Advertisement

ಕನ್ನಡಪರ ನಿಲುವು ಅನುಷ್ಠಾನಕ್ಕೆ ಒತ್ತಾಯ

12:03 PM Oct 20, 2017 | |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನ್ನಡಪರ ನಿಲುವು ಮತ್ತು ಕಾಳಜಿ ಸ್ವಾಗತಾರ್ಹವಾಗಿದ್ದು, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ಗಮನಹರಿಸಬೇಕು ಎಂದು ಕನ್ನಡ ಕಾರ್ಯಕರ್ತರ ಬಳಗ ಆಗ್ರಹಿಸಿದೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಬಳಗದ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ ಮತ್ತು ರಾ.ನಂ.ಚಂದ್ರಶೇಖರ್‌, ಕನ್ನಡ ಹೋರಾಟದ ನೆಲೆಯಿಂದ ಬಂದಿರುವ ಸಿಎಂ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ (ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ) ಪ್ರಥಮ ಅಧ್ಯಕ್ಷರಾಗಿದ್ದವರು. ಅವರಿಗೆ ಕನ್ನಡದ ಬಗ್ಗೆ ಅಭಿಮಾನದೆ. ಸಮಸ್ಯೆಯ ಅರಿವೂ ಇದೆ. ಅವರ ಕನ್ನಡಪರ ನಿಲುವು ಸ್ವಾಗತಾರ್ಹ. ಆದರೆ, ಆಡಿದ ಬಹಳಷ್ಟು ಮಾತುಗಳು ಅನುಷ್ಠಾನಕ್ಕೆ ಬರುತ್ತಿಲ್ಲ ಎಂಬುದು ಬೇಸರದ ಸಂಗತಿ ಎಂದಿದ್ದಾರೆ. 

ಅಲ್ಲದೆ, ಕನ್ನಡಕ್ಕೊಂದು ಬಾವುಟಕ್ಕೆ ಸಂಬಂಧಿಸಿದಂತೆ ಕಾಯ್ದೆ ರೂಪದಲ್ಲಿ ತಂದು ರಾಜ್ಯೋತ್ಸವದ ಕೊಡುಗೆ ನೀಡಬೇಕು ಮತ್ತು ಭಾಷೆಗೆ ಸಂಬಂಧಿಸಿದಂತೆ ಮೂರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಕುರಿತು ಸರೋಜಿನಿ ಮಹಿಷಿ ಅವರ ಪರಿಷ್ಕೃತ ವರದಿ ಸಿದ್ಧಪಡಿಸಲಾಗಿದ್ದು, ಅದರಲ್ಲಿ ರುವ ರಾಜ್ಯ ಸಕಾರ ಅನುಷ್ಠಾನಗೊಳಿಸಬಹುದಾದ 14 ಅಂಶಗಳನ್ನು ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು. ಆ ಮೂಲಕ ವರದಿ ಜಾರಿಗೆ ಕ್ರಮ ಕೈಗೊಳ್ಳಬೇಕು. ಜತೆಗೆ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಬೇಕಾದ ಅಂಶಗಳ ಜಾರಿಗೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದ್ದಾರೆ.

ರಾಷ್ಟ್ರಕವಿ ಕುವೆಂಪು ರಚಿತ “ಜಯಭಾರತ ಜನನಿಯ ತನುಜಾತೆ’ ಕವನವನ್ನು ನಾಡಗೀತೆಯಾಗಿ ಆದೇಶ ಹೊರಡಿಸಿ 14 ವರ್ಷ ಕಳೆದಿದೆ. ಆದರೆ, ಅದನ್ನು ಹೇಗೆ ಹಾಡಬೇಕು, ಎಷ್ಟು ಹಾಡಬೇಕು? ಎಂಬುದರ ಬಗ್ಗೆ ಸರ್ಕಾರ ನಿರ್ದಿಷ್ಟ ಆದೇಶ ಹೊರಡಿಸದಿರುವುದು ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ನಾಡಗೀತೆಗೆ ಹಾಡುವ ಕ್ರಮ, ನಿರ್ದಿಷ್ಟ ಕಾಲಾವಧಿ ಮತ್ತು ದಾಟಿಯನ್ನು ನಿಗದಿಪಡಿಸಬೇಕು ಎಂದು ಕೋರಿದ್ದಾರೆ.

Advertisement

ಅದೇ ರೀತಿ ರಾಜ್ಯದಲ್ಲಿ ನಾಮಫ‌ಲಕ, ಜಾಹೀರಾತು ಫ‌ಲಕ ಮತ್ತು ಭಿತ್ತ ಫ‌ಲಕಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ಪ್ರಧಾನವಾಗಿ ಇರುವಂತೆ ಹೊಸ ನೀತಿ ರೂಪಿಸಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯೋತ್ಸವದ ದಿನ ಈ ವಿಚಾರದ ಬಗ್ಗೆ ಸ್ಪಷ್ಟ ನಿಲವು ಪ್ರಕಟಿಸದಿದ್ದರೆ, ಜನರ ಗಮನ ಸೆಳೆದು ಸರ್ಕಾರವನ್ನು ಎಚ್ಚರಿಸಲು ನವೆಂಬರ್‌ನಲ್ಲಿ ಜಾಗೃತ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next