Advertisement

ತನಿಖೆಗೆ ತೊಡಕಾಗುತ್ತಿದೆ ಕ್ರಿಮಿನಲ್‌ಗ‌ಳ ಕೇರಳ ಸಂಪರ್ಕ

01:03 AM Jul 31, 2022 | Team Udayavani |

ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರ ಪೈಕಿ ಅನೇಕರಿಗೆ ಕೇರಳದ ಸಂಪರ್ಕ ಇರುವುದು ಪೊಲೀಸರ ತ್ವರಿತ ತನಿಖೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.

Advertisement

ಬೆಳ್ಳಾರೆಯಲ್ಲಿ ನಡೆದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮತ್ತೂಮ್ಮೆ ಕೇರಳದ ಸಂಪರ್ಕ ವಿಷಯ ಮುನ್ನೆಲೆಗೆ ಬಂದಿದೆ.

ಶೇ. 20 ಮಂದಿಗೆ ಅಡಗುದಾಣ!
ಕೊಲೆ, ಗಲಭೆಗೆ ಸಂಚು, ಡ್ರಗ್ಸ್‌ ಸಾಗಣೆ, ರೌಡಿಸಂ, ದರೋಡೆ ಮೊದಲಾದ ಹಲವು ಅಪರಾಧಗಳನ್ನು ನಡೆಸಿ ಮಂಗಳೂರು, ಕಾಸರಗೋಡು ಸಹಿತ ಕೇರಳ, ಕರ್ನಾಟಕ ರಾಜ್ಯಗಳ ಕೆಲವೆಡೆ ಅಡಗಿಕೊಳ್ಳುವವರನ್ನು ಪತ್ತೆ ಹಚ್ಚುವುದು ಉಭಯ ರಾಜ್ಯಗಳ ಪೊಲೀಸರಿಗೂ ದೊಡ್ಡ ಸವಾಲಾಗಿದೆ.

ಮಂಗಳೂರು ಪೊಲೀಸರ ಪ್ರಕಾರ ಕರ್ನಾಟಕದಲ್ಲಿ, ಮುಖ್ಯವಾಗಿ ಕರಾವಳಿ ಭಾಗದಲ್ಲಿ ನಡೆಯುವ ಅಪರಾಧ ಚಟುವಟಿಕೆ ಗಳಲ್ಲಿ ಭಾಗಿಯಾಗುವ ಆರೋಪಿಗಳ ಪೈಕಿ ಶೇ. 20ಕ್ಕಿಂತಲೂ ಹೆಚ್ಚು ಮಂದಿ ಕೇರಳದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಉಳಿದಂತೆ ಸುಮಾರು ಶೇ. 30ರಷ್ಟು ಮಂದಿ ಬೆಂಗಳೂರು ಹಾಗೂ ಶೇ. 20ರಷ್ಟು ಮಂದಿ ಮುಂಬಯಿಯಲ್ಲಿ ತಲೆಮರೆಸಿಕೊಳ್ಳುತ್ತಾರೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ಮುಂಬಯಿ, ಗೋವಾಗಳಲ್ಲಿ ಕರಾವಳಿ ಪೊಲೀಸರ ಸಮನ್ವಯ ವ್ಯವಸ್ಥೆ ಬಲಗೊಂಡಿದೆ. ಇತ್ತೀಚಿನ ವರ್ಷಗಳ ಪ್ರಕರಣಗಳಿಗೆ ಸಂಬಂಧಿಸಿ ಕೇರಳದಲ್ಲಿ ಕೆಲವರನ್ನು ಹಿಡಿದಿದ್ದರೂ ಹಳೆಯ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಬಾಕಿ ಇದೆ. ಇದೀಗ ಪ್ರವೀಣ್‌ ಹತ್ಯೆಗೂ ಕೇರಳ ನಂಟು ತಳಕು ಹಾಕಿಕೊಂಡಿದೆ. ಹಾಗಾಗಿ ಉಭಯ ರಾಜ್ಯಗಳ ಪೊಲೀಸ್‌ ಇಲಾಖೆ ಸೇರಿದಂತೆ ಆಡಳಿತ ವರ್ಗ ಉನ್ನತ ಮಟ್ಟದ ಸಮನ್ವಯ ವ್ಯವಸ್ಥೆಗೆ ಗಂಭೀರ ಚಿಂತನೆ ನಡೆಸಿವೆ.

Advertisement

ಶೀಘ್ರ ಸಮನ್ವಯ ವ್ಯವಸ್ಥೆ ನಿರೀಕ್ಷೆ
ಸಮನ್ವಯ ವ್ಯವಸ್ಥೆ ರೂಪುಗೊಂಡರೆ ಎರಡೂ ರಾಜ್ಯಗಳ ಪೊಲೀಸರು ತಮಗೆ ಅಗತ್ಯವಿರುವ ಅಪರಾಧಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲು ಅನುಕೂಲವಾಗಲಿದೆ. ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿಗಳು ಪರಸ್ಪರ ನೇರವಾಗಿ ನಿರಂತರವಾಗಿ ಸಂವಹನ ಸಾಧಿಸಲು ನೆರವಾಗಲಿದೆ ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಗಳು. ಇತ್ತೀಚೆಗೆ ಎರಡೂ ರಾಜ್ಯಗಳ ಹಿರಿಯ ಪೊಲೀಸರ ಸಭೆ ನಡೆದಿದ್ದು, ಸಮನ್ವಯ ವ್ಯವಸ್ಥೆಯೊಂದು ಶೀಘ್ರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ-ಕೇರಳ ಪೊಲೀಸರ ನಿರಂತರ ಸಮನ್ವಯಕ್ಕಾಗಿ ಜುಲೈ ಮೊದಲ ವಾರ ಉಭಯ ರಾಜ್ಯಗಳ ಪೊಲೀಸರ ಸಭೆ ನಡೆಸಿದ್ದೇವೆ. ಕಾಸರಗೋಡು ಮತ್ತು ದ.ಕ. ಎಸ್‌ಪಿಗಳು, ಮಂಗಳೂರು ಡಿಸಿಪಿ ಸಹಿತ ಅಧಿಕಾರಿಗಳು ಪಾಲ್ಗೊಂಡಿದ್ದು, ಸಮನ್ವಯ ವ್ಯವಸ್ಥೆ ಕುರಿತು ಚರ್ಚಿಸಿದ್ದೇವೆ.
–  ಎನ್‌. ಶಶಿಕುಮಾರ್‌, ಮಂಗಳೂರು ಪೊಲೀಸ್‌ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next