Advertisement

ಪ್ರಮುಖ ಆಶ್ವಾಸನೆ ಈಡೇರಿಸಿದಂತಾಗಿದೆ ಒಬಿಸಿ ಸಬಲೀಕರಣ ಪ್ರಯತ್ನ

08:33 AM Aug 24, 2017 | |

ಒಬಿಸಿ ಕೆನೆಪದರವನ್ನು ಹೆಚ್ಚಿಸುವುದರ ಮೂಲಕ ಕೇಂದ್ರ ಸರಕಾರ ಹಿಂದುಳಿದ ವರ್ಗದವರಿಗೆ ನೀಡಿದ ಪ್ರಮುಖ ಆಶ್ವಾಸನೆಯೊಂದನ್ನು ಈಡೇರಿಸಿದಂತಾಗಿದೆ.

Advertisement

ಇತರ ಹಿಂದುಳಿದ ವರ್ಗಗಳ ಆದಾಯ ಕೆನೆ ಪದರವನ್ನು 6ರಿಂದ 8 ಲ. ರೂಕ್ಕೇರಿಸುವ ನಿರ್ಧಾರ ಈ ವರ್ಗದಲ್ಲಿರುವ ಅನೇಕ ಜಾತಿಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಇದರ ಜತೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಉಪ ವರ್ಗೀಕರಣದ ಶಿಫಾರಸನ್ನು ಕೂಡ ಸರಕಾರ ಅಂಗೀಕರಿಸಿದ್ದು, ಇದರ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸುವುದಾಗಿ ಹೇಳಿದೆ. ಈ ಶಿಫಾರಸಿನ ಪ್ರಕಾರ ಒಬಿಸಿಯಡಿಯಲ್ಲಿ ಬರುವವರನ್ನು ತೀರಾ ಹಿಂದುಳಿದವರು, ಹೆಚ್ಚು ಹಿಂದುಳಿದವರು ಮತ್ತು ಹಿಂದುಳಿದವರು ಎಂದು ವರ್ಗೀಕರಿಸಲಾಗುವುದು. ಈ ಪೈಕಿ ತೀರಾ ಹಿಂದುಳಿದವರು ಮತ್ತು ಹೆಚ್ಚು ಹಿಂದುಳಿದವರನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು. ಅದರಲ್ಲೂ ತೀರಾ ಹಿಂದುಳಿದವರನ್ನು ಅಲೆಮಾರಿ ಮುಂತಾದ ವರ್ಗಗಳಿಗೆ ಸಮಾನವಾಗಿ ಪರಿಗಣಿಸಬೇಕೆಂಬ ಶಿಫಾರಸು ಕೂಡ ಇದೆ. ಸಂಪತ್ತಿನ ಮತ್ತು ಅವಕಾಶಗಳ ಸಮಾನ ಹಂಚಿಕೆಗೆ ಈ ರೀತಿಯ ವರ್ಗೀಕರಣ ಅಗತ್ಯ. ಸಾಕಷ್ಟು ಶ್ರೀಮಂತರಾಗಿದ್ದರೂ ಒಬಿಸಿ ವರ್ಗಕ್ಕೆ ಸೇರಿದ ಕಾರಣಕ್ಕೆ ಮೀಸಲಾತಿಯ ಲಾಭವನ್ನು ಪಡೆಯುವುದನ್ನು ತಪ್ಪಿಸಲು ಈ ವರ್ಗೀಕರಣ ಸಹಕಾರಿ. 

