Advertisement

ಲೋಕಾ ಪ್ರಾಣ ಉಳಿಸಿದ ಮೊಂಡು ಚಾಕು!

12:00 PM Jun 10, 2018 | |

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡುವ ಉದ್ದೇಶವನ್ನು ತೇಜರಾಜ್‌ ಶರ್ಮಾ ಹೊಂದಿದ್ದ. ಆದರೆ, ಸಂಡೇ ಬಜಾರ್‌ನಲ್ಲಿ ಅಂಗಡಿಯವನು ಕೊಟ್ಟ ಚಾಕು ಮೊಂಡಾಗಿದ್ದರಿಂದ ಲೋಕಾಯುಕ್ತ ನ್ಯಾಯಮೂರ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದರು.

Advertisement

ಇದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್‌ ಶೆಟ್ಟಿ ಅವರಿಗೆ ಲೋಕಾಯುಕ್ತ ಕಚೇರಿಯಲ್ಲೇ ಚಾಕುವಿನಿಂದ ಇರಿದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು 8ನೇ ಎಸಿಎಂಎಂಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಬಹಿರಂಗವಾದ ಅಂಶ.

ತಾನು ನೀಡಿದ ದೂರುಗಳನ್ನು ಸರಿಯಾಗಿ ವಿಚಾರಣೆ ಮಾಡದೆ ನಿರ್ಲಕ್ಷ್ಯ ಮಾಡಲಾಗಿತ್ತು. ಇದರಿಂದ ತಾನು ಯಾರ ವಿರುದ್ಧ ದೂರು ದಾಖಲಿಸಿದ್ದೆನೋ ಅವರೆಲ್ಲರೂ ಪ್ರಕರಣಗಳಿಂದ ಖುಲಾಸೆಗೊಂಡರು. ಇದರಿಂದ ಕೋಪಗೊಂಡು ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ಚಾಕುವಿನಿಂದ ಇರಿದೆ ಎಂದು ಆರೋಪಿ ತೇಜರಾಜ್‌ ಶರ್ಮಾ ನೀಡಿದ ಹೇಳಿಕೆಯನ್ನೇ ಆರೋಪಪಟ್ಟಿಲ್ಲಿ ಪ್ರಮುಖವಾಗಿ ಪರಿಗಣಿಸಲಾಗಿದೆ.

ಪ್ರಕರಣದ ಆರೋಪಿ ತುಮಕೂರಿನ ತೇಜರಾಜ್‌ ಶರ್ಮಾ ಹಾಗೂ ಚಾಕು ಇರಿತಕ್ಕೊಳಗಾದ ಲೋಕಾಯುಕ್ತ ವಿಶ್ವನಾಥ್‌ ಶೆಟ್ಟಿ ಅವರ ಹೇಳಿಕೆಗಳು, 58 ಸಾಕ್ಷಿಗಳ ಹೇಳಿಕೆ ಹಾಗೂ 145 ದಾಖಲೆಗಳು ಸೇರಿ ಒಟ್ಟು 230 ಪುಟಗಳ ಆರೋಪಪಟ್ಟಿಯನ್ನು ಜೂ. 1ರಂದೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 

