Advertisement

ಕೆರೆ-ಹಳ್ಳ-ನದಿಯಲ್ಲಿ ನೀರು ಖಾಲಿ

05:36 PM Mar 25, 2019 | pallavi |

ಸೈದಾಪುರ: ಕಳೆದ ನಾಲ್ಕೈದು ವರ್ಷಗಳಿಂದ ನಿರೀಕ್ಷಿತ ಪ್ರಮಾಣದ ಮಳೆಯಾಗದ ಪರಿಣಾಮ ಬರಗಾಲ ಮುಂದುವರಿದಿದೆ. ಇದರಿಂದಾಗಿ ಇಲ್ಲಿನ ಜನರು ಮಹಾನಗರಗಳತ್ತ ಗುಳೆ ಹೋಗುತ್ತಿದ್ದಾರೆ.

Advertisement

ಗುರುಮಠಕಲ್‌ ಮತಕ್ಷೇತ್ರದ ಬಹುತೇಕ ಗ್ರಾಮಗಳ ರೈತರು ಕೃಷಿಗಾಗಿ ಮಳೆ ನೀರನ್ನೇ ಅವಲಂಬಿಸಿದ್ದಾರೆ. ಕೆರೆಗಳು ನೀರಿನ ಪ್ರಮುಖ ಆಧಾರಗಳಾಗಿವೆ. ಆದರೆ ಮೂರ್‍ನಾಲ್ಕು ವರ್ಷಗಳಿಂದ ಮಳೆ ಅಭಾವದಿಂದ ಕೆರೆ, ಹಳ್ಳಗಳು ಖಾಲಿಯಾಗಿ ನೆಲ ಬಿರುಕು ಬಿಟ್ಟಿದೆ.

ಕೆರೆ ತುಂಬಿದರೆ ಅದರ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತಿತ್ತು. ಆದರೆ ಮಳೆಯಿಲ್ಲದೆ
ಕೆರೆ, ಕುಂಟೆ, ಹಳ್ಳಗಳು ಬತ್ತಿದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳಲ್ಲೂ ಅಂತರ್ಜಲದ ಕೊರತೆ ಉಂಟಾಗಿದೆ ಎಂದು ರೈತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷದ ಮುಂಗಾರು ವಿಳಂಬವಾದ ಕಾರಣ ಹೆಸರು ಬೆಳೆ ಕೈತಪ್ಪಿತು. ನಂತರದಲ್ಲಿ ಹತ್ತಿ, ತೊಗರಿ
ಬೆಳೆಗಳಿಗೂ ತೇವಾಂಶದ ಕೊರತೆ ಎದುರಾಗಿ ನಿರೀಕ್ಷಿತ ಪ್ರಮಾಣದ ಫಸಲು ಕೈ ತಲುಪಲಿಲ್ಲ. ಆದರೆ ಇದೀಗ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಹೆಚ್ಚಾಗಿದೆಯಾದರೂ ಕೃಷಿಕರಿಗೆ ವರದಾನವಿಲ್ಲದಂತಾಗಿದೆ. ಕಳೆದ ವರ್ಷದಂತೆ ಈ ಸಲ ಫಸಲು ಬಂದಿದ್ದರೆ ಸಾಲದಿಂದ ಮುಕ್ತಿ ಪಡೆಯುತ್ತಿದ್ದೇವು ಎನ್ನುತ್ತಾರೆ ರೈತರು. ಕೆರೆ ನೀರಿನಿಂದ ಭತ್ತದ ನಾಟಿ ಮಾಡಿ ಉತ್ತಮ ಫಸಲು ಪಡೆಯಬೇಕು ಎಂಬ ಮಹದಾಸೆ ಹೊಂದಿರುವ ರೈತರಿಗೆ ಸಕಾಲಕ್ಕೆ ಮಳೆ ಬಾರದಿರುವುದು ಗುಳೆ ಹೋಗುವಂತೆ ಮಾಡಿದೆ.
ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾದರೆ ಭೀಮಾ ಮತ್ತು ಕೃಷ್ಣ ನದಿಗಳಿಗೆ ನೀರು ಹರಿದು ಬರುತ್ತದೆ.

