ಲಕ್ಷ್ಮೇಶ್ವರ: ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನ ಭರಾಟೆ ಜೋರಾಗಿದೆ. ಮಾರುಕಟ್ಟೆಗೆ ವಿವಿಧೆಡೆಯಿಂದ ಆಪೂಸ್, ಸಿಂಧೂರ, ಕಲ್ಮಿ, ತೋತಾಪುರಿ, ನೀಲಂ ವಿವಿಧ ತಳಿಗಳ ಹಣ್ಣುಗಳು ಲಗ್ಗೆ ಇಟ್ಟಿದ್ದು, ಹಣ್ಣುಗಳ ರಾಜ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಎಲ್ಲರ ಬೇಡಿಕೆಯ ಆಪೂಸ್ ತಳಿ ಮಾವಿನ ಹಣ್ಣು ಪ್ರತಿ ಡಜನ್‌ಗೆ 250ರಿಂದ 400 ರೂ. ವರೆಗೂ ಮಾರಾಟವಾಗುತ್ತಿದೆ. ಅದೇ ರೀತಿ ವಿವಿಧ ತಳಿಯ ಮಾವಿನ ಹಣ್ಣುಗಳು ಆಕಾರ, ಗುಣಮಟ್ಟದ ಆಧಾರದಲ್ಲಿ ಇದೀಗ 200, 150, 100 ರೂ. ವರೆಗೆ ಮಾರಾಟವಾಗುತ್ತಿವೆ. ಮಾರುಕಟ್ಟೆಯ ರಸ್ತೆ ಪಕ್ಕದಲ್ಲಿನ ಹಣ್ಣುಗಳು ಎಲ್ಲರ ಗಮನ ಸೆಳೆಯುತ್ತಿದ್ದರೂ ಬೆಲೆ ಮಾತ್ರ ಜೇಬಿಗೆ ಬಿಸಿ ತಾಗಿಸುವಂತಿದೆ.
ದುಬಾರಿ ಇದ್ದರೂ ವರ್ಷಕ್ಕೆ ಒಮ್ಮೆಯಾದರೂ ಸೀಕರಣೆ ಮಾಡುವುದು ಅನಿವಾರ್ಯ. ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು, ಬೀಗರು ಹಣ್ಣು ತರುವಂತೆ ಒತ್ತಾಯಿಸುತ್ತಾರೆ. ಆದರೆ ಬರಗಾಲದಿಂದ ಕೈಯಲ್ಲಿ ಕಾಸಿಲ್ಲದಿದ್ದರೂ ಡಜನ್ ಅಲ್ಲದಿದ್ದರೂ ಅರ್ಧ ಡಜನ್ ಆದರೂ ಒಯ್ಯಲೇಬೇಕು ಎನ್ನುತ್ತಾರಾರೆ ಗ್ರಾಹಕರು.
Advertisement
ಈ ವರ್ಷ ಸರಿಯಾಗಿ ಮಳೆಯಾಗದೇ ತೇವಾಂಶ ಕೊರತೆ ಮತ್ತು ಸೂಕ್ತ ವಾತಾವರಣವಿಲ್ಲದ್ದರಿಂದ ಹಣ್ಣುಗಳ ಇಳುವರಿ ಕಡಿಮೆಯಾಗಿದ್ದು, ಸಹಜವಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಹಣ್ಣುಗಳ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಹಣ್ಣು ಖರೀದಿಸಲು ವಿಚಾರಿಸುವಂತಾಗಿದೆ. ಆದರೆ ಹಬ್ಬದ ಸಂದರ್ಭ, ರಜಾ ದಿನಗಳಾಗಿದ್ದರಿಂದ ಮನೆಗೆ ಬರುವ ಬೀಗರಿಗೆ, ಮಕ್ಕಳಿಗೆ ಹೋಳಿಗೆ, ಚಪಾತಿ ಜತೆ ಮಾವಿನ ಸೀಕರಣೆ ಮಾಡುವುದು ಸಂಪ್ರದಾಯವೇ ಆದಂತಾಗಿರುತ್ತದೆ. ಇದರಿಂದ ಸಂತೆಗೆ ಬರುವ ಎಲ್ಲರೂ ತಮ್ಮ ಶಕ್ತ್ಯಾನುಸಾರ ಮಾವಿನ ಹಣ್ಣು, ಬಾಳೆಹಣ್ಣು, ಬೆಲ್ಲ, ಹಿಟ್ಟು, ಕಡಲೆ ಬೆಳೆ ಖರೀದಿಸುತ್ತಾರೆ. ಮೂರು ತಿಂಗಳ ಮಾವಿನ ಹಣ್ಣಿನ ಸುಗ್ಗಿಯಲ್ಲಿಯೂ ಜನರು ಕೇವಲ ಒಂದೆರಡು ಬಾರಿ ಮಾತ್ರ ಮಾವಿನ ಹಣ್ಣಿನ ಸವಿ ಸವಿಯುವ ಪರಿಸ್ಥಿತಿಯಿದೆ. ತಾಲೂಕಿನಲ್ಲಿನ ರೈತರೇ ತಾವು ಬೆಳೆದ ಹಣ್ಣನ್ನು ನೇರವಾಗಿ ಮಾರುಕಟ್ಟೆಗೆ ತಂದು ಮಾರುತ್ತಿರುವುದರಿಂದ ಹಣ್ಣಿನ ಬೆಲೆಯಲ್ಲಿ ವಿನಾಯಿತಿ ಸಿಕ್ಕಂತಾಗಿದೆ. ಆದರೆ ಪ್ರತಿವರ್ಷಕ್ಕಿಂತ ಈ ವರ್ಷ ಬೇಗ ಮಾವಿನ ಸೀಜನ್ ಮುಕ್ತಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.