Advertisement

ಅಕ್ಷರ ಜಾತ್ರೆಗೆ ಕನ್ನಡಾಭಿಮಾನಿಗಳ ದಂಡು

01:09 PM Nov 24, 2017 | |

ಮೈಸೂರು: 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದೆಲ್ಲೆಡೆಯಿಂದ ಅಕ್ಷರ ಜಾತ್ರೆಗೆ ಕನ್ನಡಾಭಿಮಾನಿಗಳ ದಂಡೆ ಹರಿದು ಬರುತ್ತಿದೆ. ಬಂದ ಅತಿಥಿಗಳಿಗೆ ಸುವ್ಯವಸ್ಥಿತವಾದ ವಸತಿ ಮತ್ತು ಊಟಕ್ಕೆ ಪ್ರತ್ಯೇಕವಾದ ಕೌಂಟರ್‌ಗಳನ್ನು ತೆರೆಯಲಾಗಿದೆ.

Advertisement

ಸಮ್ಮೇಳನಕ್ಕೆ ಎಲ್ಲೆಡೆಯಿಂದ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಅನೇಕರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಗುರುವಾರ ಸಂಜೆಯಿಂದಲೇ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.

ಜಿಲ್ಲೆಗೊಂದು ಕೌಂಟರ್‌: ಮಹಾರಾಜಾ ಕಾಲೇಜು ಮೈದಾನದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸದಸ್ಯರುಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಜಿಲ್ಲೆಗೊಂದರಂತೆ ಪ್ರತ್ಯೇಕವಾದ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಬಂದವರು ತಾವು ನೋಂದಣಿಯಾಗುವಾಗ ಪಡೆದ ರಸೀದಿಯನ್ನು ತೋರಿಸಿ, ಸಮ್ಮೇಳನದ ಕಿಟ್‌ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು.

ಈಗಾಗಲೇ ಹೋಟೆಲ್‌ ಮಾಲೀಕರೊಂದಿಗೆ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಒಡಂಬಡಿಕೆ ಮಾಡಿಕೊಂಡಿದ್ದು, ವಿವಿಧ ಹೋಟೆಲ್‌ಗ‌ಳಲ್ಲಿ ಬಂದಂತವರಿಗೆ ವಸತಿ ವ್ಯವಸ್ಥೆ ಮಾಡಿದೆ. ಮಹಿಳಿಯರಿಗೆ ಸ್ವರಸ್ವತಿಪುರಂ ಜೆಎಸ್‌ಎಸ್‌ ಕಾಲೇಜಿನಲ್ಲಿ ವಸತಿ ನೀಡಿದ್ದು, ಇನ್ನು ಕೆಲವರಿಗೆ ಇನ್ಫೋಸಿಸ್‌ ತರಬೇತಿ ಕೇಂದ್ರದಲ್ಲಿ ಆ ಸಂಸ್ಥೆ ಉಚಿತವಾಗಿ ನೀಡಿರುವ 500 ಕೊಠಡಿಗಳನ್ನು ವಿತರಿಸಲಾಗಿದೆ. ಅಲ್ಲದೆ ನಗರದ 35ಕ್ಕೂ ಹೆಚ್ಚು ಸ್ಥಳಗಳಲ್ಲಿ ಅತಿಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ.

ಮೈದಾನದಲ್ಲಿ ಊಟದ ವ್ಯವಸ್ಥೆ: ದೂರದೂರಿನಿಂದ ಸಮ್ಮೇಳನಕ್ಕೆ ಬಂದವರಿಗೆ ಮೈಸೂರಿನ ಕುಕ್ಕರಹಳ್ಳಿ ಕೆರೆ ರಸ್ತೆಯ ರೈಲ್ವೆಗೇಟಿನ ಹಾಕಿ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. 5000 ಮಂದಿ ಗಣ್ಯರಿಗೆ ಮುಖ್ಯವೇದಿಕೆ ಹಿಂಭಾಗ ಊಟದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದವರಿಗೆ ಮತ್ತು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಸ್ಕೌಟ್‌ ಆಂಡ್‌ ಗೈಡ್ಸ್‌ ಮೈದಾನದಲ್ಲಿ ಊಟದ ಸೌಲಭ್ಯ ನೀಡಲಾಗುವುದು.

