Advertisement

ಮುಗಿಯದ ಕಾಚೇನಹಳ್ಳಿ ನೀರಾವರಿ ಯೋಜನೆ

02:44 PM May 28, 2018 | |

ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಹೊಳೆನರಸೀಪುರ, ಹಾಸನ ಹಾಗೂ ಅರಸೀಕೆರೆ ತಾಲೂಕಿನ 60 ಸಾವಿರ ಎಕರೆ ಪ್ರದೇಶಕ್ಕೆ ಹಾಗೂ 40 ಕೆರೆಗಳಿಗೆ ಹಂತಹಂತವಾಗಿ ನೀರೋದಗಿಸುವ ಮಹಾತ್ವಾಕಾಂಕ್ಷಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ 25 ವರ್ಷಗಳಿಂದ ಪೂರ್ಣಗೊಂಡಿಲ್ಲ.

Advertisement

 ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಪಕ್ಷದವರ ಮೇಲೆ ಕಾಂಗ್ರೆಸ್‌ ಪಕ್ಷದ ಮುಖಂಡರು ಜೆಡಿಎಸ್‌ ಮುಖಂಡರ ಮೇಲೆ ಬೆಟ್ಟು ತೋರಿಸುತ್ತಾ ಕಳೆದ 20ಕ್ಕೂ ವರ್ಷದಿಂದಲೂ ರೈತರನ್ನು ವಂಚಿಸುತ್ತಲೇ ಬಂದಿದ್ದಾರೆ. ಈಗ ಎರಡೂ ಪಕ್ಷ ಸೇರಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಈಗಲಾದರೂ ಈ ಯೋಜನೆ ಪೂರ್ಣಗೊಂಡು ಕೆರಗಳಿಗೆ ನೀರು ತುಂಬಿಸಿ ರೈತರ ಋಣ ತೀರಿಸುತ್ತಾರಾ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.

ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಮೊದಲನೇ ಹಂತವನ್ನು ಕಳೆದ 3 ವರ್ಷದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಉದಯಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮುಂದಿನ 3 ತಿಂಗಳಲ್ಲಿ 2ನೇ ಹಂತವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು.
 
ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಕ್ಷೇತ್ರದ ಶಾಸಕರಾಗಿದ್ದ ಎಚ್‌.ಡಿ.ರೇವಣ್ಣ ಭಾಷಣ ಮಾಡದಂತೆ ಜನರು 10 ನಿಮಿಷಕ್ಕೂ ಹೆಚ್ಚು ಕಾಲಧಿಕ್ಕಾರ ಕೂಗುತ್ತಾ ಅಡ್ಡಿಪಡಿಸಿದ್ದರು. ರೇವಣ್ಣ ಮಾತ್ರ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ 165 ಕೋಟಿ ಹಣ ಬಿಡುಗಡೆಯಾಗಿದೆ. ಇದರಲ್ಲಿ ನನ್ನದೇನೂ ಪಾತ್ರವಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದು 2 ವರ್ಷಗಳಾಗಿದ್ದು ಇವರೂ ಕೂಡ ಯೋಜನೆ ಏಕೆ ಪೂರ್ಣಗೊಳಿಸಿಲ್ಲ ಎಂದು ಸವಾಲು ಹಾಕಿದ್ದರು.

ನಂತರದ ದಿನಗಳಲ್ಲಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆಗೆ ನಾನು ಅತಿ ಹೆಚ್ಚು ಶ್ರಮ ಹಾಕುತ್ತಿದ್ದೇನೆ ಆದರೆ ಕಾಂಗ್ರೆಸ ಸರ್ಕಾರ ಸ್ಪಂದಿಸುತ್ತಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡ ಕಾಚೇನಹಳ್ಳಿ 3ನೇ ಹಂತದ ಏತ ನೀರಾವರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕಾವೇರಿ ಕಣಿವೆಗೆ ಸೇರುತ್ತದೆ ಎಂದು ತಿಳಿಸುತ್ತಾರೆಂದು ಕ್ಷೇತ್ರದ ಜನರಿಗೆ ಹೇಳಿಕೊಂಡು ಬಂದಿದ್ದಾರೆ. ಕಳೆದ ದಂಡಿಗನಹಳ್ಳಿ ಜಿಪಂನಲ್ಲಿ ಜೆಡಿಎಸ್‌ ಅಭ್ಯರ್ಥಿ ಸೋಲಿಗೂ ಕೂಡ ಈ ಯೋಜನೆ ಕಾರಣವಾಗಿತ್ತು.

ಅರಣ್ಯ ಇಲಾಖೆಯ ಒಪ್ಪಿಗೆ: ಎರಡನೇ ಹಂತದ ಕಾಮಗಾರಿಗೆ ಸಣ್ಣೇನಹಳ್ಳಿ, ಬಳದರೆ, ಮುದ್ದನಹಳ್ಳಿ ಬೋಜೇಗೌಡನ ಕೊಪ್ಪಲುಗಳಲ್ಲಿ ಅರಣ್ಯ ಪ್ರದೇಶವಿದ್ದು ಇಲಾಖೆಯಿಂದ ಅನುಮತಿ ಸಿಕ್ಕಿರಲಿಲ್ಲ. ಇತ್ತೀಚೆಗೆ ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಭಾಗೇಶ್ವರದ ಬಳಿ ಇರುವ ಗೋಮಾಳವನ್ನು ಅರಣ್ಯ ಇಲಾಖೆಗೆ ಸೇರಿಸಲು ಪತ್ರ ವ್ಯವಹಾರ ನಡೆಸಿದ್ದು ಕೇಂದ್ರ ಅರಣ್ಯ ಇಲಾಕೆಯ ಒಪ್ಪಿಗೆಗೆ ಕಳುಹಿಸಲಾಗಿದೆ.

Advertisement

ದಂಡಿಘನಹಳ್ಳಿ ಬಳಿ ಕಾಲುವೆಗೆ ಅಡ್ಡಲಾಗಿರುವ ಕಲ್ಲು ತೆಗೆಯುವುದು, ಅಗತ್ಯವಿರುವೆಡೆ ರೈಲ್ವೆ ಹಳಿ ಅಡ್ಡ ಇರುವುದರಿಂದ ಕಾಲುವೆಯ ಮೇಲ್ಸೇತುವೆ ನಿರ್ಮಾಣವಾಗಬೇಕಾಗಿದೆ.

ಕಾಚೇನಹಳ್ಳಿ ಏತ ನೀರಾವರಿ ಯೋಜನೆ: ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಬಂಗಾರಪ್ಪಮುಖ್ಯಮಂತ್ರಿಗಳಾ ಗಿದ್ದಾಗ ಡಿಸೆಂಬರ್‌ 1991 ರಂದು 8 ಕೋಟಿ 90 ಲಕ್ಷ ರೂ. ವೆಚ್ಚದ 8,600 ಎಕರೆ ಪ್ರದೇಶಕ್ಕೆ ನೀರನ್ನು ಒದಗಿಸುವ ಯೋಜನೆಯನ್ನು ರೂಪಿಸಿ ಮಂಜೂರು ಮಾಡಲಾಯಿತು.

ಆದರೆ 25 ವರ್ಷಗಳಿಂದ ನೆಪ ಹೇಳಿಕೊಂಡು ಬಂದಂತಹ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಈ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ರೈತರಿಗೆ ಮೋಸವೆಸಗುತ್ತಿದ್ದಾರೆ. ಈಗ ರೈತರ ತಾಳ್ಮೆ ಕಟ್ಟೆಹೊಡೆದಿರುವುದರಿಂದ ಶೀಘ್ರ ಯೋಜನೆ ಕಾರ್ಯರೂಪಕ್ಕೆ ಬಂದು ನೀರು ಹರಿಯ ಬೇಕೆಂಬುದು ರೈತರ ಆಶಯ

ಕಾಚೇನಹಳ್ಳಿ ಯೋಜನೆಗೆ ಸಿಕ್ಕ ಅನುದಾನ 1991 ರಿಂದ ಬಂದಂತಹ ಎಲ್ಲಾ ಸರ್ಕಾರಗಳು ತಮ್ಮದೇ ಆದ ಅನುದಾನ ಬಿಡುಗಡೆ ಮಾಡಿವೆ. ಈ ಯೋಜನೆಗೆ ಕಾಲುವೆ ತೋಡಲು, ರೈತರ ಜಮೀನಿಗೆ ಪರಿಹಾರ, ವಿದ್ಯುತ್‌ ಅಳವಡಿಕೆ, ನೀರೆತ್ತುವ ಯಂತ್ರಗಳಿಗೆ ಹಣ ವಿನಿಯೋಗ ವಾಗಿದ್ದು. ಆರಂಭದಲ್ಲಿದ್ದ ಯೋಜನಾ ಅಂದಾಜಿ ಗಿಂತ ಇಂದು ಹೆಚ್ಚು ಪಟ್ಟು ವಿನಿಯೋಗಿಸ ಬೇಕಾಗಿದೆ. ಕಾಲುವೆಗಳಲ್ಲಿ ನೀರು ಹರಿಯದಿರು ವುದರಿಂದ ಕಾಲುವೆ ಕಾಮಗಾರಿಗಳಲ್ಲಿ ಬಹುತೇಕ ಗುತ್ತಿಗೆದಾರರು ಲಾಬಿ ನಡೆಸಿ ಕಾಲುವೆಗಳನ್ನು ಕಳಪೆಯಾಗಿ ನಿರ್ಮಿಸಿದ್ದಾರೆ.

ಈ ಯೋಜನೆಗೆ ವಿನಿಯೋಗಿಸಿರುವ ಹಣವನ್ನು ಒಬ್ಬಬ್ಬರೂ ಪ್ರತ್ಯೇಕ ಲೆಕ್ಕ ಹೇಳುತ್ತಾರೆ. ಎಚ್‌ .ಡಿ.ರೇವಣ್ಣ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 165 ಕೋಟಿ ಹಣ ಬಿಡುಗಡೆಯಾಗಿರುವುದಾಗಿ ತಿಳಿಸುತ್ತಾರೆ. ಬಿಜಿಪಿ
ಸರ್ಕಾರದಲ್ಲಿ ಅತಿ ಹೆಚ್ಚಿನ ಹಣ ಬಿಡುಗಡೆ ಮಾಡಿರುವುದಾಗಿ ಬಿಜೆಪಿ ಪಕ್ಷದವರು ತಿಳಿಸುತ್ತಾರೆ. ಇಲಾಖೆಯ ಮಾಹಿತಿ ಪ್ರಕಾರ ಮೊದಲನೇ ಹಂತಕ್ಕೆ 48 ಕೋಟಿ 51 ಲಕ್ಷ, ಎರಡನೇ ಹಂತ 14 ಕೋಟಿ, 37 ಲಕ್ಷದ 63 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗಿರುತ್ತದೆ. 

ಈ ಭಾಗದ ರೈತರ ಕನಸು ಕಾಚೇನಹಳ್ಳಿ ಏತ ನೀರಾವರಿಯಾಗಿದ್ದು ರೈತರು, ರೈತ ಸಂಘದ ಸದಸ್ಯರು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ಕೆಲವು ದಿನ ಮೊದಲ ಹಂತದ ನೀರು ಹರಿಸಿ ನಿಲ್ಲಿಸಲಾಗಿದೆ.
 ಆನೆಕೆರೆ ರವಿ, ಕರ್ನಾಟಕ ರಾಜ್ಯ ರೈತ ಸಂಘ 

ದಯಾನಂದ್‌ ಶೆಟ್ಟಿಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next