Advertisement

ರಾಜ ಕೃಷ್ಣದೇವರಾಯ ಆದ ನಾನು…

10:09 AM Jan 12, 2020 | mahesh |

ವಿಜಯನಗರ ಸಾಮ್ರಾಜ್ಯ ಎಂದೊಡನೆ ಅದರ ವೈಭವ, ಶ್ರೀಮಂತಿಕೆ, ಅಷ್ಟದಿಗ್ಗಜರು, ಹಂಪಿ- ಇವೆಲ್ಲ ಮನದಲ್ಲಿ ಮೂಡುತ್ತದೆ. ಆದರೆ, ಇವೆಲ್ಲದಕ್ಕಿಂತ ಮೊದಲು ಮೂಡುವ ಹೆಸರೇ ಕೃಷ್ಣದೇವರಾಯನದ್ದು. ನಿಜ, ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಅಷ್ಟೇ ಅಲ್ಲದೆ, ದಕ್ಷಿಣ ಭಾರತದ ಮಹೋನ್ನತ ಚಕ್ರವರ್ತಿಯಾಗಿ ಕ್ರಿ.ಶ. 1509ರಿಂದ 1529ರ ವರೆಗೆ ಎರಡು ದಶಕಗಳ ಕಾಲ ಶ್ರೇಷ್ಠ ಆಡಳಿತ ನೀಡಿ ಸುವರ್ಣಯುಗಕ್ಕೆ ಸಾಕ್ಷಿಯಾದ ಮಹಾನ್‌ ದೊರೆ ಆತ. ಕಲೆ, ಸಾಹಿತ್ಯ, ಧರ್ಮ- ಸಂಸ್ಕೃತಿ, ವಾಸ್ತುಶಿಲ್ಪ- ಹೀಗೆ ಆಡಳಿತದ ಎಲ್ಲ ಮುಖಗಳಲ್ಲೂ ಸಾಧನೆಯ ಸಿದ್ಧಿ ಶಿಖರವೇರಿದ ಕಾಲವೆಂದರೆ, ಅದು ರಾಜಾ ಕೃಷ್ಣದೇವರಾಯನ ಕಾಲ. ಇಂಥ ಒಬ್ಬ ಶ್ರೇಷ್ಠ ರಾಜನ ವಂಶಸ್ಥರು ಇನ್ನೂ ಇ¨ªಾರೆ ಎನ್ನುವುದು ಕರುನಾಡಿನ ಹೆಮ್ಮೆಯೇ ಅಲ್ಲವೇ? ಹೌದು, ಹಂಪಿಯ ಸಮೀಪದ ಆನೆಗೊಂದಿಯಲ್ಲಿ ವಿಜಯ ನಗರ ಸಾಮ್ರಾಜ್ಯದ ವಂಶಸ್ಥರು ನೆಲೆಸಿ¨ªಾರೆ. ಈಗಿನ ಕುಡಿಯ ಹೆಸರೂ ಕೃಷ್ಣದೇವರಾಯ! “ಉದಯವಾಣಿ’ಗಾಗಿ ಅವರು ನೀಡಿದ ವಿಶೇಷ ಸಂದರ್ಶನ ನಿಮ್ಮ ಓದಿನ ಖುಷಿಗೆ…

Advertisement

– ನಮಸ್ಕಾರ ಕೃಷ್ಣದೇವರಾಯರಿಗೆ, ಹೇಗಿದ್ದೀರಿ?
ವಿರೂಪಾಕ್ಷನ ಕೃಪೆಯಿಂದ ಚೆನ್ನಾಗಿದ್ದೇವೆ.

– ಹಂಪಿ ಎಲ್ಲರಿಗೂ ಗೊತ್ತು; ಅಂದಿನ ರಾಜ ಕೃಷ್ಣದೇವರಾಯನ ಬಗ್ಗೆಯೂ ಎಲ್ಲರಿಗೂ ಗೊತ್ತು. ಇಂದಿನ ಕೃಷ್ಣದೇವರಾಯರು ಹೇಗಿದ್ದಾರೆ? ನಿಮ್ಮನ್ನು ಪರಿಚಯಿಸಿಕೊಳ್ಳಬಹುದೇ? ನಿಮಗೂ ಏಕೆ ಅವರ ಹೆಸರೇ ಬಂತು?
ಅಂದಿನ ಕೃಷ್ಣದೇವರಾಯರು ನಿಜವಾಗಿಯೂ ರಾಜರಾಗಿದ್ದರು. ಅವರ ಸಾಧನೆ ಅವರ್ಣನೀಯ, ಶಬ್ದಾತೀತ, ಸಾರ್ವಕಾಲಿಕ. ಆದರೆ, ಇಂದು ನಿಮ್ಮೆದುರಿಗಿರುವ ಕೃಷ್ಣದೇವರಾಯ ಒಬ್ಬ ಎಂಜಿನಿಯರ್‌. ನಿಮ್ಮೆಲ್ಲರ ಹಾಗೆ ಸಾಮಾನ್ಯ ವ್ಯಕ್ತಿ. ಎಲ್ಲರ ಹಾಗೆ ಸರಳವಾಗಿ, ಆನೆಗೊಂದಿಯಲ್ಲಿ ನಮ್ಮ ವಂಶಸ್ಥರು ಪರಂಪರಾಗತವಾಗಿ ವಾಸಿಸಿದ್ದ ಮನೆಯಲ್ಲೇ ವಾಸವಾಗಿದ್ದೇನೆ. ಈ ಮನೆಗೆ 200 ವರ್ಷವಾಗಿರಬಹುದು. ನನಗೆ “ಕೃಷ್ಣದೇವರಾಯ’ ಎಂದು ಹೆಸರು ಬಂದಿದ್ದು, ನಮ್ಮ ವಂಶಪರಂಪರೆಯಿಂದಾಗಿ. ನನ್ನ ಅಜ್ಜನವರ ಹೆಸರೂ “ಕೃಷ್ಣದೇವರಾಯ’ ಎಂದಾಗಿದ್ದರಿಂದ ನಮ್ಮ ತಂದೆಯವರು ನನಗೂ “ಕೃಷ್ಣದೇವರಾಯ’ ಎಂದೇ ಹೆಸರಿಟ್ಟರು.

– ಪ್ರಖ್ಯಾತ ರಾಜವಂಶದ ಕುಡಿಯಾದ ನೀವು ಅಮೆರಿಕದಲ್ಲಿ ಕಂಪ್ಯೂಟರ್‌ ಎದುರು ಕುಳಿತು ಕೆಲಸ ಮಾಡಿರಲಿಲ್ಲ; ಆ ದಿನಗಳು ಹೇಗಿದ್ದವು? ಮಾತೃಭೂಮಿಗೆ ಹಿಂದಿರುಗಬೇಕಾದ ಪ್ರಸಂಗವೇಕೆ ಒದಗಿಬಂತು?
ನಾನು 2001ರವರೆಗೂ ಇಲ್ಲೇ ಸಣ್ಣ ವ್ಯವಹಾರವನ್ನು ಮಾಡುತ್ತಿದ್ದೆ. ಮೆಕಾನಿಕಲ್‌ ಎಂಜಿನಿಯರಿಂಗ್‌ ಮುಗಿಸಿಕೊಂಡಿದ್ದ ನನಗೆ, ಅಮೆರಿಕದಲ್ಲಿದ್ದ ನನ್ನ ಅಕ್ಕ, “ಇಲ್ಲೇ ಬಂದು, ಏನಾದರೂ ಮಾಡು’ ಎಂದು ಒತ್ತಾಯಿಸುತ್ತಿದ್ದರು. ಅದೇ ಸಂದರ್ಭದಲ್ಲಿ ವಾರಂಗಲ್‌ನ ಶ್ರೇಷ್ಠ ಅಧ್ಯಾತ್ಮಿಕ ಸಂಪನ್ನರಾದ ಪೂಜ್ಯ ಶಿವಾನಂದ ಮೂರ್ತಿ ಸ್ವಾಮಿಗಳನ್ನು ನಮ್ಮ ತಂದೆಯವರು 2001ರಲ್ಲಿ ಹೈದರಾಬಾದ್‌ಗೆ ಕರೆಸಿದಾಗ, ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಆಗ ಅವರು ರುದ್ರಾಭಿಷೇಕ ಮಾಡುತ್ತಿದ್ದರು. ನನ್ನನ್ನು ನೋಡುತ್ತಿದ್ದ ಹಾಗೆ, “ಅಮೆರಿಕಕ್ಕೆ ಹೋಗಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದೀರಿ… ಅಲ್ಲವೇ? ಯೋಚಿಸಬೇಡಿ… ಹೋಗಿ. ಆದರೆ, ನೀವು ಯಾವಾಗ ಇಲ್ಲಿಗೆ ಬರಬೇಕೆಂದು ನಾವು ಹೇಳುತ್ತೇವೆ. ಆಗ ಬನ್ನಿ’ ಎಂದರು. ಅವರು ಹೀಗೆ ದಿಢೀರನೆ ಹೇಳಿದ್ದನ್ನು ಕಂಡು, ನಾನು ಚಕಿತಗೊಂಡಿದ್ದೆ. ಅದಾದ ಮೇಲೆ ನಾನು ಅಮೆರಿಕಕ್ಕೆ ಹೋಗಿ, ಅಲ್ಲಿ ಒಂದು ಕಂಪನಿಯಲ್ಲಿ ಆರೂವರೆ ವರ್ಷಗಳ ಕಾಲ ಕೆಲಸಮಾಡಿದೆ.

