Advertisement

ಭೂದಾನ ಚಳವಳಿ-ಭೂ ಮಸೂದೆ ಕಾನೂನು

11:49 PM Mar 18, 2022 | Team Udayavani |

ಭೂದಾನ ಚಳವಳಿಯೂ ಭೂ ಸುಧಾರಣ ಕಾಯಿದೆಯೂ ಮೇಲ್ನೋಟಕ್ಕೆ ರೈತ ಪರ ಗುರಿ ಇರಿಸಿಕೊಂಡು ನಡೆಯಿತಾದರೂ ಮಾರ್ಗ ಭಿನ್ನ. ಭೂದಾನ ಚಳವಳಿ ಗಾಂಧೀ ಪ್ರಣೀತವಾದರೆ, ಭೂಸುಧಾರಣ ಕಾಯಿದೆ ಅಧಿಕಾರ ಬಲ ಪ್ರಣೀತ.

Advertisement

ಭಾರತೀಯ ಸಂಸ್ಕೃತಿಯಲ್ಲಿ ಭೂದಾನಕ್ಕೆ ಬಹಳ ಮಹತ್ವವಿದೆ. ಇದನ್ನೇ ಶಾಸ್ತ್ರ ಜ್ಞರೂ ಆದ ವಿನೋಬಾ ಭಾವೆ ಆಂದೋಲನ ನಡೆಸಿದರೆನ್ನಬಹುದು. ಭೂಮಿ ಉಳ್ಳವರು ಸ್ವಯಂ ಇಚ್ಛೆಯಿಂದ ತಮಗೆ ಹೆಚ್ಚಿಗೆಯಾದ ಭೂಮಿಯನ್ನು ಭೂರಹಿತರ ಜೀವನೋಪಯೋಗಕ್ಕಾಗಿ ನೀಡುವ ಆಂದೋಲನವಿದು.

ಭೂದಾನಕ್ಕೆ 70, ಮಸೂದೆಗೆ 50 ವರ್ಷ: 18.04.1951ರಲ್ಲಿ ಇದರ ಪ್ರಥಮ ಯಶಸ್ಸು ಕಂಡದ್ದು ಈಗಿನ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಪೋಚಂಪಳ್ಳಿ ಗ್ರಾಮದಲ್ಲಿ. ಕರ್ನಾಟಕದಲ್ಲಿ ಭೂಸುಧಾರಣ ಕಾಯಿದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡದ್ದು 01.04.1974ರಲ್ಲಿ. ಭೂದಾನ ಚಳವಳಿ ಆರಂಭವಾಗಿ 70 ವರ್ಷವಾದರೆ, ಭೂಸುಧಾರಣ ಕಾಯಿದೆ ಜಾರಿಯಾಗಿ 50 ವರ್ಷ ಸಮೀಪಿಸುತ್ತಿದೆ.

ನಲಗೊಂಡ ಜಿಲ್ಲೆ ಕಮ್ಯುನಿಸ್ಟ್‌ ಚಳವಳಿ ಕೇಂದ್ರವಾಗಿತ್ತು. ಸ್ಥಳೀಯ ಭೂಮಾಲಕರಿಗೂ ಬೇಸಾಯಗಾರರಿಗೂ ಘರ್ಷಣೆ ನಡೆದಿತ್ತು. ಪೋಚಂಪಳ್ಳಿ ಗ್ರಾಮದ ದಲಿತರ ಕಾಲನಿಗೆ ಭಾವೆ ಭೇಟಿ ನೀಡಿದಾಗ ದಲಿತರು 40 ಕುಟುಂಬಗಳಿಗೆ 80 ಎಕ್ರೆ ಭೂಮಿಯನ್ನು ಕೇಳಿದರು. “ಸರಕಾರದಿಂದ  ಸಾಧ್ಯವಾಗದೆ ಇದ್ದರೆ ಗ್ರಾಮಸ್ಥರೇ ಪರಿಹಾರ ಕಂಡುಕೊಳ್ಳಲು ಸಾಧ್ಯವೆ?’ ಎಂದು ಭಾವೆ ಪ್ರಶ್ನಿಸಿದರು. ಭೂಮಾಲಕ ವಿ.ರಾಮಚಂದ್ರ ರೆಡ್ಡಿ  100 ಎಕ್ರೆ ನೀಡುತ್ತೇನೆ ಎಂದಾಗ ಈ ಮಾರ್ಗ ಅತ್ಯುತ್ತಮ ಎಂದು ಭಾವೆಯವರಿಗೆ ಅನಿಸಿತು.

