Advertisement

ಕಾಪು ತಾಲೂಕು ಆಡಳಿತಕ್ಕೆ ಕೃತಕ ನೆರೆಯದ್ದೇ ಚಿಂತೆ

12:20 AM Jun 16, 2019 | sudhir |

ಕಾಪು: ಮುಂಗಾರು ಈಗಾಗಲೇ ಕಾಲಿಟ್ಟಿದೆ. ಕಳೆದ ವರ್ಷದ ಕಹಿ ಘಟನೆಗಳಿಂದಾಗಿ ತಾಲೂಕು ಆಡಳಿತ ಮೊದಲೇ ಎಚ್ಚೆತ್ತುಕೊಂಡಿದ್ದರೂ ಈ ಬಾರಿಯೂ ಕೃತಕ ನೆರೆಯ ಚಿಂತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ, ಪುರಸಭೆ, ಸ್ಥಳೀಯ ಪಂಚಾಯತ್‌ಗಳಿಗೆ ಸೂಕ್ತ ಸೂಚನೆ ನೀಡಿದ್ದಾರೆ.

Advertisement

ಪ್ರಕೃತಿ ವಿಕೋಪ ನಿರ್ವಹಣೆ ತಂಡ

ಇಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ತಂಡ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಪಂಚಾಯತ್‌ ವ್ಯಾಪ್ತಿಯ ಈಜುಗಾರರು, ದೋಣಿ, ಜೆಸಿಬಿ ಮಾಲಕರು, ಟಿಪ್ಪರ್‌, ಕ್ರೇನ್ಸ್‌, ಸರಕು ಸಾಗಾಟದ ವಾಹನಗಳ ಮಾಹಿತಿಯನ್ನು ಸಂಗ್ರಹಿಸಿ, ತುರ್ತು ಸಂದರ್ಭ ಅವರ ಸೇವೆಯನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಅಗ್ನಿಶಾಮಕ ಘಟಕ, ಗೃಹರಕ್ಷಕದಳ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್‌ ಠಾಣೆ, ಮೆಸ್ಕಾಂ ಸಿಬಂದಿ ಮಾಹಿತಿಯನ್ನೂ ಸಂಗ್ರಹಿಸಿಟ್ಟುಕೊಂಡಿದೆ.

ಗಂಜಿ ಕೇಂದ್ರ, ಬೋಟ್ ಸಹಿತ ವಿವಿಧ ಸೌಲಭ್ಯಗಳ ಜೋಡಣೆ

ಕಾಪು ತಾಲೂಕಿನ ಕಳೆದ ವರ್ಷದ ನೆರೆಬಾಧಿತ 7-8 ಕಡೆಗಳಲ್ಲಿ ಗಂಜಿ ಕೇಂದ್ರ ತೆರೆಯಲು ತಾಲೂಕು ಸ್ಥಳ ಗೊತ್ತುಪಡಿಸಿದೆ. ಕಾಪುವಿಗೆ ಪ್ರತ್ಯೇಕವಾಗಿ 2 ಅಗ್ನಿಶಾಮಕ ಬೋಟ್‌ಗಳನ್ನು ಗೊತ್ತುಪಡಿಸಲಾಗಿದ್ದು, 6 ಯಾಂತ್ರಿಕ ಗರಗಸ ಅರಣ್ಯ ಇಲಾಖೆಗೆ ಒದಗಿಸಲಾಗಿದೆ. 8 ಮಂದಿ ಗೃಹರಕ್ಷಕ ದಳ ಸಿಬಂದಿ ಸೇವೆಗೆ ಲಭ್ಯವಿರಲಿ ದ್ದಾರೆ. ಈಜುಗಾರರನ್ನೂ ನಿಯೋಜಿಸಲಾಗಿದೆ.

Advertisement

ಪುರಸಭೆ ವ್ಯಾಪ್ತಿಯಲ್ಲಿ ಕೃತಕ ನೆರೆ ಭೀತಿ

ಹೆದ್ದಾರಿ ಅಸಮರ್ಪಕ ಕಾಮಗಾರಿ, ವಸತಿ ಸಮುಚ್ಚಯ ನಿರ್ಮಾಣ ವೇಳೆ ಚರಂಡಿ ಮಾಡದ್ದರಿಂದ ಕಳೆದ ಬಾರಿ ಸಮಸ್ಯೆಯಾಗಿತ್ತು. ಆದ್ದರಿಂದ ಈ ಬಾರಿ ಪುರಸಭೆ ವ್ಯಾಪ್ತಿಯ ಕೆಲವೆಡೆ ವಿವಿಧ ಅನುದಾನ ಬಳಸಿ 20 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ಮೋರಿ ರಚಿಸಲಾಗಿದೆ. ಈ ಬಾರಿ ಕೂಡಾ ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆ ಇಲ್ಲದಿರುವುದು, ಹೆದ್ದಾರಿ ಬದಿಯ ಚರಂಡಿಗಳಿಗೆ ಸ್ಲ್ಯಾಬ್‌ ಇಲ್ಲದೇ ಇರುವುದು, ಕಾಪು ಮಾರ್ಕೆಟ್ ಬಳಿ ಯಲ್ಲಿ ಚರಂಡಿ ನಿರ್ಮಾಣವಾಗದೇ ಇರುವುದರಿಂದ ಕೃತಕ ನೆರೆಯ ಭೀತಿ ಎದುರಾಗಿದೆ.

ಮೆಸ್ಕಾಂನಿಂದಲೂ ಸಿದ್ಧತೆ

ಭಾರೀ ಗಾಳಿ – ಮಳೆಯಿಂದಾಗಿ ಕಳೆದ ವರ್ಷ ಮೆಸ್ಕಾಂಗೆ 1.20 ಕೋ. ರೂ. ನಷ್ಟ ಉಂಟಾಗಿತ್ತು. ಕಳೆದ ವರ್ಷ ಸಂಭವಿಸಿರುವ ಅನಾಹುತಗಳಿಂದ ಎಚ್ಚೆತ್ತುಕೊಂಡಿರುವ ಮೆಸ್ಕಾಂ ಈ ಬಾರಿ ಮಳೆಗೆ ಮೊದಲೇ ಅಪಾಯಕಾರಿಯಾಗಿದ್ದ ಮರಗಳನ್ನು, ಗೆಲ್ಲುಗಳನ್ನು ತೆರವುಗೊಳಿಸಿದೆ. ಅದರೊಂದಿಗೆ ಹಳೆಯ ಕಂಬಗಳನ್ನು ಮತ್ತು ವಯರ್‌ಗಳನ್ನೂ ಬದಲಾಯಿಸಿದೆ. ಮೆಸ್ಕಾಂ ವತಿಯಿಂದ 24 ತಾಸು ಕಾರ್ಯ ನಿರ್ವಹಿಸುವ ಸಹಾಯವಾಣಿ ಒದಗಿಸಿದ್ದು, ತುರ್ತು ಆವಶ್ಯಕತೆಯಿದ್ದಾಗ ಟ್ರಾನ್ಸ್‌ ಫಾರ್ಮರ್‌, ವಿದ್ಯುತ್‌ ಕಂಬ ಬದಲಾವಣೆಗೂ ಪೂರಕವಾಗುವ ಯೋಜನೆ ರೂಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next