ನಾಗಮಂಗಲ: ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆ ತಲುಪಿಸಿ ಅವರನ್ನು ಬಡತನದಿಂದ ಮುಕ್ತಗೊಳಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿಯೇ ಪ್ರಗತಿ ಪರಿಶೀಲನೆ ಸಭೆ ನಡೆಸುವುದು ಉಪಯುಕ್ತ ಕಾರ್ಯಕ್ರಮ ಎಂದು ಹೊಣಕೆರೆ ಗ್ರಾಪಂ ಅಧ್ಯಕ್ಷ ಜಯೇಂದ್ರ ತಿಳಿಸಿದರು. ತಾಲೂಕಿನ ಹೊಣಕೆರೆ ಗ್ರಾಪಂ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ದ್ವಿತೀಯ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಸರ್ಕಾರದ ತಳಪಾಯ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಿಗುವ ಯೋಜನೆ ಗಳ ಬಗ್ಗೆ ಜನಪ್ರತಿನಿಧಿಗಳಾದ ನಮಗೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಸಾಕಾರಗೊಳಿಸಲು ಗ್ರಾಪಂ ಮಟ್ಟದಲ್ಲಿ ನಡೆಯುವ ವಿವಿಧ ಇಲಾಖೆಗಳ ಅಧಿಕಾರಿಗಳ ಕೆಡಿಪಿ ಸಭೆ ಪೂರಕವಾಗಿದೆ ಎಂದು ಹೇಳಿದರು. ಗ್ರಾಪಂ ಎನ್ನುವುದು ಸರ್ಕಾರದ ಒಂದು ತಳಪಾಯವಿದ್ದಂತೆ. ಸರ್ಕಾರ ಯಾವುದೇ ಯೋಜನೆ ರೂಪಿಸಿದರೂ, ಅದು ಗ್ರಾಪಂ ಮೂಲಕವೇ ಜನರಿಗೆ ತಲುಪಬೇಕು. ಯೋಜನೆಗೆ ಫಲಾನುಭವಿ ಸಿಗಬೇಕೆಂದಾದರೆ ಅದು ಗ್ರಾಮೀಣ ಪ್ರದೇಶದಲ್ಲಿಯೇ ಹೊರತು, ನಗರ ಪ್ರದೇಶದಲ್ಲಿ ಸಿಗಲು ಸಾಧ್ಯವಿಲ್ಲ. ಕ್ಷೇತ್ರದ ಶಾಸಕರೂ ಸೇರಿದಂತೆ ಜಿಪಂ ಹಾಗೂ ತಾಪಂ ಜನಪ್ರತಿನಿಧಿಗಳಿಗೆ ಹಳ್ಳಿಗಳ ಸಮಸ್ಯೆ ಮತ್ತು ವಿವಿಧ ಯೋಜನೆಗಳಿಗೆ ನಿಜವಾದ ಫಲಾನುಭವಿಗಳು ಯಾರೆಂದು ಗೊತ್ತಿರುವುದಿಲ್ಲ. ಹಾಗಾಗಿ ಗ್ರಾಪಂ ಮಟ್ಟದಲ್ಲಿ ಕೆಡಿಪಿ ಸಭೆಗಳನ್ನು ನಡೆಸುವ ಮೂಲಕ ಇಲಾಖೆಯ ಕಾರ್ಯಕ್ರಮ ಹಾಗೂ ಪ್ರಗತಿ ಕುರಿತು ಸಮಗ್ರವಾಗಿ ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಅಧಿಕಾರಿಗಳು ಮಾಹಿತಿಯೊಂದಿಗೆ ಸಭೆಗೆ ಹಾಜರಗಾಬೇಕು: ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಹಿಂದಿನ ಹಾಗೂ ಪ್ರಸಕ್ತ ಸಾಲಿನಲ್ಲಿ ಯಾವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಲಾಖೆ ಕೈಗೊಂಡಿದೆ ಎಂಬ ಪರಿಪೂರ್ಣ ಮಾಹಿತಿಯೊಂದಿಗೆ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ಗ್ರಾಮ ಸ್ವರಾಜ್ಯಕ್ಕಾಗಿ ಸ್ಥಳೀಯ ಸರ್ಕಾರವಾಗಿರುವ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಅಭಿವೃದ್ಧಿ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಭೇಟಿ ಕೊಟ್ಟು ಇಲಾಖೆ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತು ರೈತರು ಹಾಗೂ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಶಾಲೆ ಬಿಟ್ಟಿರುವ ಮಗುವನ್ನು ವಾಪಸ್ ಕರೆತನ್ನಿ: ಗ್ರಾಪಂ ವ್ಯಾಪ್ತಿಯ ಅಲ್ಪಹಳ್ಳಿಯಲ್ಲಿ ಒಂದು ಮಗು ಶಾಲೆ ಬಿಟ್ಟಿದೆ. ಆ ಮಗುವನ್ನು ಪುನಃ ಶಾಲೆಗೆ ಕಳುಹಿಸುವಂತೆ ಶಾಲೆಯ ಎಲ್ಲ ಶಿಕ್ಷಕರು ಮತ್ತು ಎಸ್ ಡಿಎಂಸಿ ಸದಸ್ಯರು ಮಗುವಿನ ಪೋಷಕರನ್ನು ಮನವೋಲಿಸಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಶಾಲೆಬಿಟ್ಟಿರುವ ಮಗುವನ್ನು ಪುನಃ ಶಾಲೆಗೆ ಕರೆತರುವಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕರು ಸಭೆಯಲ್ಲಿ ತಿಳಿಸಿದರು. ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳು ಹಾಗೂ ಇಲಾಖೆ ಪ್ರಗತಿ ಕುರಿತು ಹೋಬಳಿಯ ಕೃಷಿ ಅಧಿಕಾರಿ ಸಿ.ಪ್ರಥ್ವಿಶ್ರೀ ಮಾಹಿತಿ ನೀಡಿದರು.
ಸಭೆಗೆ ಕೆಲ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದ ಹಿನ್ನೆಲೆಯಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವಹಿಲು ಮೇಲಧಿಕಾರಿಗಳಿಗೆ ಪತ್ರ ಬರೆಯುವಂತೆ ಗ್ರಾಪಂ ಪಿಡಿಒ ಸುರೇಶ್ ಅವರಿಗೆ ಅಧ್ಯಕ್ಷ ಜಯೇಂದ್ರ ಸೂಚಿಸಿದರು.
ಗ್ರಾಪಂ ಕಾರ್ಯದರ್ಶಿ ಮಹದೇವ, ಸಿಬ್ಬಂದಿಯಾದ ರಾಮು, ವೈಕುಂಠ, ರೂಪಾ, ನಟರಾಜ್ ಹಾಗೂ ಸೆಸ್ಕಾಂ, ಕಂದಾಯ, ಶಿಕ್ಷಣ, ಆರೋಗ್ಯ, ಗ್ರಂಥಾಲಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.