ಭಾವೆಯವರ ಪೂರ್ಣ ಹೆಸರು ವಿನಾಯಕ ನರಹರಿ ಭಾವೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಜನಿಸಿದ ಭಾವೆಯವರ ಮಾತೃಭಾಷೆ ಮರಾಠಿಯಾದರೂ ತಾಯಿ ರುಕ್ಮಿಣಿ ದೇವಿ ಕರ್ನಾಟಕದವರು.

Advertisement

1916ರಲ್ಲಿ ಗಾಂಧೀಜಿಯವರು ಬನಾರಸ್‌ ಹಿಂದು ವಿ.ವಿ.ಯಲ್ಲಿ ಮಾಡಿದ ಉದೊºàಧಕ ಭಾಷಣವನ್ನು ಪತ್ರಿಕೆಗಳಲ್ಲಿ ಓದಿ ಪ್ರಭಾವಿತರಾದ ಭಾವೆ 1918ರಲ್ಲಿ ಬ್ರಿಟಿಷ್‌ ಪ್ರಣೀತ ಶಿಕ್ಷಣವನ್ನು ಧಿಕ್ಕರಿಸಿ ಶಾಲಾ ದಾಖಲೆಗಳನ್ನು ಸುಟ್ಟರು. ಅನಂತರ ಗಾಂಧೀಜಿಯವರ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ‌ರು.

ಅಧಿಕಾರವಿಲ್ಲದೆಯೂ ಸಾಧನೆ: ಗಾಂಧೀಜಿಯವರ ನಿಧನಾನಂತರ ಸರ್ವೋದಯ ಚಳವಳಿಯನ್ನು ಗಟ್ಟಿಗೊಳಿಸಲು ಮಾರ್ಚ್‌ನಲ್ಲಿ ನಡೆದ ಸರಣಿ ಸಭೆಗಳಲ್ಲಿ ಭಾವೆ ಮುಂಚೂಣಿಯಲ್ಲಿದ್ದರು. ಸುಮಾರು 2 ದಶಕ ದೇಶಾದ್ಯಂತ ಪಾದಯಾತ್ರೆ ನಡೆಸಿದ ಭಾವೆ ಕರ್ನಾಟಕದಲ್ಲಿಯೂ ಪ್ರವಾಸ ನಡೆಸಿ ಭೂಮಾಲಕರಿಂದ ದಾನ ಪಡೆದು ಭೂರಹಿತರಿಗೆ ಹಂಚಿದ್ದರು. ಸ್ವಾತಂತ್ರ್ಯ ನಂತರ ಯಾವುದೇ ಅಧಿಕಾರ ಬಲ್ಲವಿಲ್ಲದೆ ಸುಮಾರು 40 ಲಕ್ಷ ಎಕ್ರೆ ಭೂಮಿಯನ್ನು ಉಳ್ಳವರಿಂದ ಪಡೆದು ಭೂರಹಿತರಿಗೆ ನೀಡಿದ್ದರು. ಇವರಿಂದ ಪ್ರೇರಿತನಾದ ಬ್ರಿಟಿಷ್‌ ಕೈಗಾರಿಕೋದ್ಯಮಿ ಅರ್ನೆಸ್ಟ್‌ ಬಾರ್ಡರ್‌ ತನ್ನ ಕಂಪೆನಿಯ ಶೇ.90 ಶೇರುಗಳನ್ನು ಸಂಸ್ಥೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ನೀಡಿದ್ದ.

ಭಾವೆ ಏಕೆ ಪ್ರಸ್ತುತ?: ವೇದೋಪನಿಷತ್ತು, ಭಗವದ್ಗೀತೆಯ ಮೇಲೆ ಅಧಿಕಾರವಾಣಿಯಿಂದ ಮಾತನಾಡುತ್ತಿದ್ದ ಭಾವೆಯವರು “ದಿ ಎಸೆನ್ಸ್‌ ಆಫ್ ಕುರಾನ್‌’ ಕೃತಿಯನ್ನೂ ರಚಿಸಿದ್ದರು. ಭಾರತ್‌ ಮಾತಾ ಕೀ ಜೈ, ಜೈ ಕನ್ನಡಾಂಬೆ, ಜೈ ಕರ್ನಾಟಕ, ಜೈ ಹಿಂದ್‌ ಎಂಬಿತ್ಯಾದಿ ಘೋಷಣೆಯಂತೆ ಭಾವೆ ಭಾಷಣದ ಕೊನೆಯಲ್ಲಿ “ಜೈ ಜಗತ್‌’ ಎನ್ನುತ್ತಿದ್ದರು. ಈಶಾವಾಸ್ಯ ಉಪನಿಷತ್ತಿನಲ್ಲಿ ಬರುವ ತೇನತ್ಯಕ್ತೇನ ಭುಂಜಿತಾಃ… ಎಂಬ ಉಕ್ತಿಯು ಭೂದಾನ ಚಳವಳಿ ಹಿಂದಿನ ಪ್ರೇರಕ ಶಕ್ತಿಯಾಗಿತ್ತು.  ಭಗವಂತ ಬೌದ್ಧರಿಗೆ ಬುದ್ಧ, ನಾಥರಿಗೆ ಸಿದ್ಧ, ಮುಸ್ಲಿಮರಿಗೆ ರಹೀಮ, ಕ್ರೈಸ್ತರಿಗೆ ಏಸುಪಿತಾಪ್ರಭು, ಹಿಂದೂಗಳಿಗೆ ನಾರಾಯಣ, ಶಿವ, ವಿನಾಯಕ ಹೀಗೆ “ತತ್‌ಸತ್‌’ ನೀತಿಯನುಸಾರ ವ್ಯಾಖ್ಯಾನಿಸುತ್ತಿದ್ದ ಭಾವೆ ಇಂದು ಹಿಂದೆಂದಿಗಿಂತ ಹೆಚ್ಚು ಪ್ರಸ್ತುತರಾಗುತ್ತಾರೆ. ಸನಾತನ ಧರ್ಮದ ಸಾರವನ್ನು ಅರಿತಿದ್ದ ಭಾವೆ, ತಾಯಿಯ ಅಸ್ಥಿ ವಿಸರ್ಜನೆ ಮಾಡುವಾಗ ನೀರಿನ ಬದಲು ಭೂಮಿಯಲ್ಲಿ ಮಾಡಿದ್ದು “ಭೂತಾಯಿ’, “ಭೂದಾನ’ಕ್ಕೆ ಕೊಟ್ಟ ಮಹತ್ವವನ್ನು ಸಾರುತ್ತದೆ.

ಭಿನ್ನ ಮುಖಗಳು:  ಭೂ ಸುಧಾರಣೆ ಕಾಯಿದೆಯೂ ರೈತರು, ಭೂರಹಿತರನ್ನು ಬಲಪಡಿಸುವಂಥದ್ದೆ. ಆದರೆ ಭೂದಾನ ಚಳವಳಿ ಸೌಹಾರ್ದವಾಗಿದ್ದರೆ, ಭೂಸುಧಾರಣ ಕಾಯಿದೆ ಈ ಸ್ವರೂಪದ್ದಾಗಿರಲಿಲ್ಲ ಎನ್ನುವುದು ಸ್ಪಷ್ಟ. ಗಾಂಧೀಜಿ ಕಾನೂನಿನ ಬಲವನ್ನು ನೆಚ್ಚಿಕೊಳ್ಳದೆ ಜನರ ಮನಃಪರಿವರ್ತನೆಯಿಂದ ಆಗಗೊಳಿಸಲು ಆದ್ಯತೆ ಕೊಡುತ್ತಿದ್ದರು. ಈ ಮಾರ್ಗದಲ್ಲಿ ಭಾವೆ ನಡೆದರು.

