ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿರಾರು ಜನರ ಬದುಕಿಗೆ ಜೀವನಾಧಾರವಾಗಿದ್ದ, ಮೈಸೂರು ಅರಸರಿಂದನಿರ್ಮಾಣಗೊಂಡಿದ್ದ ಕೃಷ್ಣ ರಾಜೇಂದ್ರ ಗಿರಣಿ ಕಟ್ಟಡ ಇನ್ನು ನೆನಪು ಮಾತ್ರ.
ಮೈಸೂರು- ಬೆಂಗಳೂರು ಮಾರ್ಗದ 4 ಪಥ ರಸ್ತೆಯನ್ನು ದಶ ಪಥವಾಗಿ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ರಸ್ತೆ ಪಕ್ಕದಲ್ಲಿದ್ದ ಕೆ.ಆರ್.ಮಿಲ್ ಕಟ್ಟಡ ನೆಲಸಮಗೊಳಿಸಿದೆ. ಇತಿಹಾಸ ಪುಟಗಳಲ್ಲಿ ತನ್ನದೇ ಆದ ವಿಶೇಷ ಚಾಪು ಮೂಡಿಸಿದ್ದ ಮೈಸೂರಿನ ಕೆ.ಆರ್.ಮಿಲ್ ಕಾರ್ಖಾನೆ ನೆಲಸಮಗೊಂಡಿದೆ. ಕೆ.ಆರ್.ಮಿಲ್ ಇತಿಹಾಸ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರ ದೃಷ್ಟಿ ಫಲವಾಗಿ 1927ರಲ್ಲಿ ನಿರ್ಮಾಣಗೊಂಡ ಈ ಕೃಷ್ಣ ರಾಜೇಂದ್ರ ಕೈಮಗ್ಗ ಗಿರಣಿ (ಕೆ.ಆರ್.ಮಿಲ್) ಸಾವಿರಾರು ಕುಟುಂಬಗಳ ಜೀವನಕ್ಕೆ ಆಧಾರ ವಾಗಿತ್ತು.
ಕೈಮಗ್ಗದ ಮೂಲಕ ಕಂಬಳಿ ಉತ್ಪಾದಿಸುವಲ್ಲಿ ಹೆಚ್ಚು ಜನಪ್ರಿಯ ವಾಗಿದ್ದ ಈ ಕಾರ್ಖಾನೆ, ಸ್ವಾತಂತ್ರ್ಯ ಪೂರ್ವದಲ್ಲಿ ಹೆಚ್ಚು ಲಾಭದಲ್ಲಿತ್ತು. ಸ್ವಾತಂತ್ರ್ಯ ನಂತರ ಆಧುನಿಕ ಯಂತ್ರೋ ಪಕರಣಗಳ ಭರಾಟೆ, ಕಾರ್ಮಿಕರಲ್ಲಿನ ವೈಮನಸ್ಸಿನಿಂದ ನಷ್ಟದಲ್ಲಿದ್ದ ಕಾರ್ಖಾನೆಯನ್ನು ಸ್ಥಗಿತಗೊಳಿಸಲಾಗುತ್ತು. ಬಳಿಕ ಅಟ್ಲಾಂಡ ಎಂಬ ಕಂಪನಿ ಈ ಕಾರ್ಖಾನೆ ಯನ್ನು ಪುನಾರಂಭ ಮಾಡಿತ್ತಾದರೂ, ನಿರಂತರ ನಷ್ಟದಿಂದ 1984ರಲ್ಲಿ ಮುಚ್ಚ ಲಾಯಿತು. ನಂತರದ ದಿನಗಳಲ್ಲಿ ಕಾರ್ಖಾನೆ ಯನ್ನು ಪುನಾರಂಭಿಸಬೇಕು ಎಂಬಒತ್ತಾಯ ಕೇಳಿ ಬರುತ್ತಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ಆಸಕ್ತಿ ತೋರಲಿಲ್ಲ. ಸ್ವಾತಂತ್ರ್ಯ ಚಳವಳಿ ಸಂದರ್ಭ ಕೈಮಗ್ಗ ಹೆಚ್ಚು ಜನಪ್ರಿಯವಾಗಿದ್ದಾಗ ನಾಲ್ವಡಿ ಯವರುಗಾಂಧಿ ಕರೆಗೆ 1927ರಲ್ಲಿ ಕೈಮಗ್ಗ ಗಿರಣಿ ಆರಂಭಿಸಿದ್ದರು.
