ಒಂದೇ ಮಾತಲ್ಲಿ ಹೇಳಬೇಕಾದರೆ ಎರಡು ಸುಂದರ ಮುಖಗಳ ಬ್ಯೂಟಿಫುಲ್ ಲವ್‌ಸ್ಟೋರಿ. ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಫೈಟ್, ಡ್ಯಾನ್ಸ್, ಕಲರ್‌ಫುಲ್ ಲೊಕೇಶನ್ ಎಲ್ಲವೂ ಇದೆ. ಜೊತೆಗೆ ದೊಡ್ಡ ತಾಂತ್ರಿಕ ವರ್ಗವಿದೆ. ಎಲ್ಲವೂ ಸೇರಿ ಸ್ಟ್ರಾಂಗ್ “ಕಿಸ್’ ಆಗಿದೆ’ ಎಂದು ವಿವರ ಕೊಡುತ್ತಾರೆ ಅರ್ಜುನ್.
ನಿಮಗೆ ಗೊತ್ತಿರುವಂತೆ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಕೆಲವು ಚಿತ್ರಗಳ ಸಾಲಿನಲ್ಲಿ ಇಂದು (ಸೆ.27) ಬಿಡುಗಡೆಯಾಗುತ್ತಿರುವ ಅರ್ಜುನ್ ನಿರ್ದೇಶನದ “ಕಿಸ್’ ಚಿತ್ರ ಕೂಡಾ ನಿಲ್ಲುತ್ತದೆ. ಹೊಸ ನಾಯಕ, ನಾಯಕಿಯನ್ನು ಇಟ್ಟುಕೊಂಡು ಅರ್ಜುನ್ “ಕಿಸ್’ ಚಿತ್ರ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಅರ್ಜುನ್ ಅವರದ್ದೇ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಹಿಟ್ ಆಗುವ ಮೂಲಕ ಈ ಚಿತ್ರದ ಮೇಲೆ ನಿರೀಕ್ಷೆ ಕೂಡಾ ಹೆಚ್ಚಿದೆ.
“ಇದು ರೆಗ್ಯುಲರ್ ಲವ್‌ಸ್ಟೋರಿ ಸಿನಿಮಾವಲ್ಲ. ಸಿನಿಮಾ ನೋಡಿ ಹೊರ ಬಂದಾಗ ಹೀಗೂ ಲವ್ ಮಾಡಬಹುದಾ ಎಂಬ ಪ್ರಶ್ನೆ ಬರೋದು ಸಹಜ. ಆ ತರಹದ ಒಂದು ಕಥೆ ಈ ಚಿತ್ರದಲ್ಲಿದೆ. ಒಂದೇ ಮಾತಲ್ಲಿ ಹೇಳಬೇಕಾದರೆ ಎರಡು ಸುಂದರ ಮುಖಗಳ ಬ್ಯೂಟಿಫುಲ್ ಲವ್‌ಸ್ಟೋರಿ. ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಫೈಟ್, ಡ್ಯಾನ್ಸ್, ಕಲರ್‌ಫುಲ್ ಲೊಕೇಶನ್ ಎಲ್ಲವೂ ಇದೆ. ಜೊತೆಗೆ ದೊಡ್ಡ ತಾಂತ್ರಿಕ ವರ್ಗವಿದೆ. ಎಲ್ಲವೂ ಸೇರಿ ಸ್ಟ್ರಾಂಗ್ “ಕಿಸ್’ ಆಗಿದೆ’ ಎಂದು ವಿವರ ಕೊಡುತ್ತಾರೆ ಅರ್ಜುನ್.