ಆಗ ನಡೆದ ಒಂದು ಘಟನೆ ನನ್ನ ಯೋಚನೆಯನ್ನು ಬದಲಿಸಿತ್ತು. ಫಿಲಿಡೆಲ್ಫಿಯಾದ “ಲಿಬರ್ಟಿ ಬೆಲ್‌’ ನೋಡಲು ಅಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಅದು ಏನಿರಬಹುದೆಂಬ ಕುತೂಹಲದಿಂದ ನಾನೂ ಅಲ್ಲಿಗೆ ಹೋದೆ. ಆಮೇಲೆ ಅದನ್ನು ನೋಡಿದಾಗ ಯಾವ ಅದ್ಭುತ ವಿಶೇಷತೆಯೂ ಅಲ್ಲಿರಲಿಲ್ಲ. ಕೇವಲ ಒಂದು ಘಂಟೆಯನ್ನು ಇಷ್ಟು ಅಭಿಮಾನದಿಂದ ನೋಡುತ್ತಾರಲ್ಲ… ಇವರಿಗಿಂತ ನಮ್ಮದು ಎಂಥ ಅದ್ಭುತ ಚರಿತ್ರೆ ಇರುವ ನಾಡು. ಭಾರತದಲ್ಲಿ ಸಾವಿರಾರು ವರ್ಷಗಳ ಶ್ರೇಷ್ಠ ಸ್ಮಾರಕಗಳು ಸಂರಕ್ಷಣೆ ಇಲ್ಲದೇ ಬಿದ್ದಿವೆಯೆಲ್ಲ ಎಂಬ ನೋವು ಕಾಡಲಾರಂಭಿಸಿತು. ಅದೇ ವೇಳೆ (2008) ನಮ್ಮ ತಂದೆಯವರೂ ತೀರಿಕೊಂಡಾಗ, ಸ್ವಾಮಿಗಳು ನನ್ನನ್ನು ಕರೆದು ಇಲ್ಲೇ ಇರಲು ಆದೇಶಿಸಿದರು. ನನ್ನ ತೀರ್ಮಾನವೂ ಅದೇ ಆಗಿತ್ತು!