ರಸ್ತೆಗಾಗಿ ನೆಲಸಮವಾದ ಕಟ್ಟಡಗಳಿವು: ರಾಜರ ಆಳ್ವಿಕೆಯಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ನಿರ್ಮಾಣವಾದ ಪ್ರಧಾನ ಕಟ್ಟಡಗಳು ಮೈಸೂರಿನಲ್ಲಿ ಸಾಕಷ್ಟಿವೆ. ಅವುಗಳಲ್ಲಿ ಪೂರ್ಣಯ್ಯ ಛತ್ರ, ಲ್ಯಾನ್ಸ್‌ಡೌನ್ ಕಟ್ಟಡ, ಸರ್ಕಾರಿ ಅಥಿತಿ ಗೃಹ. ಸಾವಿರಾರು ಜೋಡಿಗಳು ಹಸೆಮಣೆ ಏರಲು ವೇದಿಕೆ ಯಾಗಿದ್ದ ಪೂರ್ಣಯ್ಯ ಛತ್ರವನ್ನು ದಶಕಗಳ ಹಿಂದೆ ರಸ್ತೆ ಅಭಿವೃದ್ಧಿಗಾಗಿ ನೆಲೆಸಮ ಮಾಡಿ, 1 ಭಾಗ ಮಾತ್ರ ಉಳಿಸಿಕೊಳ್ಳಲಾಗಿದೆ. ಜೊತೆಗೆ ವಾಣಿಜ್ಯ ಚಟುವಟಿಕೆಗಳು ಒಂದೇ ಕಡೆ ನಡೆಯಲಿ ಎಂಬ ಉದ್ದೇಶ ದಿಂದ ನಿರ್ಮಿಸಲಾಗಿದ್ದ ಲ್ಯಾನ್ಸ್‌ಡೌನ್ ಕಟ್ಟಡ ಈಗಿನ ದೇವರಾಜ ಮಾರುಕಟ್ಟೆ ವರೆಗೆ ವ್ಯಾಪಿಸಿತ್ತು.
ಸ್ವಾತಂತ್ರ್ಯ ನಂತರ ರಸ್ತೆ ಅಭಿವೃದ್ಧಿ ಹಾಗೂ ಕೆ.ಆರ್.ಸರ್ಕಲ್ ನಿರ್ಮಾಣಕ್ಕಾಗಿ ಲ್ಯಾನ್ಸ್‌ಡೌನ್ ಕಟ್ಟಡವನ್ನು ಅರ್ಧಕ್ಕೆ ತುಂಡರಿಸಲಾಗಿತ್ತು. ನಂತರ ಬೆಂ.-ಮೈಸೂರು ರಸ್ತೆ ಅಭಿವೃದ್ಧಿ ಗಾಗಿ ಈಗಿನ ಸರ್ಕಾರಿ ಅತಿಥಿ ಗೃಹದ ಪ್ರವೇಶ ದ್ವಾರವನ್ನು ಒಡೆಯ ಲಾಗಿತ್ತು.
ಸ್ಮಾರಕ ನಿರ್ಮಾಣಕ್ಕೆ ಒತ್ತಾಯ: ಕೆ. ಆರ್.ಮಿಲ್ ಕೈಮಗ್ಗ ಕಾರ್ಖಾನೆ ತನ್ನದೇ ಆದ ಸುದೀರ್ಘ ಇತಿಹಾಸ ಹೊಂದಿದ್ದು, ಗಾಂಧೀಜಿಯಿಂದ ಉದ್ಘಾಟನೆಯಾಗಿದೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಈ ಕಾರ್ಖಾನೆ ನೆನಪಿಗಾಗಿ ಯಾವುದಾದರೂ ಒಂದು ಕುರುಹು ಅಗತ್ಯ. ಸರ್ಕಾರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಇತಿಹಾಸ ತಜ್ಞ ಈಚನೂರು ಕುಮಾರ್ ಆಗ್ರಹಿಸಿದ್ದಾರೆ.
-ಸತೀಶ್ ದೇಪುರ