ಚಿತ್ರದಲ್ಲಿ “ಕಿಸ್’ ಎಂಬುದರ ಬಗ್ಗೆಯೂ ಹೇಳಿದ್ದಾರಂತೆ. “ನಮ್ಮ ಜೀವನದಲ್ಲಿ ಸಿಗುವ ಪ್ರತಿ ಕಿಸ್‌ಗೂ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ಪ್ರೇಮಿಗಳ ಕಿಸ್ ಕೂಡಾ. ತನ್ನ ಪ್ರೀತಿ ಪಾತ್ರರು ಕೊಡುವ ಕಿಸ್ ತುಂಬಾ ಅಮೂಲ್ಯವಾದುದು. ಆ ಕಿಸ್ ಅನ್ನು ಅವರಿಗಷ್ಟೇ ಸೀಮಿತಗೊಳಿಸಿರಬೇಕು. ಆಗ ಮಾತ್ರ ಅದು ಮಹತ್ವ ಪಡೆಯುತ್ತದೆ ಎಂಬ ಅಂಶವನ್ನು ಇಲ್ಲಿ ಹೇಳಿದ್ದೇನೆ. ಜೊತೆಗೆ ಒಬ್ಬ ಹುಡುಗ ತಾನು ಪ್ರೀತಿಸಿದ ಹುಡುಗಿಯಿಂದ ಆ ಅಮೂಲ್ಯವಾದ ಗಿಫ್ಟ್ ಪಡೆಯಲು ಏನೆಲ್ಲಾ ಮಾಡುತ್ತಾನೆ, ಅದಕ್ಕೆ ಆಕೆಯ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ ಅರ್ಜುನ್.
ಅರ್ಜುನ್ ಹೇಳುವಂತೆ “ಕಿಸ್’ ಇವತ್ತಿನ ಟ್ರೆಂಡಿ ಲವ್‌ಸ್ಟೋರಿ. ಇವತ್ತಿನ ಹುಡುಗ-ಹುಡುಗಿಯರು ಹೇಗಿರುತ್ತಾರೆ. ಅದರಲ್ಲೂ ಹರೆಯದ ಯೂತ್ಸ್ ಲವ್ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ, ಅವರ ಮೆಂಟಾಲಿಟಿ ಹೇಗಿರುತ್ತದೆ ಎಂಬ ಅಂಶದೊಂದಿಗೆ “ಕಿಸ್’ ಮಾಡಿದ್ದಾರೆ ಅರ್ಜುನ್. “”ಕಿಸ್’ ಒಂದು ಕಲರ್‌ಫುಲ್ ಜರ್ನಿ. 18ರ ಹುಡುಗಿ 21ರ ಹುಡುಗರು ಲವ್ ಬಗ್ಗೆ ಹೇಗಿರುತ್ತಾರೆ, ಅವರ ನಡುವಿನ ಸಣ್ಣ ಸಣ್ಣ ಕಿತ್ತಾಟ, ಮುನಿಸು, ಎಕ್ಸೆ„ಟ್‌ಮೆಂಟ್, ಬ್ರೇಕಪ್, ಚಾಟಿಂಗ್ … ಇಂತಹ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆ. ಹಿಂದೆಲ್ಲಾ ಲವ್ ಎಂದರೆ ಹುಡುಗಿ ಹಿಂದೆ ತಿಂಗಳುಗಟ್ಟಲೇ ಸುತ್ತಾಡಿ, ಅವಳ ಗೆಳತಿಯನ್ನು ಫ್ರೆಂಡ್ ಮಾಡಿಕೊಂಡು, ಅವಳ ಕೈಯಲ್ಲಿ ಲವ್‌ಲೆಟರ್ ಕೊಡಬೇಕಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಬೆಳಗ್ಗೆ ಫ್ರೆಂಡ್ ರಿಕ್ವೆಸ್ಟ್. ಮಧ್ಯಾಹ್ನ ಫ್ರೆಂಡ್ಸ್. ಒಂದೆರಡು ದಿನ ಬಿಟ್ಟರೆ ಲವರ್ …. ಫೇಸ್‌ಬುಕ್, ವಾಟ್ಸಾಪ್ ಬಂದ ಮೇಲೆ ಎಲ್ಲವೂ ವೇಗವಾಗಿದೆ. ಇವತ್ತಿನ ಟ್ರೆಂಡಿ ಲವ್‌ಸ್ಟೋರಿಯಲ್ಲೂ ಒಂದಷ್ಟು ಮಂದಿ ಒಳ್ಳೆಯವರು ಇದ್ದಾರೆ. ಆ ತರಹದ ಲವ್‌ಸ್ಟೋರಿಯನ್ನು ಇಲ್ಲಿ ಹೇಳಿದ್ದೇನೆ’ ಎಂದು ಸಿನಿಮಾ ಬಗ್ಗೆ ವಿವರ ಕೊಡುತ್ತಾರೆ. ಪ್ರೇಮಿಗಳು ತಮ್ಮ ನಡುವಿನ ಅಹಂ ಅನ್ನು ದೂರವಿಟ್ಟರೆ ಪ್ರೀತಿ ಸುಂದರವಾಗಿರುತ್ತದೆ ಎಂಬ ಸಂದೇಶವನ್ನು ಹೇಳಿದ್ದಾರಂತೆ ಅರ್ಜುನ್.
