಲಿ ದಾಖಲಾಗಿಲ್ಲ.
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಇಂತಹ ಘಟನೆ ಸಂಭವಿಸಿರುವ ಸಾಧ್ಯತೆ ಇದ್ದು, ಅನಾಹುತಗಳಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಷ್ಮಾ ಸ್ಪಷ್ಟಪಡಿಸಿದ್ದಾರೆ.
ಕಂಪನದ ಜತೆಗೆ ಗುಡುಗಿನ ಸದ್ದು: ಸುಬ್ರಹ್ಮಣ್ಯದಲ್ಲೂ ಭೂಮಿ ಕಂಪಿಸಿದ ಅನುಭವ ಹಲವು ಕಡೆ ಆಗಿದೆ. ಗಡಿಭಾಗ ಪುಷ್ಪಗಿರಿ ತಪ್ಪಲಿನ ಜನವಸತಿ ಪ್ರದೇಶಗಳಲ್ಲಿ ತುಸು ಹೆಚ್ಚು ಅನುಭವವಾಗಿದೆ.