Advertisement

ಪಾಲಿಕೆ ಪ್ರಯೋಗಾಲಯಗಳಿಗೆ ಸ್ಥಳದ ಅಭಾವ

12:27 PM Apr 18, 2017 | Team Udayavani |

ಬೆಂಗಳೂರು: ಬಿಬಿಎಂಪಿಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ಬಳಸುವ ಕಚ್ಚಾ ವಸ್ತುಗಳ ಗುಣಮಟ್ಟ ಪರೀಕ್ಷೆಗೆ ಪಾಲಿಕೆಯಿಂದಲೇ ನಿರ್ಮಿಸಲು ಉದ್ದೇಶಿಸಿದ್ದ ಪ್ರಯೋಗಾಲಯಗಳಿಗೆ ಸ್ಥಳ ಸಿಗುತ್ತಿಲ್ಲ. 2016- 17ನೇ ಸಾಲಿನ ಬಜೆಟ್‌ನಲ್ಲಿ 8 ವಲಯಗಳಲ್ಲೂ ತಲಾ ಒಂದು ಪ್ರಯೋಗಾಲಯ ನಿರ್ಮಿಸುವ ಯೋಜನೆಯನ್ನು ಘೋಷಿಸಲಾಗಿತ್ತು.

Advertisement

ಆದರೆ, ಪ್ರಯೋಗಾಲಯ ನಿರ್ಮಾಣಕ್ಕೆ ಸಮರ್ಪಕ ಜಾಗ ದೊರೆಯದ ಹಿನ್ನೆಲೆಯಲ್ಲಿ ಪಾಲಿಕೆಯ ಮಹತ್ವದ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ. ಬಿಬಿಎಂಪಿ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಗುಣಮಟ್ಟದ ವಸ್ತುಗಳನ್ನು ಬಳಸುವುದಿಲ್ಲ  ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ  ಕಾಮಗಾರಿಗಳಿಗೆ ಬಳಸಲಾಗುವ ವಸ್ತುಗಳ ಪರೀಕ್ಷೆಗೆ ಪಾಲಿಕೆ ವತಿಯಿಂದಲೇ ಪ್ರಯೋಗಾಲಯ ಸ್ಥಾಪಿಸಲು ನಿರ್ಧರಿಸಲಾಗಿತ್ತು.  

ಎಂಟು ವಲಯಗಳಲ್ಲಿ ಪ್ರಯೋಗಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ 19.52 ಕೋಟಿ ರೂ. ಯೋಜನಾ ವೆಚ್ಚದ ಪ್ರಸ್ತಾಪ ಸಿದ್ಧಪಡಿಸಲಾಗಿತ್ತು. ಜತೆಗೆ ಯಂತ್ರೋಪಕರಣ, ಸಿಬ್ಬಂದಿ, ಸಂಚಾರಿ ಘಟಕಗಳಿಗಾಗಿ 2.44 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಬಿಬಿಎಂಪಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದಕ್ಕೂ ಮುನ್ನ ಕಾಮಗಾರಿಗೆ ಬಳಸುವ ವಸ್ತುಗಳನ್ನು ಮೂರು ರೀತಿಯಲ್ಲಿ ಪರೀಕ್ಷಿಸಲಾಗುತ್ತಿದೆ.

ಗುತ್ತಿಗೆದಾರರು ಎನ್‌ಎಬಿಸಿ ಸಂಸ್ಥೆಯಿಂದ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ಒದಗಿಸಬೇಕಿದೆ. ಅದಾದ ನಂತರ ಬಿಬಿಎಂಪಿ ಅಧಿಕಾರಿಗಳಿಗೆ ಅದರಲ್ಲಿ ದೋಷ ಕಂಡು ಬಂದರೆ ಈಗಿರುವ ಕೇಂದ್ರ ಕಚೇರಿಯಲ್ಲಿನ ಪ್ರಯೋಗಾಲಯದಲ್ಲಿ ಮತ್ತು ನಿವೃತ್ತ ಮುಖ್ಯ ಇಂಜಿನಿಯರ್‌ಗಳಿಂದಲೂ ಪರೀಕ್ಷಿಸಲಾಗುತ್ತಿತ್ತು. ಈ ಮೂರು ರೀತಿಯ ಹಂತದ ಪರೀಕ್ಷೆ ತಪ್ಪಿಸಲು ಪ್ರತಿ ವಲಯದಲ್ಲಿ ಪ್ರಯೋಗಾಲಯ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿತ್ತು. 

ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಸಲಾಗುವ ಕಾಮಗಾರಿಗಳಿಗೆ ಬಳಸುವ ವಸ್ತುಗಳ ಗುಣಮಟ್ಟ ಪರೀಕ್ಷೆಗೆಂದು ವಲಯ ಮಟ್ಟದಲ್ಲಿ ಪ್ರಯೋಗಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಅದಕ್ಕೆ ಸಂಬಂಧಿಸಿದಂತೆ ಸೂಕ್ತ  ಜಾಗ ಸಿಗದ ಕಾರಣ ಇನ್ನೂ ಪ್ರಯೋಗಾಲಯ ನಿರ್ಮಾಣ ಸಾಧ್ಯವಾಗಿಲ್ಲ.
-ಎಂ.ಆರ್‌.ವೆಂಕಟೇಶ್‌, ಬಿಬಿಎಂಪಿ ಪ್ರಧಾನ ಎಂಜಿನಿಯರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next