ಶ್ರೀನಗರ: ಕಳೆದ ಜುಲೈಯಲ್ಲಿ ನಡೆದ ಅಮರನಾಥ ಯಾತ್ರಿಕರ ಮೇಲಿನ ದಾಳಿಗೆ ಭದ್ರತಾ ಪಡೆ ಕೊನೆಗೂ ಪ್ರತೀಕಾರ ತೀರಿಸಿಕೊಂಡಿದೆ. 7 ಮಂದಿ ಯಾತ್ರಿಕರನ್ನು ಬಲಿ ತೆಗೆದುಕೊಂಡ ಎಲ್ಲ ಉಗ್ರರನ್ನೂ ಹೊಡೆದು ರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.
ಮಂಗಳವಾರ ದಕ್ಷಿಣ ಕಾಶ್ಮೀರದ ಖಾಜಿ ಕುಂಡ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪಾಕಿಸ್ಥಾನದ ಇಬ್ಬರ ಸಹಿತ ಮೂವರು ಲಷ್ಕರ್ ಉಗ್ರರನ್ನು ಹತ್ಯೆಗೈಯಲಾಗಿದ್ದು, ಒಬ್ಬನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ಎಸ್.ಪಿ. ವೇದ್ ತಿಳಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಲಷ್ಕರ್-ಎ-ತಯ್ಯಬಾದ ಕಾರ್ಯಕಾರಿ ಕಮಾಂಡರ್ ಆಗಿದ್ದ ಅಬು ಇಸ್ಮಾಯಿಲ್‌ನನ್ನು ಶ್ರೀನಗರದ ಹೊರ ವಲಯದಲ್ಲಿ ಸೆಪ್ಟಂಬರ್‌ನಲ್ಲೇ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಈತ ಅಮರನಾಥ ಯಾತ್ರೆಯ ಪ್ರಮುಖ ಸಂಚುಕೋರನಾಗಿದ್ದ.
ಹೇಗೆ ನಡೆಯಿತು ಕಾರ್ಯಾಚರಣೆ?: ಸೋಮವಾರ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇನಾ ಗಸ್ತು ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ಆರಂಭಿಸಿದರು. ಕೂಡಲೇ ಗಸ್ತು ವಾಹನದಲ್ಲಿದ್ದ ಯೋಧರು ಹಾಗೂ ರಸ್ತೆ ರಿಪೇರಿ ಕಾರ್ಯದಲ್ಲಿ ತೊಡಗಿದ್ದ ಸೈನಿಕರು ಪ್ರತಿದಾಳಿ ಆರಂಭಿಸಿದರು. ಹೀಗಾಗಿ, ಅಲ್ಲಿಂದ ತಪ್ಪಿಸಿಕೊಂಡ ಉಗ್ರರು ಸಮೀಪದ ಗ್ರಾಮದ ಮನೆಯೊಂದರಲ್ಲಿ ಅವಿತರು. ತತ್‌ಕ್ಷಣ ಭದ್ರತಾ ಪಡೆಗಳು ಆ ಮನೆಯನ್ನು ಸುತ್ತುವರಿದು, ಎನ್‌ಕೌಂಟರ್ ಆರಂಭಿಸಿದರು. ಗುಂಡಿನ ಚಕಮಕಿ ಹಾಗೂ ಶೋಧ ಕಾರ್ಯವು ಮಂಗಳವಾರ ಬೆಳಗ್ಗಿನವರೆಗೂ ನಡೆಯಿತು. ಕೊನೆಗೆ ಸ್ಥಳೀಯ ಉಗ್ರ ಯಾವಾರ್ ಬಶೀರ್, ಪಾಕಿಸ್ಥಾನಿಗಳಾದ ಅಬು ಫುರ್ಕಾನ್ ಮತ್ತು ಅಬು ಮವಿಯಾನನ್ನು ಕೊಲ್ಲಲಾಯಿತು. ಈ ಪೈಕಿ ಫುರ್ಕಾನ್ ಸೆಪ್ಟಂಬರ್‌ನಲ್ಲಿ ಅಬು ಇಸ್ಮಾಯಿಲ್ ಕೊಲೆಯಾದ ಅನಂತರ ಲಷ್ಕರ್‌ನ ನೇತೃತ್ವವನ್ನು ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಎನ್‌ಕೌಂಟರ್ ಸ್ಥಳದಿಂದ ಪರಾರಿಯಾಗಿದ್ದ ಒಬ್ಬ ಉಗ್ರ, ಅನಂತ್‌ನಾಗ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆತನನ್ನೂ ಬಂಧಿಸಲಾಗಿದೆ ಎಂದು ವೇದ್ ಮಾಹಿತಿ ನೀಡಿದ್ದಾರೆ.
ಜುಲೈ ತಿಂಗಳಲ್ಲಿ ಅನಂತ್‌ನಾಗ್ ಜಿಲ್ಲೆಯ ಬೊಟೆಂಗೋ ಗ್ರಾಮದಲ್ಲಿ 56 ಮಂದಿ ಅಮರನಾಥ ಯಾತ್ರಿಕರನ್ನು ಹೊತ್ತೂಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ್ದ ಉಗ್ರರು, ಐವರು ಮಹಿಳಾ ಯಾತ್ರಿಕರ ಸಹಿತ 7 ಮಂದಿಯನ್ನು ಹತ್ಯೆಗೈದಿದ್ದರು.