ಕರ್ನಾಟಕದಲ್ಲಿ ಭೂಮಸೂದೆ ಕಾಯಿದೆಯನ್ನು 01.04.1974ರಲ್ಲಿ ಮುಖ್ಯಮಂತ್ರಿ ದಿ| ದೇವರಾಜ ಅರಸು ಅವರು ಜಾರಿಗೆ ತಂದ ಬಳಿಕ ರಾಜ್ಯದಲ್ಲಿ ಸುಮಾರು 4.89 ಲಕ್ಷ ಎಕ್ರೆ ಭೂ ವ್ಯಾಪ್ತಿಯ 9.67 ಲಕ್ಷ ಅರ್ಜಿ ಸ್ವೀಕರಿಸಿ 4.79 ಲಕ್ಷ ಎಕ್ರೆ ವ್ಯಾಪ್ತಿಯ 9.32 ಲಕ್ಷ ಅರ್ಜಿಗಳನ್ನು ವಿಲೇವಾರಿಗೊಳಿಸಲಾಗಿದೆ. ಅರ್ಜಿದಾರರ ಪರವಾಗಿ 5.13 ಲಕ್ಷ ಅರ್ಜಿ ವಿಲೇವಾರಿಯಾದರೆ 4.19 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಯಿತು. ಇನ್ನೂ ಸುಮಾರು 1 ಲಕ್ಷ ಎಕ್ರೆ ಜಮೀನಿನ 34,744 ಅರ್ಜಿಗಳು ಬಾಕಿ ಇವೆ. ಭೂದಾನ ಚಳವಳಿಯಲ್ಲಿ ಗ್ರಾಮಸ್ಥರ ಸಮ್ಮುಖವೇ ಭೂಮಿ ಹಂಚಿಕೆ ನಡೆಯುತ್ತಿದ್ದರೆ ಕಾನೂನು ಬಲದಲ್ಲಿ ಸಲ್ಲಿಸಿದ ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಉಳಿದಿವೆ ಅಂದರೆ ಭಾವೆ ಮಾರ್ಗ ಎಷ್ಟು ಸೂಕ್ತ ಎಂದು ಅರಿಯಬಹುದು. ಈ ಕಾನೂನಿನಿಂದ ಕೃಷಿ ಕ್ಷೇತ್ರವಾದರೂ ಬಲಗೊಂಡಿತೆ ಎಂಬ ಪ್ರಶ್ನೆಗೆ ಉತ್ತರ ಎಲ್ಲರಿಗೂ ಗೊತ್ತಿದೆ. ಕಾನೂನು ಮಾರ್ಗ ಶೇ.100 ಪರಿಪೂರ್ಣವಾಗಲು ಸಾಧ್ಯವಿಲ್ಲ ಎನ್ನುವುದು ನಮಗೆ ನಿತ್ಯ ಅನುಭವಸಿದ್ಧವಾಗುತ್ತವೆ.

ಭೂಮಸೂದೆ ಕಾನೂನು ಜಾರಿಯಾದಾಗ ಶೇ.1ರಷ್ಟೂ ತಗಾದೆ ತೆಗೆಯದೆ ಗೇಣಿದಾರರಿಗೆ ಭೂಮಿಯನ್ನು ಬಿಟ್ಟುಕೊಟ್ಟ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಅದಕ್ಕೂ ಹಿಂದೆ ಭಾವೆಯವರನ್ನು ಸೇಲಂನಲ್ಲಿ ಭೇಟಿಯಾಗಿ “ಭೂದಾನ ಆಂದೋಲನವು ಮಹಾಭಾರತದ ನೀತಿಯನುಸಾರವಾಗಿದೆ’ ಎನ್ನುವುದನ್ನು ತಿಳಿಸಿದ್ದರು. ಮನಃಪರಿವರ್ತನೆ ಮತ್ತು ಕಾನೂನು ಜಂಟಿಯಾದಾಗ ಶೇ.100 ಯಶಸ್ಸು ಆಗಬಹುದು. ಅಧಿಕಾರದ ದರ್ಪ, ಕಾನೂನು ಬಲದಿಂದ ಮಾಡುವ ಕೆಲಸಕ್ಕಿಂತ ಸ್ವಯಂಪ್ರೇರಣೆಯಿಂದ ಮನಸಾರೆ ಮಾಡುವುದು ಪರಿಣಾಮಕಾರಿ ಎನ್ನುವುದಂತೂ ಶತಃಸಿದ್ಧ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next