Advertisement

ಕಪಿಲ್‌ ಸಮಿತಿಗೆ ನೂತನ ಕೋಚ್‌ ಆಯ್ಕೆ ಹೊಣೆ

10:58 PM Jul 26, 2019 | Sriram |

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ನೂತನ ತರಬೇತುದಾರರನ್ನು ಆಯ್ಕೆ ಮಾಡುವ ಜವಾಬ್ದಾರಿ, ಕಪಿಲ್‌ದೇವ್‌ ನೇತೃತ್ವದ ಉನ್ನತ ಸಲಹಾ ಸಮಿತಿ ಹೆಗಲೇರಿದೆ. ಕಪಿಲ್‌ ಜತೆಗೆ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ, ಮಾಜಿ ಆರಂಭಕಾರ ಹಾಗೂ ತರಬೇತುದಾರ ಅಂಶುಮಾನ್‌ ಗಾಯಕ್ವಾಡ್‌ ಕೂಡ ಇರಲಿದ್ದಾರೆ.

Advertisement

ಇಲ್ಲೂ ಸ್ವಹಿತಾಸಕ್ತಿ ಸಂಘರ್ಷ!
ಇದೇ ವೇಳೆ ಈ ಸಮಿತಿಗೂ ಸ್ವಹಿತಾಸಕ್ತಿ ಸಂಘರ್ಷದ ಸಮಸ್ಯೆ ಎದುರಾಗಿದೆ. ಬಿಸಿಸಿಐ ಇದನ್ನು ಹೇಗೆ ತೀರ್ಮಾನಿಸುತ್ತದೆ ಎಂದು ಕಾದು ನೋಡಬೇಕು.

ಕಪಿಲ್‌ ಸಮಿತಿಗೆ ಈ ಜವಾಬ್ದಾರಿ ನೀಡುವ ಮೂಲಕ, ಇದುವರೆಗೆ ಈ ಕಾರ್ಯ ನಿರ್ವಹಿಸುತ್ತಿದ್ದ ತೆಂಡುಲ್ಕರ್‌, ಗಂಗೂಲಿ, ಲಕ್ಷ್ಮಣ್‌ ಹೊರನಡೆದಂತಾಗಿದೆ. ಈ ಮೂವರಿಗೆ ಇದೇ ವಿಚಾರದಲ್ಲಿ ಸ್ವಹಿತಾಸಕ್ತಿ ಸಮಸ್ಯೆ ಎದುರಾಗಿರುವುದರಿಂದ ಆಯ್ಕೆ ಮಾಡುವ ಅವಕಾಶವನ್ನು ಬಿಟ್ಟುಕೊಟ್ಟಿದ್ದಾರೆ. ಬಿಸಿಸಿಐ ಅಧಿಕೃತ ಒಪ್ಪಂದ ಪತ್ರ ನೀಡದೇ ಇದ್ದರೆ ಈ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲವೆಂದು ತೆಂಡುಲ್ಕರ್‌ ಈಗಾಗಲೇ ಖಚಿತಪಡಿಸಿದ್ದಾರೆ. ಗಂಗೂಲಿ, ಲಕ್ಷ್ಮಣ್‌ ವಿಚಾರ ಇನ್ನೂ ಇತ್ಯರ್ಥವಾಗಿಲ್ಲ.