Advertisement

– ಇಲ್ಲಿಗೆ ಬಂದಾಗ ನಿಮ್ಮೆದುರು ಇದ್ದ ಸವಾಲುಗಳೇನು?
ನಮ್ಮ ಮನೆ ಸಂರಕ್ಷಣೆಯ ಹೊಣೆ ನನ್ನ ಮೇಲಿತ್ತು. ಸ್ವಾಮಿಗಳ ಮತ್ತು ಕುಲದೇವರಾದ ವಿರೂಪಾಕ್ಷರ ಆಶೀರ್ವಾದದಿಂದ ಜೀರ್ಣೋದ್ಧಾರದ ಸಂಕಲ್ಪ ಮಾಡಿದೆ. ತಾಳಿಕೋಟೆ ಯುದ್ಧದ ನಂತರ ನಮ್ಮ ವಂಶಸ್ಥರು ಹಂಪಿಯಿಂದ ಪೆನುಗೊಂಡಕ್ಕೆ ಹೋಗಿ ಅಲ್ಲಿ 1594ರ ವರೆಗೆ ನೆಲೆಸಿದರು. ನಂತರ ಅಲ್ಲಿಂದ ಚಂದ್ರಗಿರಿಗೆ ಬಂದು 1640ರ ವರೆಗೆ ನೆಲೆಸಿದರು. ಆಮೇಲೆ ಅಲ್ಲಿಂದ ವೇಲೂರಿಗೆ ಬಂದು, ಅಲ್ಲಿಂದ ಆನೆಗೊಂದಿಗೆ ಬಂದರು. ಈಗಿರುವ ಮನೆಯಲ್ಲಿಯೇ ನಮ್ಮ ಅಜ್ಜಿ ರಾಣಿ ಕುಪ್ಪಮ್ಮ ಶತಾಯುಷಿಗಳಾಗಿ ಬಾಳಿಬದುಕಿ ಹೋಗಿದ್ದಾರೆ. ಇಂಥ ಪುಣ್ಯ ವಿಶೇಷದ ಮನೆಯನ್ನು ಜೀರ್ಣೋದ್ಧಾರಗೊಳಿಸಿ, ಈಗ ನಾವು ವಾಸವಿದ್ದೇವೆ.

– ಹಂಪಿಯ ಪಾಳುಬಿದ್ದ ಸ್ಮಾರಕಗಳ ಮುಂದೆ ನಿಂತಾಗ, ಈಗಿನ ಹಂಪಿಯಲ್ಲಿ ಓಡಾಡುವಾಗ ನಿಮಗೆ ಅನ್ನಿಸುವುದೇನು?
ಹಂಪಿ ಇಷ್ಟು ಹಾಳಾದರೂ ಈಗಲೂ ವೈಭವಯುತವಾಗಿಯೇ ಕಾಣುತ್ತಿದೆ. ಇನ್ನು, ಎಲ್ಲವೂ ಸರಿಯಿದ್ದ ಆ ಕಾಲದಲ್ಲಿ ಅದೆಷ್ಟು ವಿಜೃಂಭಣೆಯಿಂದ ಕೂಡಿದ್ದಿರಬಹುದು ಎಂದೆನಿಸುತ್ತದೆ. ಹಂಪಿ ಸ್ಮಾರಕಗಳ ಸಂರಕ್ಷಣೆಯ ವಿಚಾರದಲ್ಲಿ ನಾನು ಯಾವತ್ತೂ ಸರ್ಕಾರಕ್ಕೆ ಬೆಂಬಲಿಗನಾಗಿದ್ದೇನೆ. ಹಂಪಿ ಇನ್ನೂ ಅಭಿವೃದ್ಧಿ ಕಾಣಬೇಕಿದೆ. ಪ್ರವಾಸಿಗರು ಬಂದಾಗ ಅವರಿಗೆ ಸಮರ್ಪಕವಾಗಿ ಸ್ನಾನ ಮತ್ತು ವಸ್ತ್ರ ಬದಲಾವಣೆಗೂ ಸರಿಯಾದ ವ್ಯವಸ್ಥೆಯಿಲ್ಲ. ಹಂಪಿ ಉತ್ಸವವೂ ಬೇಕು, ಅಭಿವೃದ್ಧಿಯ ಉತ್ಸಾಹವೂ ಬೇಕು. ಹಂಪಿ ಕೇವಲ ಪ್ರವಾಸಿ ತಾಣವಲ್ಲ, ಅದೊಂದು ಪುಣ್ಯಕ್ಷೇತ್ರ.

