Advertisement

ಹಣ್ಣುಗಳ ರಾಜನಿಗೆ ಈಗ ಭಾರಿ ಡಿಮ್ಯಾಂಡ್‌

12:00 PM Apr 27, 2019 | pallavi |

ಹುನಗುಂದ: ಹಣ್ಣುಗಳ ರಾಜ ಎಂದೇ ಹೆಸರುವಾಸಿಯಾದ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಇತರೆ ಹಣ್ಣಿನ ವ್ಯಾಪಾರ ಕೊಂಚ ಕಡಿಮೆಯಾದಂತೆ ಕಂಡು ಬರುತ್ತಿದೆ. ವಿವಿಧ ತಳಿಗಳ ಮಾವು ಮಾರುಕಟ್ಟೆಗೆ ಬಂದಾಗ ಮಾವು ಪ್ರಿಯರಿಗೆ ಎಲ್ಲಿಲ್ಲದ ಉತ್ಸಾಹ. ಮಾವು ಮಾರುಕಟ್ಟೆಗೆ ಬಂದ 2ರಿಂದ 3ತಿಂಗಳು ಮಾವಿನ ಹಬ್ಬವೊ ಹಬ್ಬ.

Advertisement

ಹೌದು, ಮಾವು ಮಾರುಕಟ್ಟೆಗೆ ಕಾಲಿಟ್ಟ ತಕ್ಷಣವೇ ವಿವಿಧ ತಳಿಗಳ ಆಕರ್ಷಣಿಯವಾದ ಮಾವಿನ ಹಣ್ಣಿನ ಮಾಟ, ವಿಶಿಷ್ಟತೆಯಿಂದ ಕೂಡಿದ ಗಾತ್ರ, ಸುವಾಸನೆ ಗ್ರಾಹಕರನ್ನು ಸೆಳೆಯುತ್ತದೆ. ವರ್ಷಕ್ಕೆ ಒಂದು ಸಾರಿ ಬರುವ ಈ ಮಾವಿನ ಸೀಸನ್‌ ಮಾವು ನೋಡಿದ ತಕ್ಷಣ ಬಾಯಿಯಲ್ಲಿ ನೀರು ಬರುವುದು ಸ್ವಾಭಾವಿಕವಾಗಿದೆ.

ಚಿಕ್ಕವರಿಂದ ದೊಡ್ಡವರು ಮಾವು ಕಂಡಾಕ್ಷಣ ಮನಸ್ಸು ಅದರತ್ತ ಸೆಳೆದು ಮಾವಿನ ಹಣ್ಣಿನ ಸಿಹಿಯನ್ನು ಸವಿಯಬೇಕು. ಹೋಳಿಗೆ ಮತ್ತು ಚಪಾತಿಯೊಂದಿಗೆ ಮಾವಿನ ಹಣ್ಣಿನ ಶಿಕರಣೆ ಮಾಡಿ ಮನೆಮಂದಿಗೆ ಮತ್ತು ಮನೆಗೆ ಬಂದ ಅತಿಥಿಗಳಿಗೆ ಊಣ ಬಡಿಸಬೇಕು ಎಂದು ಹಣ್ಣಿನ ಖರೀದಿಗೆ ಮುಂದಾದರೇ ಅದರ ದರ ಕೇಳಿ ದಂಗ್ಗು ಬಡಿದು ಬರಿ ಕೈಯಲ್ಲಿ ಮರಳಿ ಮನೆಯ ಕಡೆಗೆ ಮುಖ ಮಾಡುತ್ತಿದ್ದಾರೆ.

ಬೆಳೆ ಕಡಿಮೆ, ಬೆಲೆ ದುಬಾರಿ: ಪ್ರತಿ ವರ್ಷ ಮಾವು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಈ ಬಾರಿ ಇಳುವರಿ ಕಡಿಮೆಯಾಗಿದ್ದರಿಂದ ಮಾವಿನ ಹಣ್ಣು ತಡವಾಗಿ ಮಾರುಕಟ್ಟೆಗೆ ಬಂದಿದೆ. ಬೆಲೆ ಮಾತ್ರ ದುಬಾರಿ ಆಗಿರುವುದರಿಂದ ಸಾಮಾನ್ಯ ಜನರಿಗೆ ಕೊಳ್ಳುವ ಶಕ್ತಿ ಇಲ್ಲದಂತಾಗಿದೆ. ಮಾವಿನ ಸೀಸನ್‌ ಬೇಸಿಗೆಯಲ್ಲಿ ಬರುವುದರಿಂದ ಉಷ್ಣಾಂಶದ ಪ್ರಭಾವದಿಂದ ಮಾವು ಹೂವು ಬಿಡುವುದು ಕಡಿಮೆಯಾಗಿ ಬೆಳೆಯು ಕುಂಠಿತಗೊಂಡು ಕೆಲವೇ ಕೆಲವು ತಳಿಗಳ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿದೆ. ಪ್ರತಿ ವರ್ಷ 2 ರಿಂದ 3 ಕ್ವಿಂಟಲ್ ಹಣ್ಣು ಮಾರಾಟವಾಗುತ್ತಿತ್ತು. ಮಾವಿನ ಬೆಲೆಯು ಕಳೆದ ವರ್ಷಕ್ಕಿಂತ ದರದಲ್ಲಿ 10 ರಿಂದ 20 ರೂ. ಹೆಚ್ಚಳ ಆಗಿರುವುದರಿಂದ ಗ್ರಾಹಕರಿಗೆ ಅದು ದುಬಾರಿ ಎನ್ನಿಸಿ ಕೊಳ್ಳಲು ಮುಂದೆ ಬರುತ್ತಿಲ್ಲ. ಇದರಿಂದ ಮಾವಿನ ವ್ಯಾಪಾರದಲ್ಲಿ ಈ ಬಾರಿ ಬಹಳಷ್ಟು ನಷ್ಟವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಮಾವಿನ ವ್ಯಾಪಾರಸ್ಥರು.

