Advertisement

ಬಸ್ರೂರು: ಕೆರೆಗಳಿದ್ದರೂ ಪ್ರಯೋಜನಕ್ಕಿಲ್ಲ

10:10 PM Feb 09, 2020 | Sriram |

ಬಸ್ರೂರು: ಐತಿಹಾಸಿಕ ನಗರವಾಗಿರುವ ಇಲ್ಲಿ ಹಲವು ಕೆರೆಗಳು ಇದ್ದು, ಬೇಸಗೆಯಲ್ಲಿ ಸಮೃದ್ಧ ನೀರು ಕೊಡ ಬಹುದಾಗಿದ್ದರೂ ಪಾಳು ಬಿದ್ದಿರುವುದರಿಂದ ಪ್ರಯೋಜನಕ್ಕಿಲ್ಲದಾಗಿದೆ.

Advertisement

ಬಸ್ರೂರಿನ ಏಳು ಕೆರೆಗಳು
ಬಸ್ರೂರಿನಲ್ಲಿ ಪ್ರಾಚೀನ ಕಾಲದಿಂದಲೂ ಏಳು ಕೇರಿಗಳು ಮತ್ತು ಏಳು ಕೆರೆಗಳು ಇದ್ದವು. ಈಗಲೂ ಏಳು ಕೇರಿಗಳಿವೆ. ಅಂತೆಯೇ ಏಳು ಕೆರೆಗಳೂ ಉಳಿದುಕೊಂಡಿವೆ.ದೇವರ ಕೆರೆ, ಹಲವರ ಕೆರೆ, ಮೂಡುಕೇರಿ ಕೆರೆ, ಪಳ್ಳಿ ಕೆರೆ, ಮಠದ ಕೆರೆ, ಗದ್ದೆ ಮನೆ ಕೆರೆ ಮತ್ತು ಚಿಲುಮೆ ಕೆರೆಗಳೆಂಬ ಹೆಸರು ಇದಕ್ಕಿದ್ದು ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಕಲ್ಮಶವಾದ ಕೆರೆಗಳು
ಇಲ್ಲಿನ ಬಹುತೇಕ ಕೆರೆಗಳು ಪಾಳುಬಿದ್ದಿದ್ದು ಬಳಕೆಗೆ ಲಭ್ಯವಿಲ್ಲ. ಕಳೆದ ವರ್ಷ ಬಸ್ರೂರು ಕೆಳಪೇಟೆಯ ಹಲವರ ಕೆರೆಯ ಸ್ವತ್ಛತೆಗೆ ಸ್ಥಳೀಯರಾದ ಬಿ.ನರಸಿಂಹರಾಜ ಪ್ರಭು ಮತ್ತು ಮಕ್ಕಳು ಮುಂದಾದರು. ಬಳಿಕ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅವರ ನಿರ್ದೇಶನದಂತೆ ಸಾರ್ವಜನಿಕರೂ ಸೇರಿಕೊಂಡು ಕೆರೆ ಹೂಳೆತ್ತಿದರು. ಈ ಕೆಲಸದ ಕಾರಣ ಕೆರೆಯಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ಬಳಕೆಗೆ ಲಭ್ಯವಾಗಿವೆ.

ಇತ್ತ ಉಳಿದ ಆರೂ ಕೆರೆಗಳ ಹೂಳೆತ್ತಲಾಗುವುದು ಎಂಬ ಸುದ್ದಿ ಸ್ಥಳೀಯಾಡಳಿತ ವಲಯದಿಂದ ಕೇಳಿಬರುತ್ತಿದ್ದರೂ ಅವುಗಳು ಹಾಗೆಯೇ ಇವೆ.