ಮೊಂಡು ಚೂರಿ ಕೊಟ್ಟ: ಮೊದಲೇ ಲೋಕಾಯುಕ್ತರ ಹತ್ಯೆಗೆ ಸಂಚು ರೂಪಿಸಿದ್ದೆ. ಅದಕ್ಕಾಗಿಯೇ ಮಾ. 7ರಂದು ಸಂಡೇ ಬಜಾರ್‌ನಲ್ಲಿ 60 ರೂ. ನೀಡಿ ಚಾಕು ಖರೀದಿಸಿದ್ದೆ. ಅಷ್ಟು ಹಣ ನೀಡಿದರೂ ಅಂಗಡಿಯವನು ಮೋಸ ಮಾಡಿದ. ಒಳ್ಳೆಯ ಚಾಕು ನೀಡದೆ ಮೊಂಡು ಚಾಕು ಕೊಟ್ಟಿದ್ದ ಎಂದು ತೇಜರಾಜ್‌ ಶರ್ಮಾ ವಿಚಾರಣೆ ವೇಳೆ ಹೇಳಿಕೆ ನೀಡಿರುವುದನ್ನೂ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ನನ್ನ ಹೋರಾಟ ಅಧರ್ಮದ ವಿರುದ್ಧ ಎಂದಿದ್ದ: ಸರ್ಕಾರದ ವಿವಿಧ ಇಲಾಖೆಗಳ ವಿರುದ್ದ ಲೋಕಾಯುಕ್ತಕ್ಕೆ ಐದು ದೂರುಗಳನ್ನು ನೀಡಿದ್ದೆ. ಆದರೆ, ಮೂರು ಪ್ರಕರಣಗಳನ್ನು ಖುಲಾಸೆಗೊಳಿಸಿ, ಎರಡು ಪ್ರಕರಣಗಳಲ್ಲಿ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದರು. ಈ ಸಂಬಂಧ ಹಲವು ಬಾರಿ ಚರ್ಚಿಸಲು ಲೋಕಾಯುಕ್ತರನ್ನು ಭೇಟಿಯಾಗಿದ್ದೆ. ಆದರೆ, ಅವರು ನನ್ನ ಮನವಿಗೆ ಒಪ್ಪದೆ ನಿರ್ಲಕ್ಷ್ಯದ ಮಾತುಗಳನ್ನಾಡಿ ಅಪಹಾಸ್ಯ ಮಾಡಿದರು.

ಇದರಿಂದ ಲೋಕಾಯುಕ್ತರ ಮೇಲೆ ಕೋಪಗೊಂಡೆ. ಇದುವರೆಗೂ 20ಕ್ಕೂ ಅಧಿಕ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಲೋಕಾಯುಕ್ತರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಆಕ್ರೋಶಗೊಂಡು ಕೊಲೆ ಮಾಡಲು ಯತ್ನಿಸಿದೆ. ಅಲ್ಲದೆ, ಬಹಳಷ್ಟು ಬಾರಿ ಕಚೇರಿಗೆ ಬಂದರೂ ಲೋಕಾಯುಕ್ತರು ಸೇರಿ ಯಾವ ಅಧಿಕಾರಿಗಳು ಸರಿಯಾಗಿ ಸ್ಪಂದಿಸಲಿಲ್ಲ.

ಹೀಗಾಗಿ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದ್ದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ಅಧರ್ಮದ ವಿರುದ್ಧ ಹೋರಾಟ ಮಾಡಲು ಮುಂದಾದೆ. ನ್ಯಾಯಕ್ಕಾಗಿ ನನ್ನ ಜೀವ ಕೊಡಲೂ ಸಿದ್ದ ಎಂಬ ಶ್ರೀಕೃಷ್ಣನ ಮಾತುಗಳನ್ನು ಪಾಲಿಸಿದ್ದೇನೆಯೇ ಹೊರತು ಬೇರೆ ಯಾವ ಉದ್ದೇಶವಿಲ್ಲ ಎಂದು ಆರೋಪಿ ತೇಜರಾಜ್‌ ಶರ್ಮಾ ಹೇಳಿಕೆ ನೀಡಿರುವುದಾಗಿ ಆರೋಪಪಟ್ಟಿಯಲ್ಲಿ ಸಿಸಿಬಿ ಪೊಲೀಸರು ಹೇಳಿದ್ದಾರೆ.