ಇದರಿಂದ ನದಿ ಅಂಚಿನಲ್ಲಿರುವ ಸೈದಾಪುರ ಸಮೀಪದ ಬೆಳಗುಂದಿ, ಭೀಮನಹಳ್ಳಿ, ಆನೂರ(ಕೆ),
ಆನೂರ(ಬಿ), ಗುಡೂರು ಮುಂತಾದ ಗ್ರಾಮಗಳ ರೈತರು ನೀರಾವರಿ ಸೌಲಭ್ಯ ಪಡೆದು ಭತ್ತ,
ಹತ್ತಿ ಸೇರಿದಂತೆ ಇನ್ನಿತರ ಬೆಳೆ ಬೆಳೆಯುತ್ತಾರೆ. ಆದರೆ ಪ್ರಸಕ್ತ ವರ್ಷದಲ್ಲಿ ನದಿ ನೀರಿನ ಪ್ರಮಾಣ
ಇಳಿಕೆಯಾದ ಹಿನ್ನೆಲೆಯಲ್ಲಿ ನದಿ ಅಂಚಿನಲ್ಲಿ ಕೇವಲ ಒಂದೇ ಬೆಳೆ ಬೆಳೆಯುವಂತೆ ಸೂಚಿಸಲಾಗಿತ್ತು.

Advertisement

ಹೀಗಾಗಿ ರೈತರು ಒಂದೇ ಬೆಳೆಗೆ ತೃಪ್ತಿಪಡುವಂತಾಗಿದೆ. ಇನ್ನು ಮಳೆಯನ್ನೇ ಆಶ್ರಯಿಸಿರುವ
ಗುರುಮಠಕಲ್‌ ಮತಕ್ಷೇತ್ರದ ಕೂಡೂÉರು, ಬದ್ದೇಪಲ್ಲಿ, ಬಾಲಚೇಡ, ದದ್ದಲ್‌, ಮಾಧ್ವಾರ,
ಕೊಂಕಲ್‌, ಕಣೇಕಲ್‌, ನೀಲಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಜನರು ಹೊಟ್ಟೆಪಾಡಿಗಾಗಿ ಗುಳೆ
ಹೋಗುತ್ತಿದ್ದಾರೆ.

ಕೆರೆ ತುಂಬಿಸುವ ಯೋಜನೆ ಕುಂಠಿತ ಮಳೆಯಾಶ್ರಿತ ಕೆರೆ ನೀರನ್ನೇ ಕೃಷಿಗೆ ಆಧಾರವಾಗಿಸಿಕೊಂಡ
ಗುರುಮಠಕಲ್‌ ಮತಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆ ಮೂಲಕ ನೀರಾವರಿ ಸೌಲಭ್ಯ
ಕಲ್ಪಿಸಿಕೊಡಲಾಗುವುದು ಎಂದು ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದೆ. ತ್ವರಿತಗತಿಯಲ್ಲಿ ಆರಂಭಿಸಬೇಕಾದ ಯೋಜನೆ ಕುಂಟುತ್ತ ಸಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ ಹಳ್ಳ ಹಿಡಿದರೂ ಕಿವಿಗೊಡದ ಜನಪ್ರತಿನಿಧಿಗಳು ಇಲ್ಲಿನ ಕೃಷಿಕರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವರೇ ಎಂದು ರೈತರು ಪ್ರಶ್ನಿಸಿದ್ದಾರೆ.

„ಭೀಮಣ್ಣ ಬಿ. ವಡವಟ್‌

Advertisement

Udayavani is now on Telegram. Click here to join our channel and stay updated with the latest news.

Next