ಈಡೇರದ ಉದ್ದೇಶ
ಪ್ರಾಚೀನರು ಕೆರೆಗಳನ್ನು ನಿರ್ದಿಷ್ಟ ಉದ್ದೇಶ ಇಟ್ಟುಕೊಂಡೇ ಸ್ಥಾಪಿಸಿದ್ದರು. ಇವುಗಳ ಪಕ್ಕದಲ್ಲೇ ದೇಗುಲಗಳೂ ಇದ್ದು, ಇವುಗಳಿಗೆ ಅದರದ್ದೇ ಆದ ಐತಿಹ್ಯಗಳಿವೆ. ಆದರೆ ಕೆರೆಯಗಳ ಉದ್ದೇಶ ಈಗ ಈಡೇರದೆ ಹಾಳಾಗಿದೆ. ಹಲವರ ಕೆರೆ ಹೊರತುಪಡಿಸಿ ಎಲ್ಲ ಕೆರೆಗಳೂ ನಿರುಪಯುಕ್ತವಾಗಿವೆ.

Advertisement

ಹಣ ತೆಗೆದಿರಿಸಲಾಗಿದೆ
ಬಸ್ರೂರಿನ ಏಳು ಕೆರೆಗಳಲ್ಲಿ ಹಲವರ ಕೆರೆಯ ಅಭಿವೃದ್ಧಿಗೆ 14ನೇ ಹಣಕಾಸಿನ ಯೋಜನೆಯಡಿ ರೂ.2.30 ಲಕ್ಷವನ್ನು ತೆಗೆದಿರಿಸಲಾಗಿದೆ. ಉಳಿದ ಕೆರೆಗಳ ಅಭಿವೃದ್ಧಿಗಾಗಿ ಜಿ.ಪಂ.ನಿಂದ ನಿಧಿ ಕೇಳಲಾಗಿದೆ.
-ನಾಗರಾಜ ಗಾಣಿಗ,
ಅಧ್ಯಕ್ಷರು, ಬಸ್ರೂರು ಗ್ರಾ.ಪಂ.

ಉಪಯೋಗಕ್ಕೆ ಬಾರದ ಕೆರೆಗಳು
ಬಸ್ರೂರಿನಲ್ಲಿರುವ ಪ್ರಾಚೀನ ಕೆರೆಯಲ್ಲಿ ಒಂದನ್ನು ಹೊರತು ಪಡಿಸಿ ಉಳಿದ ಆರೂ ಕೆರೆಗಳ ನೀರನ್ನು ಯಾವ ಕೆಲಸಕ್ಕೂ ಉಪಯೋಗಿಸಲು ಸಾಧ್ಯವಿಲ್ಲವಾಗಿದೆ. ಇವುಗಳು ಇದ್ದೂ ಇಲ್ಲವಾಗಿದೆ.
-ನರಸಿಂಹ, ಬಸ್ರೂರು ನಿವಾಸಿ

ಪತ್ರ ಬರೆಯಲಾಗಿದೆ
ಪ್ರಸ್ತುತ ಸಾರ್ವಜನಿಕರ ನೆರವಿನೊಂದಿಗೆ ಕೆರೆಯೊಂದರಿಂದ ಹೂಳೆತ್ತಲಾಗಿದೆ. ಮೂಡುಕೇರಿ ಕೆರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಹಣ ಮಂಜೂರಾಗಿದೆ. ಉಳಿದ ಕೆರೆಗಳನ್ನು ಹೂಳೆತ್ತಿ ಶುದ್ಧ ನೀರನ್ನು ಬಳಸಲು ವಾರಾಹಿ ನೀರಾವರಿ ಯೋಜನೆ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಎಲ್ಲ ಕೆರೆಗಳಿಂದ ನೀರು ಲಭ್ಯವಾದರೆ ಬೇಸಗೆಯ ಬವಣೆ ತೀರಲಿದೆ.
– ಬಿ.ಅಪ್ಪಣ್ಣ ಹೆಗ್ಡೆ, ಧರ್ಮದರ್ಶಿ,
ಮಾಜಿ ಶಾಸಕರು ಬಸ್ರೂರು

-  ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next