ನಾನೇ ವಕೀಲ: ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಮೇಲೆ ಹಲ್ಲೆ ನಡೆಸಿದರಿಂದ ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಯಾವ ವಕೀಲರು ತೇಜರಾಜ್‌ ಶರ್ಮಾ ಪರ ವಕಾಲತ್ತು ವಹಿಸಲು ಸಿದ್ಧರಿರಲಿಲ್ಲ. ಹೀಗಾಗಿ ಕೋರ್ಟ್‌ನಲ್ಲಿ ನನ್ನ ಪರ ನಾನೇ ವಾದ ಮಂಡಿಸುತ್ತೇನೆ ಎಂದು ತೇಜರಾಜ್‌ ಸಿಸಿಬಿ ಪೊಲೀಸರ ಮುಂದೆ ಹೇಳಿದ್ದ. ಅದರಂತೆ ಕೋರ್ಟ್‌ಗಳಲ್ಲಿ ತಾನೇ ವಾದಿಸುತ್ತಿದ್ದ. ಪ್ರತಿ ವಿಚಾರಣೆಯಲ್ಲಿಯೂ ಭಗವದ್ಗೀತೆಯ ಶ್ಲೋಕಗಗಳನ್ನು ನಾನು ಪಾಲಿಸಿದ್ದೇನೆ. ಅನ್ಯಾಯದ ವಿರುದ್ಧ ಹೋರಾಟ ನಡೆಸಿದ್ದೇನೆ ಎಂಬುದಾಗಿ ಹೇಳುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಅಧಿಕಾರಿಗಳಿಗೆ ಬ್ಲ್ಯಾಕ್‌ವೆುಲ್‌: ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ಆರೋಪಿ ತೇಜರಾಜ್‌ ಶರ್ಮಾ ಪ್ರತಿಯೊಬ್ಬರಲ್ಲೂ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಬ ಅಂಶವೂ ಆರೋಪಪಟ್ಟಿಯಲ್ಲಿದೆ.. ತುಮಕೂರು ಮೂಲದ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ಲೋಕಾಯುಕ್ತದಲ್ಲಿ ನೀಡಿದ್ದ ದೂರು ಹಿಂಪಡೆಯಲು ಅಧಿಕಾರಿಯಿಂದ 1.70 ಲಕ್ಷ ರೂ. ಪಡೆದುಕೊಂಡಿದ್ದ.

ಇದಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಈತ ಹಲವು ಮಂದಿ ಸರ್ಕಾರಿ ಅಧಿಕಾರಿಗಳನ್ನು ಇದೇ ರೀತಿ ಬ್ಲ್ಯಾಕ್‌ವೆುಲ್‌ ಮಾಡುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಈ ಮೂಲಕ ಪೀಠೊಪಕರಣ ಸರಬರಾಜು ಮಾಡುವ ಸರ್ಕಾರಿ ಟೆಂಡರ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದ ಆರೋಪಿ ಶರ್ಮಾ, ಮಾನಸಿಕವಾಗಿ ಸದೃಡನಾಗಿದ್ದಾನೆ ಎಂದು ವೈದ್ಯರು ನೀಡಿರುವ ವರದಿಯನ್ನೂ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಮಾ.7ರಂದು ಆರೋಪಿ ತೇಜ್‌ರಾಜ್‌ ಶರ್ಮಾ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಚೂರಿಯಿಂದ ಇರಿದು ಪರಾರಿಯಾಗಲು ಯತ್ನಿಸಿದ್ದ. ಆ ವೇಳೆ ಲೋಕಾ ಸಿಬ್ಬಂದಿ ಆತನನ್ನು ಹಿಡಿದು ವಿಧಾನಸೌಧ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಅನಂತರ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿಶ್ವನಾಥ್‌ ಶೆಟ್ಟಿ ಗುಣಮುಖರಾಗಿದ್ದರು. ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಸಿಸಿಬಿ ವರ್ಗಾಹಿಸಿದ್ದರು.

ತನಿಖೆ ಚುರುಕುಗೊಳಿಸಿ: ಕೇವಲ ಪ್ರಕರಣಗಳ ತನಿಖೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಕಾರಣಕ್ಕೆ ಆರೋಪಿ ತೇಜರಾಜ್‌ ಶರ್ಮಾ ತಮ್ಮ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂಬ ಬಗ್ಗೆ ನನಗೆ ಅನುಮಾನವಲಿದೆ. ಇದರ ಹಿಂದೆ ಬೇರೆ ಯಾರದ್ದೊ ಕೈವಾಡ ಇರಬಹುದು. ಇಲ್ಲವಾದರೆ ಬೇರೆ ಯಾವುದಾದರೂ ಬಲವಾದ ಕಾರಣವಿರಬೇಕು. ಹೀಗಾಗಿ ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಲೋಕಾಯುಕ್ತ ನ್ಯಾ.ವಿಶ್ವನಾಥ್‌ ಶೆಟ್ಟಿ ಅವರು ನೀಡಿದ ಹೇಳಿಕೆಯನ್ನೂ ಅರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next