ಕೆಲವು ವರ್ಷಗಳ ಹಿಂದೆ ಹುಡುಗರು ಗ್ಯಾಂಗ್ ಕಟ್ಟಿಕೊಂಡು ಓಡಾಡುತ್ತಾ ರೇಗಿಸುತ್ತಿದ್ದರೆ, ಈಗ ಹುಡುಗಿಯರು ಗ್ಯಾಂಗ್ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಹುಡುಗರ ಬಾಯಲ್ಲಿ ನಲಿದಾಡುತಿದ್ದ “ಪದ’ಗಳು ಈಗ ಹುಡುಗಿಯರ ನಾಲಿಗೆ ತುದಿಯಲ್ಲೇ ಕುಳಿತಿದೆ. ಆ ತರಹದ ಒಂದಷ್ಟು ಸನ್ನಿವೇಶಗಳನ್ನು ಕೂಡಾ “ಕಿಸ್’ನಲ್ಲಿಟ್ಟಿದ್ದಾರಂತೆ ಅರ್ಜುನ್.
ಚಿತ್ರದಲ್ಲಿ ವಿರಾಟ್ ಹಾಗೂ ಶ್ರೀಲೀಲಾ ನಾಯಕ-ನಾಯಕಿ. “ಇಬ್ಬರಲ್ಲೂ ಜೋಶ್ ಇದೆ. ಬೇಗನೇ ಅರ್ಥಮಾಡಿಕೊಳ್ಳುವ, ಕಲಿಯುವ ಸಾಮರ್ಥ್ಯವಿದೆ. ಅದೇ ಕಾರಣದಿಂದ ಸೀನ್ ನಂಬರ್ ಹೇಳಿಬಿಟ್ಟರೆ ಡೈಲಾಗ್ ಸಮೇತ ನಟಿಸುತ್ತಾರೆ. ಚಿತ್ರೀಕರಣಕ್ಕೆ ಹೋಗುವ ಮುನ್ನ ಐದಾರು ತಿಂಗಳು ರಿಹರ್ಸಲ್ ಮಾಡಿಸಿದ್ದೇನೆ. ಮಾಡುವ ಕೆಲಸದ ಮೇಲೆ ಅವರಿಗೆ ಶ್ರದ್ಧೆ ಇದೆ. ಚಿತ್ರರಂಗದಲ್ಲಿ ಅವರಿಬ್ಬರೂ ನೆಲೆ ನಿಲ್ಲುತ್ತಾರೆ’ ಎನ್ನುವುದು ಅರ್ಜುನ್ ಮಾತು. ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಮಡಿಕೇರಿ, ಊಟಿ, ಗೋವಾ, ಹೃಷಿಕೇಶ, ತಾಜ್‌ಮಹಲ್, ಜೈಸಲ್ಮೇರ್, ಕುದುರೆಮುಖ, ಕೇರಳ ಸುತ್ತಮುತ್ತ ಚಿತ್ರೀಕರಣ ನಡೆದಿದೆ.
ರವಿಪ್ರಕಾಶ್ ರೈ