 ಒಬಿಸಿ ಕೆನೆಪದರವನ್ನು ಹೆಚ್ಚಿಸುವುದರ ಮೂಲಕ ಕೇಂದ್ರ ಸರಕಾರ ಹಿಂದುಳಿದ ವರ್ಗದವರಿಗೆ ನೀಡಿದ ಪ್ರಮುಖ ಆಶ್ವಾಸನೆಯೊಂದನ್ನು ಈಡೇರಿಸಿದಂತಾಗಿದೆ. ಅಂತೆಯೇ ಜಾಟರು, ಮರಾಠರು, ಪಟಿದಾರ್‌ಸೇರಿದಂತೆ ಹಲವು ಮೇಲ್ವರ್ಗದ ಸಮುದಾಯಗಳು ಹಿಂದುಳಿದ ವರ್ಗಗಳ ಗುಂಪಿಗೆ ಸೇರಲು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿಯೂ ಈ ನಿರ್ಧಾರಕ್ಕೆ ಮಹತ್ವವಿದೆ. ಕೆನೆಪದರ ಹೆಚ್ಚುವುದರಿಂದ ಸರಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೃಷ್ಟಿಯಾಗುವ ಭಾರೀ ಪ್ರಮಾಣದ ಉದ್ಯೋಗವಕಾಶಗಳನ್ನು ಬಾಚಿಕೊಳ್ಳಲು ಈ ಸಮುದಾಯಗಳ ಮೀಸಲಾತಿ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ ಒಬಿಸಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ನೌಕರಿಗಳಲ್ಲಿ ಶೇ. 27 ನೌಕರಿಯಿದ್ದರೂ ಶೇ. 12ರಿಂದ 15 ಸ್ಥಾನಗಳಷ್ಟೇ ತುಂಬುತ್ತಿವೆ. ಹೆಚ್ಚಿನ ಕುಟುಂಬಗಳು ಒಬಿಸಿಗೆ ವ್ಯಾಪ್ತಿಗೆ ಬರುವುದರಿಂದ ಅಭ್ಯರ್ಥಿಗಳಿಲ್ಲದೆ ಸ್ಥಾನ ಖಾಲಿ ಉಳಿಯುವ ಸಮಸ್ಯೆ ತಪ್ಪಲಿದೆ.  ಒಬಿಸಿ ವರ್ಗವನ್ನು ಸಶಕ್ತೀಕರಣಗೊಳಿಸುವ ಪ್ರಯತ್ನದಲ್ಲಿ ಬಿಜೆಪಿಯ ರಾಜಕೀಯ ಲಾಭನಷ್ಟದ ಲೆಕ್ಕಾಚಾರವೂ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಒಬಿಸಿ ಅತ್ಯಂತ ಬಲಿಷ್ಟವಾದ ಮತಬ್ಯಾಂಕ್‌ ಆಗಿದ್ದು, ರಾಜಕೀಯದಲ್ಲಿ ಈ ವರ್ಗದ ಹಲವು ಪ್ರಭಾವಿ ನಾಯಕರು ಇದ್ದಾರೆ. ಈ ಮತಬ್ಯಾಂಕಿನ ಮೇಲೆ ಕಣ್ಣಿಟ್ಟಿರುವ ಬಿಜೆಪಿ 2019ರ ಸಾರ್ವತ್ರಿಕ ಚುನಾವಣೆಗಾಗುವಾಗ ಒಬಿಸಿ ವರ್ಗವನ್ನು ಒಲಿಸಿಕೊಳ್ಳಲು ಭಾರೀ ಕಸರತ್ತು ಮಾಡುತ್ತಿದೆ. ಭುವನೇಶ್ವರದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಇತರ ರಾಷ್ಟ್ರೀಯ ಇತರ ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆ ಮಂಡಿಸಲು ಪ್ರಯತ್ನಿಸಿದ ಮೋದಿಯನ್ನು ಅಭಿನಂದಿಸಲು ಪ್ರತ್ಯೇಕ ನಿರ್ಣಯ ಮಂಡಿಸಿರುವುದು ಒಬಿಸಿ ವರ್ಗವನ್ನು ಸಂತುಷ್ಟಗೊಳಿಸುವ ಬಿಜೆಪಿಯ ಪ್ರಯತ್ನದ ಒಂದು ಭಾಗ ಎಂದು ಭಾವಿಸಲಾಗಿದೆ. ಒಬಿಸಿ ವರ್ಗವನ್ನು ಸಶಕ್ತೀಕರಗೊಳಿಸುವ ಸಲುವಾಗಿಯೇ ಸರಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾಯಿದೆಯನ್ನು ರದ್ದುಪಡಿಸಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ಅಸ್ತಿತ್ವಕ್ಕೆ ತಂದಿದೆ. ಒಂದು ಸಿವಿಲ್‌ ಕೋರ್ಟಿಗೆ ಇರುವ ಅಧಿಕಾರ ಆಯೋಗಕ್ಕಿರುತ್ತದೆ. ನಿರ್ದಿಷ್ಟ ಜಾತಿ ವರ್ಗಗಳನ್ನು ಸಬಲೀಕರಣಗೊಳಿಸಲು ಮೀಸಲಾತಿ ಸೌಲಭ್ಯವನ್ನು ಬಳಸುವುದು ಸಾಂವಿಧಾನಿಕವಾಗಿ ಸರಿಯಾದ ನಿರ್ಧಾರವೇ ಆಗಿದ್ದರೂ ಅದರಿಂದ ಉಂಟಾಗುತ್ತಿರುವ ಸಾಮಾಜಿಕ ಕ್ಷೋಭೆಗಳನ್ನೂ ಪರಿಗಣಿಸಬೇಕು. ಪ್ರಸ್ತುತ ಮೇಲ್ವರ್ಗಕ್ಕೆ ಸೇರಿದ ಕೆಲವು ಜಾತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಜಾತಿಗಳು ಮೀಸಲಾತಿ ಸೌಲಭ್ಯದಡಿಯಲ್ಲಿರುವುದರಿಂದ ಮೇಲ್ವರ್ಗದವರಲ್ಲಿ ಸಹಜವಾಗಿಯೇ ಅಸಮಾಧಾನ ಉಂಟಾಗುತ್ತಿದೆ. ಮೇಲ್ವರ್ಗದಲ್ಲೂ ಬಡವರಿದ್ದಾರೆ. ಜನರಲ್‌ ಕೋಟಾದಲ್ಲಿದ್ದಾರೆ ಎಂಬ ಒಂದೇ ಕಾರಣದಿಂದ ಈ ಸಮುದಾಯದ ಬಡವರು ಸರಕಾರಿ ಸೌಲಭ್ಯಗಳಿಂದ ವಂಚಿತವಾಗುತ್ತಿರುವುದು ಸರಿಯಲ್ಲ. ಹೀಗಾಗಿಯೇ ಜಾತಿಯ ಬದಲು ಆರ್ಥಿಕ ಸ್ಥಿತಿಗತಿಯ ಆಧಾರದಲ್ಲಿ ಮೀಸಲಾತಿ ನೀಡಬೇಕೆಂಬ ವಾದವಿದೆ. ಸಂವಿಧಾನದಲ್ಲಿ ಮೀಸಲಾತಿಯ ಪರಿಚ್ಛೇದವನ್ನು ಸೇರಿಸುವಾಗ ಅದಕ್ಕೆ ಕಾಲಮಿತಿಯನ್ನೂ ಹಾಕಲಾಗಿತ್ತು. ಆದರೆ ಅನಂತರ ಅಧಿಕಾರಕ್ಕೆ ಬಂದ ಸರಕಾರಗಳೆಲ್ಲ ಕಾಲಮಿತಿಯನ್ನು ಜಾಣತನದಿಂದ ಮರೆತು ಮೀಸಲಾತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಅಪಾಯಕಾರಿ ಆಟ ಆಡುತ್ತಿರುವುದು ಸರಿಯಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next