– ವಿಜಯ ನಗರ ಸಾಮ್ರಾಜ್ಯದಿಂದ ಪುರಸ್ಕರಿಸಲ್ಪಟ್ಟ ತಿರುಪತಿ, ಶೃಂಗೇರಿ, ಕಾಳಹಸ್ತಿಗೆ ಹೋದಾಗ ನಿಮಗೆ ಸಿಗುವಂಥ ಗೌರವಗಳ ಬಗ್ಗೆ ತಿಳಿಸಿ.
ನಾನು, ನನಗೆ ಸಿಗುವ ಗೌರವದ ಕುರಿತು ಯಾವತ್ತೂ ಅಪೇಕ್ಷೆಪಟ್ಟಿಲ್ಲ. ಅಲ್ಲಿಗೆಲ್ಲ ಭೇಟಿನೀಡಿದಾಗ ನಾನೂ ಎಲ್ಲರ ಹಾಗೆ ಸಾಮಾನ್ಯನಂತೆ, ಸರದಿ ಸಾಲಿನಲ್ಲಿಯೇ ದೇವರ ದರ್ಶನ ಮಾಡುತ್ತೇನೆ. ನಾನು ಬಂದ ವಿಷಯ ತಿಳಿದರೆ, ಅಲ್ಲಿಯವರು ಅತ್ಯಂತ ಗೌರವ ತೋರುತ್ತಾರೆ. ಅದರ ಶ್ರೇಯಸ್ಸು ನಮ್ಮ ವಂಶಕ್ಕೆ ಸಲ್ಲಬೇಕು. ಅವರ ಗೌರವವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಇಂಥ ಶ್ರೇಷ್ಠ ದೇವಾಲಯಗಳು ನಮ್ಮ ವಂಶದವರಿಂದ ಪೋಷಿಸಲ್ಪಟ್ಟಿದ್ದವಲ್ಲ ಎಂಬ ಹೆಮ್ಮೆಯ ಭಾವವಷ್ಟೇ ನನ್ನದಾಗಿರುತ್ತದೆ.

– ರಾಜವಂಶದ ಪಾರಂಪರಿಕ ಕಲೆಗಳಾದ ಕುಸ್ತಿ, ಕತ್ತಿವರಸೆ, ಕುದುರೆ ಸವಾರಿ ನಿಮಗೂ ತಿಳಿದಿದೆಯೇ?
(ನಗುತ್ತಾ) ಇಲ್ಲ… ನನಗೆ ಇದ್ಯಾವುದೂ ತಿಳಿದಿಲ್ಲ. ಆದರೆ, ಇವೆಲ್ಲದರಲ್ಲಿ ಬಹಳ ಆಸಕ್ತಿ ಇದೆ. ನಮ್ಮ ವಂಶದ ಕಲೆ, ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ಕಲಿಸುವ ಒಂದು ಕೇಂದ್ರದ ಸ್ಥಾಪನೆಯ ಕನಸಿದೆ. ಏನಾಗುತ್ತದೋ ನೋಡಬೇಕು.