ಕಪಿಲ್‌ ಸಮಿತಿಗೆ ಸಮಸ್ಯೆ ಹೇಗೆ?
ಸಚಿನ್‌, ಗಂಗೂಲಿ, ಲಕ್ಷ್ಮಣ್‌ ಸಮಿತಿಗೆ ಸ್ವಹಿತಾಸಕ್ತಿ ಸಮಸ್ಯೆಯಿದೆಯೆಂದು, ಕಪಿಲ್‌ ಸಮಿತಿಗೆ ತರಬೇತುದಾರರನ್ನು ಆಯ್ಕೆ ಮಾಡುವ ಹೊಣೆ ನೀಡಲಾಗಿದೆ. ಇಲ್ಲೂ ಅದೇ ಸಮಸ್ಯೆ ಎದುರಾಗಿದೆ! ಕಪಿಲ್‌ದೇವ್‌ ಮತ್ತು ಶಾಂತಾ ರಂಗಸ್ವಾಮಿ ಭಾರತೀಯ ಕ್ರಿಕೆಟಿಗರ ಸಂಘದಲ್ಲಿ ಜವಾಬ್ದಾರಿ ಹೊಂದಿದ್ದಾರೆ. ಇದು ಸ್ವಹಿತಾಸಕ್ತಿ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಬಿಸಿಸಿಐ ವಿಶೇಷ ವಿಚಾರಣಾಧಿಕಾರಿ ಡಿ.ಕೆ. ಜೈನ್‌ ಅಂತಿಮ ತೀರ್ಪು ನೀಡಬೇಕಿದೆ.

ಆಗಸ್ಟ್‌ ಮಧ್ಯಭಾಗದಲ್ಲಿ ಆಯ್ಕೆ
ಸದ್ಯ ರವಿಶಾಸ್ತ್ರಿ ಭಾರತ ತಂಡದ ಮುಖ್ಯ ತರಬೇತುದಾ ರರಾಗಿದ್ದಾರೆ. ಮುಂದಿನ ಕೋಚ್‌ ಆಯ್ಕೆ ಪ್ರಕ್ರಿಯೆಯಲ್ಲಿ ಅವರಿಗೆ ನೇರ ಪ್ರವೇಶ ನೀಡಲಾಗುತ್ತದೆ. ಅವರೊಂದಿಗೆ ಹಲವರು ಪೈಪೋಟಿಯಲ್ಲಿದ್ದಾರೆ. ಆಗಸ್ಟ್‌ ಮಧ್ಯಭಾಗದಲ್ಲಿ ನೂತನ ತರಬೇತುದಾರರ ಆಯ್ಕೆ ಅಂತಿಮಗೊಳ್ಳಲಿದೆ.

Advertisement

ಶಾಸ್ತ್ರಿ ಬದಲಾವಣೆ ಸೂಕ್ತವಲ್ಲ!
ನೂತನ ತರಬೇತುದಾರನ ಆಯ್ಕೆಗೆ ಬಿಸಿಸಿಐ ಸಜ್ಜಾಗಿರುವಂತೆಯೇ, ಪ್ರಸ್ತುತ ಇರುವ ತರಬೇತುದಾರರನ್ನು ಬದಲಿಸುವುದು ಸೂಕ್ತವಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ವರದಿಯಾಗಿದೆ. ನಾಯಕ ಕೊಹ್ಲಿ ಮತ್ತು ತರಬೇತುದಾರ ರವಿಶಾಸ್ತ್ರಿ ನಡುವೆ ಉತ್ತಮ ಬಾಂಧವ್ಯವಿದೆ. ಇಬ್ಬರೂ ಸೇರಿ ಕಳೆದ 2 ವರ್ಷಗಳಿಂದ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಈಗ ದಿಢೀರನೆ ತರಬೇತುದಾರರನ್ನು ಬದಲಿಸಿದರೆ, ಈ ಯೋಜನೆಗಳೆಲ್ಲ ಹಳಿ ತಪ್ಪಬಹುದು. ಅಲ್ಲದೇ ತಂಡದಲ್ಲಿ ಈಗಾಗಲೇ ಒಂದು ವ್ಯವಸ್ಥೆ ರೂಪುಗೊಂಡಿರುವುದರಿಂದ, ಹೊಸ ತರಬೇತುದಾರನ ನೂತನ ಕಾರ್ಯಶೈಲಿಗೆ ಒಗ್ಗಿಕೊಳ್ಳುವುದು ಆಟಗಾರರಿಗೆ ಕಷ್ಟವಾಗಿ ಪರಿಣಮಿಸಬಹುದು ಎಂದು ಬಿಸಿಸಿಐ ಮೂಲಗಳು ಅಭಿಪ್ರಾಯಪಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next