ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಹೀಗಾಗಿ ದೂಧಗಂಗಾ ನದಿ ನೀರಿನ ಮಟ್ಟದಲ್ಲಿ ಒಂದು ಅಡಿ ಏರಿಕೆಯಾಗಿದೆ. ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಭೋಜ ಸೇತುವೆ ಸಂಪೂರ್ಣ ಜಲಾವೃತಗೊಂಡು ಸಂಚಾರ ಕಡಿತಗೊಂಡಿದೆ.
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಒಂದು ವಾರದಿಂದ ಅಬ್ಬರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಗಡಿ ಭಾಗದ ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ. ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಕೊಂಚ ಇಳಿಕೆ ಕಂಡಿದೆ. ದೂಧಗಂಗಾ ನದಿ ನೀರಿನ ಮಟ್ಟದಲ್ಲಿ ಒಂದು ಅಡಿ ನೀರು ಏರಿಕೆಯಾಗಿದೆ.
ರಾಜಾಪೂರ ಬ್ಯಾರೇಜ್‌ದಿಂದ 23453 ಕ್ಯೂಸೆಕ್ ನೀರು ಹರಿದು ರಾಜ್ಯಕ್ಕೆ ಬರುತ್ತಿದೆ. ಹಿಪ್ಪರಗಿ ಬ್ಯಾರೇಜದಿಂದ ಆಲಮಟ್ಟಿಗೆ 25300 ಕ್ಯೂಸೆಕ್ ನೀರು ಹೊರಹೋಗುತ್ತಿದೆ. ಇದರಿಂದ ಗಡಿ ಭಾಗದಲ್ಲಿ ಅಪಾಯ ಉಂಟಾಗುವ ಪರಿಸ್ಥಿತಿ ಉದ್ಬವಾಗುವುದಿಲ್ಲ, ಈಗಾಗಲೇ ಎಲ್ಲ ಸೇತುವೆಗಳ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸೇತುವೆ ಮುಳುಗಡೆಗೊಂಡರೆ ನದಿ ಹತ್ತಿರ ಯಾರು ಹೋಗಬಾರದೆಂದು ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ ಡಾ| ಸಂತೋಷ ಬಿರಾದಾರ ತಿಳಿಸಿದರು.
ಅಂತರ ಗಂಗೆ ಬಳ್ಳಿ ಹೋಗಲಾಡಿಸಿದ ತಾಲೂಕಾಡಳಿತ: ತಾಲೂಕಿನ ಕಲ್ಲೋಳ-ಯಡೂರ ಅಡ್ಡಲಾಗಿ ಕೃಷ್ಣಾ ನದಿಗೆ ಕಟ್ಟಿರುವ ಸೇತುವೆ ಬಳಿ ಅಂತರ ಗಂಗೆ ಬಳ್ಳಿ ತಟಿಸಿಕೊಂಡು ನಿಂತಿತ್ತು. ಅದನ್ನು ಜೆಸಿಬಿ ಮೂಲಕ ತಾಲೂಕಾಡಳಿತ ಸ್ವಚ್ಛಗೊಳಿಸಿ ನೀರು ಸರಾಗಾವಾಗಿ ಹೋಗಲು ಅನುಕೂಲ ಕಲ್ಪಿಸಿದ್ದಾರೆ.
ಮಹಾರಾಷ್ಟ್ರದ ಮಳೆ ವಿವರ: ಕೋಯ್ನಾ 107 ಮಿ.ಮೀ, ನವಜಾ 190 ಮಿ.ಮೀ, ವಾರಣಾ 64 ಮಿ.ಮೀ, ಮಹಾಬಳೇಶ್ವರ 149 ಮಿ.ಮೀ, ರಾಧಾನಗರ 60 ಮಿ.ಮೀ, ಪಾಟಗಾಂವ 77 ಮಿ.ಮೀ, ಸಾಂಗ್ಲಿ-12 ಮಿ.ಮೀ, ಕಾಳಮ್ಮವಾಡಿ ಪ್ರದೇಶದಲ್ಲಿ 54 ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ.
ಚಿಕ್ಕೋಡಿ ಮಳೆ ವಿವರ: ಚಿಕ್ಕೋಡಿ 1.2 ಮಿ.ಮೀ, ಸದಲಗಾ 4 ಮಿ.ಮೀ, ನಿಪ್ಪಾಣಿ 4 ಮಿ.ಮೀ,ಅಂಕಲಿ 2.4 ಮಿ.ಮೀ, ಗಳತಗಾ 10.2 ಮಿ.ಮೀ, ನಾಗರಮುನ್ನೋಳ್ಳಿ 11.8ಮಿ.ಮೀ, ಜೋಡಟ್ಟಿ 1.2 ಮಿ.ಮೀ ಸೌಂದಲಗಾ 12.3 ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ.