ಕಲಬುರಗಿ: ಪುಣೆ-ಸೊಲ್ಲಾಪುರ ರೈಲ್ವೆ ವಿಭಾಗದ ವ್ಯಾಪ್ತಿಯ ಸಂಸದರ ಸಭೆ ಮಂಗಳವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಯಿತು.
ಸಭೆಯಲ್ಲಿ ಕಲಬುರಗಿ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಸಂಸದ ಡಾ| ಉಮೇಶ ಜಾಧವ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು.
ಸೊಲ್ಲಾಪುರ ಮಿರಾಜ್ ಟ್ರೈನ್ ಸಂಖ್ಯೆ 22155/ 22156 ಸೊಲ್ಲಾಪುರ ಮಿರಾಜ್ ಎಕ್ಸ್‌ಪ್ರೆಸ್‌ನ್ನು ಕಲಬುರಗಿ, ಕೊಲ್ಲಾಪುರ ವರೆಗೆ ವಿಸ್ತರಿಸಿದರೆ ಕಲಬುರಗಿ ಪಿಟ್‌ಲೆçನ್ ಸದ್ಬಳಕೆ ಆಗಬಹುದು. ಹಾಗೆಯೇ ಕಲಬುರಗಿ ಮತ್ತು ಬೆಂಗಳೂರು ಮಧ್ಯ ಹೊಸ ರೈಲನ್ನು ಶುರು ಮಾಡಿದರೆ ಕಲಬುರಗಿ ಪಿಟ್‌ಲೈನ್ ಸಂಪೂರ್ಣ ಸದ್ಬಳಕೆ ಮಾಡಬಹುದೆಂದು ಸಂಸದರು ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಸೆಂಟ್ರಲ್ ರೈಲ್ವೆಯ ಜನರಲ್ ಮ್ಯಾನೇಜರ್, ಈಗಾಗಲೇ ಸೊಲ್ಲಾಪುರ ಮಿರಜ್ ಎಕ್ಸ್‌ಪ್ರೆಸ್‌ನ್ನು ಕಲಬುರಗಿ-ಕೊಲ್ಲಾಪುರ ವರೆಗೂ ವಿಸ್ತರಿಸಲು ರೈಲ್ವೆ ಬೋರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಶೀಘ್ರದಲ್ಲಿ ಶುರುವಾಗುತ್ತದೆ ಎಂದು ಭರವಸೆ ನೀಡಿದರು. ಅದರಂತೆ ಕಲಬುರಗಿ-ಬೆಂಗಳೂರು ಮಧ್ಯ ಹೊಸ ರೈಲನ್ನು ಪ್ರಾರಂಭಿಸಲು ಪರಿಗಣನೆಯಲ್ಲಿ ಇದ್ದು, ಶೀಘ್ರವೇ ಆರಂಭಿಸುವ ಭರವಸೆ ನೀಡಿದರು.
ಶಹಾಬಾದ ರೈಲ್ವೆ ಸ್ಟೇಷನ್‌ಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಸಂಸದರು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಪ್ರಧಾನ ವ್ಯವಸ್ಥಾಪಕರು ಕೂಡಲೇ ಸೊಲ್ಲಾಪುರ ಡಿಆರ್‌ಎಂಗೆ ಸಂಪೂರ್ಣ ಮಾಹಿತಿ ನೀಡಲು ನಿರ್ದೇಶಿಸಿದರು. ಅದೇ ರೀತಿ ಸಂಸದರು ಕಲಬುರಗಿ ರೈಲ್ವೆ ಸ್ಟೇಷನ್ ಮಾದರಿ ಸ್ಟೇಷನ್ ಆಗಿ ಪರಿವರ್ತಿಸಬೇಕು. ಪ್ಲಾಟ್ ಫಾರ್ಮ್ 4ರಲ್ಲಿ ವಿಶ್ರಾಂತಿ ಕೊಠಡಿ ನಿರ್ಮಾಣ ಹಾಗೂ ಪ್ಲಾಟಾರ್ಮ್ನ್ನು ಸಂಪೂರ್ಣ ನವೀಕರಿಸಬೇಕು. ಕಲಬುರಗಿ ರೈಲ್ವೆ ಸ್ಟೇಷನ್‌ನಲ್ಲಿ ವೃದ್ಧರು, ದಿವ್ಯಾಂಗರ ಬಳಕೆಗೆ ಬ್ಯಾಟರಿ ಚಾಲಿತ ವಾಹನ ಒದಗಿಸಬೇಕು. ಜಿಲ್ಲೆಯ ಎಲ್ಲ ಸ್ಟೇಷನ್‌ಗಳಲ್ಲಿ ಮಾಸಿಕ ಪಾಸುಗಳನ್ನು ವಿತರಣೆ ಮಾಡಬೇಕು ಎನ್ನುವ ಕುರಿತು ಗಮನ ಸೆಳೆದರು.