Advertisement

ಸ್ವಯಂ ಸೇವಕರ ನೇಮಕ: ಗಣ್ಯ ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಿದ ಜಾಗದ ನಿರ್ವಹಣೆಗೆ ಸುಮಾರು 150ರಿಂದ 200 ಮಂದಿ ಸ್ವಯಂ ಸೇವಕ ಶಿಕ್ಷಕರನ್ನು ನೇಮಿಸಲಾಗಿದೆ. ಅಂತೆಯೇ ಸ್ಕೌಟ್‌ ಆಂಡ್‌ ಗೈಡ್‌ ಮೈದಾನದ ಊಟದ ವ್ಯವಸ್ಥೆಯ ಜಾಗಕ್ಕೆ ಸುಮಾರು 2000 ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.

ಈ ಸಮ್ಮೇಳನದಲ್ಲಿ 2000 ಶಿಕ್ಷಕರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲಿದ್ದು, ಅವರೊಂದಿಗೆ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್‌ ಸ್ವಯಂ ಸೇವಕರು ಕೈಜೋಡಿಸಲಿದ್ದಾರೆ.

ಆಟೋ ದುಬಾರಿ: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುತ್ತಿರುವ ಅತಿಥಿಗಳಿಂದ ಆಟೋ ರಿಕ್ಷಾಚಾಲಕರು ಮನಸಿಗೆ ಬಂದಂತೆ ಬಾಡಿಗೆ ವಸೂಲಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಈಗಾಗಲೇ 2 ಕಿ.ಮೀ.ದೂರ ಕ್ರಮಿಸಲು ಕೇವಲ 25 ರೂ.ಗಳನ್ನು ಸಂಚಾರಿ ಪೊಲೀರು ನಿಗದಿಪಡಿಸಿದ್ದು, ಅನೇಕ ತಿಂಗಳಿಂದ ಇದೇ ನಿಯಮ ಅನುಸರಿಸಲಾಗುತ್ತಿದೆ.

ಆದರೆ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಅತಿಥಿಗಳಿಂದ ಕೇವಲ ಒಂದು ಕಿ.ಮೀ.ದೂರ ಕ್ರಮಿಸಲು 60ರಿಂದ 80ರೂ.ಗಳನ್ನು ಕೆಲವು ಆಟೋ ರಿಕ್ಷಾ ಚಾಲಕರು ಪೀಕುತ್ತಿದ್ದಾರೆ. ಮುಂಜಾನೆಯಿಂದಲೂ ಮೈಸೂರಿನಲ್ಲಿ ಬಿಸಿಲಿದ್ದು, ಅನಿವಾರ್ಯವಾಗಿ ಆಟೋರಿಕ್ಷಾ ಚಾಲಕರೊಂದಿಗೆ ಅತಿಥಿಗಳು ಚೌಕಾಸಿಯಲ್ಲಿ ತೊಡಗಿದ್ದು ಕಂಡುಬಂತು.

ಉಚಿತ ವಾಹನ ವ್ಯವಸ್ಥೆ: ಸಮ್ಮೇಳನದಿಂದ ಅತಿಥಿಗಳಿಗೆ ತಂಗಲು ವ್ಯವಸ್ಥೆ ಮಾಡಿರುವ ಜಾಗಕ್ಕೆ ಹೋಗಿಬರುಲು ಸಮ್ಮೇಳನದ ಸ್ವಾಗತ ಸಮಿತಿ ಉಚಿತವಾಗಿ ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಕೆಲವು ನಗರ ಸಂಚಾರಿ ಸಾರಿಗೆ ಬಸ್‌ಗಳಾಗಿದ್ದು, ಮತ್ತೆ ಕೆಲವು ಶಾಲಾ-ಕಾಲೇಜುಗಳ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಅತಿಥಿಗಳು ದುಬಾರಿ ಹಣ ನೀಡುವ ಬದಲು ಈ ವಾಹನಗಳನ್ನೇ ಬಳಸುವಂತೆ ಸ್ವಾಗತ ಸಮಿತಿ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next