ಸಾಗರ: ಕಳೆದ ಕೆಲ ದಿನಗಳಿಂದ ತಾಲೂಕಿನ ಕಾರ್ಗಲ್‌ನಲ್ಲಿ ಅನೇಕ ಜಾನುವಾರುಗಳು ಸಾವನ್ನಪ್ಪುತ್ತಿದ್ದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪಶು ಇಲಾಖೆ, ಸಾವನ್ನಪ್ಪುತ್ತಿರುವ ಜಾನುವಾರು ಮೇಲ್ನೋಟಕ್ಕೆ ರಕ್ತಹೀನತೆ ಹಾಗೂ ಹೊಟ್ಟೆಯಲ್ಲಿ ಮೇವು ಕಟ್ಟಿಕೊಂಡು ಇ-ಕೋಲಿ ಸೂಕ್ಷಾಣು ಜೀವಿಗಳಿಂದ ವಿಷವಸ್ತು ಸ್ರವಿಸಿ ಏಕಾಏಕಿ ಮೃತಪಟ್ಟಿರುವುದು ಕಂಡುಬರುತ್ತಿದೆ. ಸಾವಿಗೆ ಮಂಗನ ಕಾಯಿಲೆಯ ವೈರಸ್ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಜೋಗ್- ಕಾರ್ಗಲ್ ಪಟ್ಟಣ ಪಂಚಾಯತ್, ಪಶುಪಾಲನಾ ಇಲಾಖೆ ಹಾಗೂ ಪಶುವೈದ್ಯ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ಜನಜಾಗೃತಿ ಶಿಬಿರದಲ್ಲಿ ವಿಷಯ ಪ್ರಸ್ತಾಪಿಸಿದ ಶಿವಮೊಗ್ಗ ಪಶುವೈದ್ಯ ಕಾಲೇಜಿನ ಡೀನ್ ಡಾ| ಕೆ.ಸಿ. ವೀರಣ್ಣ, ಈಗಾಗಲೇ ನಿರ್ದಿಷ್ಟ ಸ್ಥಳದಲ್ಲಿ ಮೃತಪಟ್ಟ ಮಲೆನಾಡು ಗಿಡ್ಡ ರಾಸುಗಳ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ತಜ್ಞರಿಂದ ಶವಪರೀಕ್ಷೆ ನಡೆಸಲಾಗಿದೆ. ಅಂಗಾಂಶ ಮಾದರಿಗಳನ್ನು ಪರೀಕ್ಷೆಗೆ ಪಡೆಯಲಾಗಿದೆ. ಜೊತೆಗೆ ಅಲ್ಲಿರುವ ನೀರು, ವಿಷಕಾರಿ ಗಿಡಗಳನ್ನು ಸಹ ಸಂಗ್ರಹಿಸಲಾಗಿದೆ. ಹೆಚ್ಚಿನ ಜಾನುವಾರುಗಳ ಉದರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬಂದಿದೆ ಎಂದರು.
ನಗರದ ತ್ಯಾಜ್ಯ ವಸ್ತುಗಳನ್ನು ತಿನ್ನದಂತೆ ನೋಡಿಕೊಳ್ಳಬೇಕಾದುದು ಜಾನುವಾರು ಮಾಲೀಕರ ಜವಾಬ್ದಾರಿಯಾಗಿದೆ. ಜಾನುವಾರುಗಳನ್ನು ಸಂತೆಯ ತ್ಯಾಜ್ಯ, ಕಲ್ಯಾಣ ಮಂಟಪದ ತ್ಯಾಜ್ಯ ಹಾಗೂ ಅಕ್ಕಿ ಮಿಲ್ಲಿನ ಹೊಟ್ಟಿನಿಂದ ದೂರವಿಡಬೇಕಾಗಿದೆ. ರೈತರ ಹಾಗೂ ಇಲಾಖೆಯ ಜೊತೆ ಪಶುವೈದ್ಯ ಕಾಲೇಜು ಸಹಕಾರ ನೀಡಲು ಸದಾ ಸಿದ್ಧವಿದೆ ಎಂದರು.
ಜೋಗ್- ಕಾರ್ಗಲ್ ಪಪಂ ಸದಸ್ಯ ಸಂತೋಷ ಕುಮಾರ್ ಮಾತನಾಡಿ, ಮಲೆನಾಡು ಗಿಡ್ಡ ರಾಸುಗಳು ನಶಿಸುತ್ತಿರುವ ಈ ದಿನಗಳಲ್ಲಿ ನಿಗೂಢವಾಗಿ ಸಾಯುತ್ತಿರುವ ಸಂಗತಿ ದುರದೃಷ್ಟಕರ. ಇದರ ಬಗ್ಗೆ ಪಶುಪಾಲನಾ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಕ್ರಮ ವಹಿಸಿದರೂ ಸಾವು ಮುಂದುವರಿದಿರುವುದು ದುಃಖದ ವಿಷಯ. ತಜ್ಞರು ಶ್ರಮಿಸಿ ಆದಷ್ಟು ಶೀಘ್ರ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು. ಪಶು ವೈದ್ಯ ಕಾಲೇಜಿನ ನಿಗೂಢ ರೋಗ ವಿಭಾಗದ ಮುಖ್ಯಸ್ಥ ಡಾ| ಎನ್.ಬಿ. ಶ್ರೀಧರ ಮಾತನಾಡಿ, ಸಾಮಾನ್ಯವಾಗಿ ರಾಸುಗಳು ಮೇಯುವ ಜಾಗದಲ್ಲಿ ವಾಯುವಿಳಂಗ, ಕರಿಬಸರಿ, ಕಣಗಿಲೆ ಹಾಗೂ ಮುಳ್ಳಿಲ್ಲದ ನಾಚಿಕೆ ತುಂಬಾ ವಿಷಕಾರಿಯಾಗಿದ್ದು ಕಳೆದ ಹತ್ತು ವರ್ಷಗಳಿಂದ ಸತತ ಸಂಶೋಧನೆ ನಡೆಸಿ ಔಷಧ ಕಂಡುಹಿಡಿಯಲಾಗಿದೆ ಎಂದರು.
ಪಪಂ ಅಧ್ಯಕ್ಷೆ ಶ್ರೀಮತಿ ವೆಂಕಟೇಶ, ಉಪಾಧ್ಯಕ್ಷೆ ವೆರೋನಿಕಾ ಲೋಪಿಸ್, ಸದಸ್ಯರಾದ ಗುರುಸಿದ್ದಾಚಾರಿ, ಎಎಸ್‌ಐ ಗಿಲ್ಬರ್ಟ್ ಡಯಾಸ್, ಕೆಪಿಸಿಯ ದೇವರಾಜ್ ಇದ್ದರು. ಪಪಂ ಮುಖ್ಯಾಧಿಕಾರಿ ಲಕ್ಷ್ಮೀನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಗರ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ಎನ್.ಎಚ್. ಶ್ರೀಪಾದ ರಾವ್ ನಿರೂಪಿಸಿದರು. ಕಾರ್ಗಲ್ ಪಶುವೈದ್ಯ ಡಾ| ಮನೋಹರ್ ಇದ್ದರು.