ಕುದೂರು: ಬಾರಿ ಮಳೆಯಿಂದ ಕೆರೆಯ ಏರಿ ಒಡೆದು ಸುಮಾರು 80 ಎಕರೆಯಲ್ಲಿ ರೈತರು ಬೆಳೆದ ರಾಗಿ, ಭತ್ತ, ಅಡಕೆ, ತೆಂಗು, ಬಾಳೆ ಹಾಗೂ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿರುವ ಘಟನೆ ಕುದೂರು ಹೋಬಳಿಯ ವೀರಸಾಗರದಲ್ಲಿ ನಡೆದಿದೆ.
ವೀರಸಾಗರದ ಹೊಸಕೆರೆ ಸುಮಾರು 25 ಎಕರೆ ಇದ್ದು, ಬಾರಿ ಮಳೆಯಿಂದ ಕೆರೆಯ ಏರಿ ಒಡೆದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. 1935ರಲ್ಲಿ ಕೆರೆಯನ್ನು ಪೂರ್ವಿಕರು ನಿರ್ಮಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೆರೆಯು ಸುಮಾರು 25 ಎಕರೆಯಷ್ಟು ವಿಸ್ತಿರ್ಣ ಹೊಂದಿದ್ದು, ಕೆರೆ ಏರಿ ಒಡೆದಿರುವುದನ್ನು ನೋಡುವುದಕ್ಕೆ ಜನಸಾಗರವೇ ಸೇರಿತ್ತು.
ಕೆರೆಯ ಏರಿ ಶಿಥಿಲ: ಕೆರೆ ಏರಿ ಒಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಎ.ಮಂಜುನಾಥ್ ಮಾತನಾಡಿ, ವೀರಸಾಗರ ಹೊಸಕೆರೆ ಏರಿ ಶಿಥಿಲವಾಗಿರುವುದರಿಂದ ಕೆರೆ ಏರಿ ಒಡೆದಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಜಿಪಂ ಅಧ್ಯಕ್ಷರು, ತಾಪಂ ಸದಸ್ಯರು, ಕಾರ್ಯದರ್ಶಿಗಳು ಕ್ರಮ ಕೈಗೊಳುವಂತೆ ಸೂಚಿಸಿದ್ದೇವೆ. ಜಿಪಂ ವ್ಯಾಪ್ತಿಗೆ ಸೇರಿದ ಕೆರೆ ಏರಿ ಒಡೆದು ಹೋಗಿರುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕೆರೆ ಉಳಿಸುವುದು ನಮ್ಮ ಕರ್ತವ್ಯ: ಕೆರೆಯನ್ನು ಸುಮಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ನಿರ್ಮಾಣ ಮಾಡಿದ್ದಾರೆ. ಈ ಕೆರೆಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಇಂದು ಅತಿಯಾದ ನೀರು ಬಂದಿದ್ದರಿಂದ ಕೆರೆಯ ಏರಿ ಒಡೆದು ಹೋಗಿದೆ. ಒಡೆದಿರುವ ಕೆರೆ ಏರಿಯನ್ನು ಡೀಸಿ ಅನುದಾನ ಅಥವಾ ನರೇಗಾ ಯೋಜನೆ, ಜಿಪಂ ಅನುದಾನ ಬಳಸಿಕೊಂಡು ದುರಸ್ತಿ ಮಾಡಬಹುದು ಎಂಬ ವಿಚಾರವನ್ನು ಜಿಪಂ ಸದಸ್ಯರು, ತಾಪಂ ಸದಸ್ಯರು. ಗ್ರಾಪಂ ಸದಸ್ಯರೊಂದಿಗೆ ಚರ್ಚಿಸಿ, ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇವೆ ಎಂದು ಹೇಳಿದರು.
ಬಿಸ್ಕೂರು ಕೆರೆ ಏರಿ ದುರಸ್ತಿಪಡಿಸಿ: ತಾಲೂಕಿನಲ್ಲಿ ಅನೇಕ ಕೆರೆಗಳು ಶಿಥಿಲವಾಗಿವೆ. ಬಿಸ್ಕೂರು ಕೆರೆಯ ಏರಿಯನ್ನು ಕೊಡಲೇ ದುರಸ್ತಿಪಡಿಸಬೇಕು. ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ರಾಮನಗರ ಜಿ.ಪಂ.ಅಧ್ಯಕ್ಷ ನಾಗರಾಜು ಮಾತನಾಡಿ, ಕೆರೆಯ ಏರಿ ಶಿಥಿಲವಾಗಿ ಒಡೆದು ಹೋಗಿದೆ. ಕೆರೆಯನ್ನು ಉಳಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ತಹಶೀಲ್ದಾರ್ ರಮೇಶ್, ಸೋಮಶೇಖರ್, ಉಪ ತಹಶೀಲ್ದಾರ್ ರೆಹಮಾನ್, ತಾಪಂ ಸದಸ್ಯ ಎಂ.ಜಿ.ನರಸಿಂಹಮೂರ್ತಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.