– “ಶ್ರೀಕೃಷ್ಣದೇವರಾಯ’ ಕನ್ನಡ ಸಿನಿಮಾವನ್ನು ಮೊದಲ ಬಾರಿಗೆ ನೋಡಿದಾಗ, ಆದ ಪುಳಕವೇನು?
ಆ ಚಿತ್ರಕ್ಕೆ 1969ರಲ್ಲಿ ನಮ್ಮ ತಂದೆಯವರೇ ಚಾಲನೆ ಕೊಟ್ಟಿದ್ದರು. ಆಗ ನಾನು ತುಂಬಾ ಚಿಕ್ಕವನಿದ್ದೆ. ಡಾ. ರಾಜ್‌ಕುಮಾರ್‌ ಮತ್ತು ಎನ್‌ಟಿಆರ್‌, ಇವರಿಬ್ಬರು ನಟಿಸಿದ ಶ್ರೀ ಕೃಷ್ಣದೇವರಾಯರ ಪಾತ್ರವನ್ನೂ ನೋಡಿ, ತುಂಬಾ ಖುಷಿಪಟ್ಟಿದ್ದೇನೆ. ಆದರೆ, ಸರ್ಕಾರಕ್ಕೆ ಈ ಮೂಲಕ ನನ್ನದೊಂದು ವಿನಂತಿ: ಕೃಷ್ಣದೇವರಾಯರ ಕುರಿತು ಸಂಶೋಧನಾತ್ಮಕವಾಗಿ ಪರಿಶೀಲಿಸಿ, ಅವರ ನಿಜವಾದ ಚಿತ್ರವನ್ನು ನಿರ್ಮಿಸಬೇಕಿದೆ. ಇಲ್ಲದಿದ್ದರೆ, ಕರ್ನಾಟಕದಲ್ಲಿ ಕೃಷ್ಣದೇವರಾಯರೆಂದರೆ ರಾಜ್‌ಕುಮಾರರ ಮುಖ, ಆಂಧ್ರದಲ್ಲಿ ಎನ್‌ಟಿಆರ್‌ರ ಮುಖವೇ ಬಳಸಲ್ಪಡುತ್ತದೆ.

– ಕೃಷ್ಣದೇವರಾಯರ “ಆಮುಕ್ತಮೌಲ್ಯದ’ವನ್ನು ಓದಿದ್ದೀರಾ?
ಓದಿದ್ದೇನೆ. ಆದರೆ, ಇಂಗ್ಲಿಷ್‌ಗೆ ಅನುವಾದಿತಗೊಂಡ ಕೃತಿಯನ್ನು ಓದಿದ್ದೇನೆ. ಬಹಳ ಅರ್ಥಪೂರ್ಣ ಸಂಗತಿಗಳ ಕೃತಿ.

– ತೆನಾಲಿರಾಮರ “ತೆನಾಲಿ’ ಊರಿಗೆ ಹೋಗಿದ್ದೀರಾ?
ಇಲ್ಲ, ಇನ್ನೂ ಹೋಗಿಲ್ಲ. ಅಲ್ಲಿಗೆ ಹೋಗಬೇಕು ಅಂತ ತುಂಬಾ ಅನ್ನಿಸಿದ್ದಿದೆ. ಆ ದಿನಕ್ಕಾಗಿ ಕಾಯುತ್ತಿದ್ದೇನೆ.

– ನಿಮ್ಮ ಸಂಸಾರ, ಆಸಕ್ತಿ, ಅಭಿರುಚಿಯ ಬಗ್ಗೆ ತಿಳಿಸುವಿರಾ?
ನಾನೀಗ ತಾಯಿ ರಾಜಮಾತಾ ಚಂದ್ರಕಾಂತಾದೇವಿ, ಪತ್ನಿ ರತ್ನಶ್ರೀ, ಮಕ್ಕಳಾದ ತಿರುಮಲ ವೆಂಕಟರಾಯ, ಶಿವರಾಯ ಕುಮಾರಿ, ಕೃಷ್ಣರಾಯ ಕುಮಾರಿಯರ ಜೊತೆ ವಾಸವಾಗಿದ್ದೇನೆ. ಮಗ ಇಂಗ್ಲೆಂಡಿನ ಡರಹಂ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಓದುತ್ತಿದ್ದಾನೆ. ಹೆಣ್ಣು ಮಕ್ಕಳು ಹೊಸಪೇಟೆಯಲ್ಲಿ ನಮ್ಮದೇ ವಿದ್ಯಾಸಂಸ್ಥೆಯಾದ “ದೀಪಯಾನ’ದಲ್ಲಿ 7ನೇ ತರಗತಿ ಓದುತ್ತಿದ್ದಾರೆ. ಪ್ರವಾಸ, ಇತಿಹಾಸದ ಅಧ್ಯಯನದಲ್ಲಿ ನನಗೆ ಖುಷಿ ಸಿಗುತ್ತಿದೆ.

– ಸಂದರ್ಶನ: ಲಕ್ಷ್ಮೀಶ್‌ ಸೋಂದಾ, ಇತಿಹಾಸ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next