Advertisement
ರಾಜ್ಯದ ಎಲ್ಲ 24 ಅಣೆಕಟ್ಟೆಗಳು ತುಂಬಿವೆ. ಅದರಲ್ಲೂ ಇಡುಕ್ಕಿ ಅಣೆಕಟ್ಟು ಸ್ಥಿತಿ ಚಿಂತಾಜಕನವಾಗಿದೆ. 26 ವರ್ಷಗಳ ಬಳಿಕ ರಾಜ್ಯದಲ್ಲಿ ಎಲ್ಲ ಅಣೆಕಟ್ಟೆಗಳ ಶಟರ್‌ಗಳನ್ನು ಏಕಕಾಲದಲ್ಲಿ ತೆರೆದು ನೀರು ಹೊರ ಬಿಟ್ಟದ್ದು ಇದೇ ಮೊದಲು. ಈ ಸಲದ ಮಳೆ 1924ರ ಮಹಾ ಪ್ರಳಯವನ್ನು ನೆನಪಿಸುವಂತಿದೆ ಎಂದು ಇಲ್ಲಿನ ಹಳಬರು ನೆನಪಿಸುತ್ತಿರುವುದು ಪರಿಸ್ಥಿತಿ ಎಷ್ಟು ಕಳವಳಕಾರಿಯಾಗಿದೆ ಎನ್ನುವುದನ್ನು ತಿಳಿಸುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ಕೇರಳ ಮಳೆ ಕೊರತೆಯಿಂದ ಚಿಂತೆಗೀಡಾಗಿತ್ತು. ಆಗಸ್ಟ್‌ನಲ್ಲೇ ರಾಜ್ಯ ಸರಕಾರ ಶೇ. 29 ಮಳೆ ಕೊರತೆಯಾಗಿರುವುದರಿಂದ ನೀರು ಮತ್ತು ವಿದ್ಯುತ್‌ನ್ನು ಮಿತವ್ಯಯಕ್ಕೆ ಯೋಜನೆಗಳನ್ನು ರೂಪಿಸಲು ತೊಡಗಿತ್ತು. ಈ ಸಲ ಪರಿಸ್ಥಿತಿ ತದ್ವಿರುದ್ಧವಾಗಿದೆ.
Related Articles
Advertisement
ಇದು ಕೇರಳದ ದುರಂತ ಮಾತ್ರವಲ್ಲ, ಇಡೀ ದೇಶ ಇಂದು ಈ ಮಾದರಿಯ ಹವಾಮಾನ ವೈಪರೀತ್ಯಕ್ಕೆ ತೆರೆದುಕೊಂಡಿದೆ. ಅಕಾಲಿಕ ಮಳೆ, ಅತಿಯಾದ ಸೆಖೆ ಇವೆಲ್ಲ ನಾವೇ ತಂದುಕೊಂಡಿರುವ ದುರಂತಗಳು.
ಅತಿಕ್ರಮಣ, ಅರಣ್ಯ ನಾಶ ಇವೇ ಮುಂತಾದ ಕೃತ್ಯಗಳಿಂದ ಸತತವಾಗಿ ಪ್ರಕೃತಿಯನ್ನು ಶೋಷಿಸಿದ ಪರಿಣಾಮವಿದು. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದರೂ ಅದನ್ನು ತಡೆಯುವ ನಿಟ್ಟಿನಲ್ಲಿ ನಾವು ನಡೆಸಿದ ಪ್ರಯತ್ನ ಅತ್ಯಲ್ಪ. ಮಳೆಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲೂ ಈ ಸಲ ಕಡಲ್ಕೊರೆತ ವಾಗಿರುವುದನ್ನು ಕಂಡಿದ್ದೇವೆ. ತಾಪಮಾನ ಏರಿಕೆಯಿಂದಾಗಿ ಸಮುದ್ರದಲ್ಲಾಗಿರುವ ವ್ಯತ್ಯಯವೇ ಇದಕ್ಕೆ ಕಾರಣ. ಆದರೂ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಶೋಷಣೆ ನಿಂತಿಲ್ಲ. ಉತ್ತರ ಭಾರತದಲ್ಲಿ ಬೀಸಿದ ಧೂಳು ಬಿರುಗಾಳಿ, ಮೇ ತಿಂಗಳಲ್ಲೇ ಆದ ಅತಿವೃಷ್ಟಿ ಇವೆಲ್ಲ ಹವಾಮಾನ ಬದಲಾವಣೆಯಿಂದ ಪ್ರಕೃತಿ ಚಕ್ರ ಬದಲಾಗಿರುವ ಪರಿಣಾಮವೇ.
ವಿಕೋಪ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸುವುದು, ಕಟ್ಟಡಗಳು, ಅಣೆಕಟ್ಟೆಗಳು, ಸೇತುವೆಗಳು ಮತ್ತಿತರ ನಿರ್ಮಾಣಗಳನ್ನು ಸುಸ್ಥಿಯಲ್ಲಿಡುವುದು ಮಾಡಲೇ ಬೇಕಾದ ಕೆಲಸ. ಇದರ ಜತೆಗೆ ತಾಪಮಾನ ಏರಿಕೆ ಮತ್ತು ಇದರಿಂದಾಗುವ ಹವಾಮಾನ ಬದಲಾವಣೆ ಯನ್ನು ತಡೆಯಲು ದೀರ್ಘಾಕಾಲಿಕ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಿಸುವುದಕ್ಕೆ ಆದ್ಯತೆ ನೀಡಬೇಕು. ಎಲ್ಲ ಸರಕಾರಗಳ ಬಜೆಟ್‌ನಲ್ಲಿ ಇಂಥ ಕಾರ್ಯಕ್ರಮಗಳಿಗೂ ಅನುದಾನ ಮೀಸಲಿಡಬೇಕು.