ಸ್ಥಳೀಯ ತಳಿಯ ಮಾವು ಇಲ್ಲ: ಮೂರು ನಾಲ್ಕು ವರ್ಷಗಳ ಹಿಂದೆ ಸ್ಥಳೀಯ ಮಾವಿನ ಹಣ್ಣಿನ ತಳಿಗಳು ಏಪ್ರಿಲ್ ಮೊದಲ ವಾರದಲ್ಲಿಯೇ ಮಾರುಕಟ್ಟೆಗೆ ಬರುತ್ತಿದ್ದುದ್ದರಿಂದ ಬೆಲೆ ಕಡಿಮೆ ಇರುತ್ತಿತ್ತು ಆಗ ಕೊಂಡುಕೊಳ್ಳುವರ ಸಂಖ್ಯೆಯು ಕೂಡಾ ಜಾಸ್ತಿಯಾಗಿತ್ತು. ಆದರೆ ಈ ವರ್ಷ ಬಾದಾಮಿ, ಮಲ್ಲಿಕಾ, ಕೇಸರ, ಸಬ್ಬಸಗಿ ಸೇರಿದಂತೆ ವಿವಿಧ ಸ್ಥಳೀಯ ಮಾವುಗಳು ಇದುವರೆಗೂ ಮಾರುಕಟ್ಟೆಗೆ ಬಂದಿಲ್ಲ. ಇದರಿಂದ ಬೆಲೆ ಏರಿಕೆಯಾಗಿದೆ.

Advertisement

ವಿವಿಧ ಮಾವುಗಳ ತಳಿಗಳು: ರತ್ನಾಗಿರಿಯಿಂದ ಬರುವ ಆಪೋಸ್‌ ಮಾವು ಡಜನ್‌ಗೆ 300ರೂ, ಸೋಲಾಪುರದ ಬದಾಮ ತಳಿಯು 150 ರೂ ಕೆ.ಜಿ, ಕೇಸರ 250 ರೂ ಕೆ.ಜಿ, ಆಂಧ್ರದ ಮಲಗೋಬ ಮತ್ತು ಮಲ್ಲಿಕಾ ತಳಿಯು 60 ರಿಂದ 70 ರೂ ಕೆ.ಜಿ, ಸ್ಥಳೀಯ ಗೋವಾ ಮಾವು ಡಜನ್‌ಗೆ 120 ರೂ, ರಾಜಸ್ತಾನದ ತೋತಪುರಿ 200 ರೂ ಕೆ.ಜಿಯಂತೆ ಮಾರಾಟವಾಗುತ್ತಿವೆ. ರಾಯಚೂರ, ಗಂಗಾವತಿ, ಕನಕಗಿರಿ ಸೇರಿದಂತೆ ಕೋಲಾರದ 16 ವಿವಿಧ ಹಣ್ಣುಗಳು ದೇಶದ ನಾನಾ ಕಡೆಗೆ ರಪ್ತಾಗುತ್ತಿವೆ. ಆದರೆ ಈ ಬಾರಿ ಅವುಗಳು ಇನ್ನು ಮಾರುಕಟ್ಟೆಗೆ ಬರದೇ ಇರುವುದರಿಂದ ಬೆಲೆ ಏರಿಕೆಯಾಗಿದೆ. ಇನ್ನು 15 ದಿನಗಳಲ್ಲಿ ಎಲ್ಲ ತಳಿಗಳು ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಆಗ ಬೆಲೆ ಕಡಿಮೆ ಆಗಬಹುದು.

ನಮ್ಮ ಕಡೆಗೆ ಆಪೋಸ್‌, ಬದಾಮ, ಮಲಗೋಬ, ಪೈರಿ, ಕೇಸರ್‌ ಹಣ್ಣುಗಳಿಗೆ ಬಲು ಬೇಡಿಕೆಯಿದೆ. ಆದರೆ ಇದುವರೆಗೆ ಮಾರುಕಟ್ಟೆಗೆ ಬರದೇ ಇರುವುದರಿಂದ ಬೆಲೆ ಹೆಚ್ಚಾಗಿದೆ. ನಾವು ಹೆಚ್ಚಾಗಿ ರತ್ನಾಗಿರಿ, ಸ್ಥಳೀಯ ರಾಯಚೂರ, ಗಂಗಾವತಿ ಹಣ್ಣುಗಳನ್ನು ಬಹಳಷ್ಟು ತರಿಸಲಾಗುತ್ತದೆ. ಆದರೆ ಸದ್ಯ ಆ ಭಾಗದಿಂದ ಹಣ್ಣು ಬಂದಿಲ್ಲಾ ಅಲ್ಲಿಂದ ಹಣ್ಣು ಬಂದರೇ ಗ್ರಾಹಕರಿಗೆ ಬೆಲೆ ಕಡಿಮೆಯಾಗಲಿದೆ.
•ಮಹಮ್ಮದ್‌ಯುಸೀಫ್‌ ವಚವಚ್ಚಿ, ಮಾವು ವ್ಯಾಪಾರಸ್ಥ, ಹುನಗುಂದ.

•ಮಲ್ಲಿಕಾರ್ಜುನ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next