ಜಮ್ಮು-ಕಾಶ್ಮೀರ: ಪಣಜಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪದ ಮೇಳೆ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾವನ್ನು ಅಸಭ್ಯ ಮತ್ತು ಕೀಳು ಅಭಿರುಚಿಯ ಸಿನಿಮಾ ಎಂದು ಟೀಕಿಸಿದ್ದ ಇಫಿ ಅಂತಾರಾಷ್ಟ್ರೀಯ ತೀರ್ಪುಗಾರರ ಅಧ್ಯಕ್ಷ ಇಸ್ರೇಲ್ ಮೂಲದ ನಿರ್ದೇಶಕ ನಡಾವ್ ಲ್ಯಾಪಿಡ್ ಹೇಳಿಕೆ ವಿರುದ್ಧ ಬುಧವಾರ (ನವೆಂಬರ್ 30) ಜಮ್ಮು-ಕಾಶ್ಮೀರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೆಚ್ಚಿ ಬೀಳಿಸುವ ಘಟನೆ: ಸತ್ತ ಮೊಸಳೆಯ ಹೊಟ್ಟೆಯಲ್ಲಿತ್ತು ಬಾಲಕನ ದೇಹದ ಭಾಗಗಳು
ಇಸ್ರೇಲ್ ನಿರ್ದೇಶಕ ಲ್ಯಾಪಿಡ್ ಹೇಳಿಕೆ ಅನಗತ್ಯ ಮತ್ತು ಖಂಡನೀಯವಾದದ್ದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಣಿವೆ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರ ಮಾರಣ ಹೋಮ ನಡೆಸಿರುವ ಭಯೋತ್ಪಾದಕರ ಕೃತ್ಯದ ಕುರಿತ ಕಥಾಹಂದರ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ಪ್ರಚಾರದ ಮತ್ತು ಅಸಭ್ಯ ಸಿನಿಮಾ ಎಂದು ನಡಾವ್ ಲ್ಯಾಪಿಡ್ ಟೀಕಿಸಿದ್ದರು.
ನಡಾವ್ ಲ್ಯಾಪಿಡ್ ಅವರನ್ನು ಭಾರತ ಸರ್ಕಾರ ಕೂಡಲೇ ಇಸ್ರೇಲ್ ಗೆ ವಾಪಸ್ ಕಳುಹಿಸಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರ ಸಿನಿಮಾವನ್ನು ಭಾರತದ “ಶಿಂಡ್ಲರ್ಸ್ ಲಿಸ್ಟ್”(ಯಹೂದಿ ನಿರಾಶ್ರಿತರ ಮಾರಣಹೋಮ, ರಕ್ಷಣೆಯ ಕಥಾಹಂದರದ ಸಿನಿಮಾ) ಎಂದು ಕರೆದಿರುವ ಕಾಶ್ಮೀರಿ ಪಂಡಿತರು, ಲ್ಯಾಪಿಡ್ ನಿಜವಾಗಿಯೂ ಯಹೂದಿಯೇ ಎಂದು ಪ್ರಶ್ನಿಸಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ತೋರಿಸಿರುವುದು ಕೇವಲ ಶೇ.5ರಷ್ಟು ಮಾತ್ರ, ಆದರೆ ಕಣಿವೆ ಪ್ರದೇಶದಲ್ಲಿ ನಿಜಕ್ಕೂ ಏನು ನಡೆದಿತ್ತು ಎಂಬ ಶೇ.95ರಷ್ಟು ನೈಜ ಘಟನೆ ಬಹಿರಂಗಗೊಂಡಿಲ್ಲ ಎಂದು ಕಾಶ್ಮೀರಿ ಪಂಡಿತ್ ಯೋಗೇಶ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.