ಮೈಸೂರು: ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಬಿನಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘಗಳ ನೇತೃತ್ವದಲ್ಲಿ ನೂರಾರು ರೈತರು ಶುಕ್ರವಾರ ನಗರದ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರು ಕಳೆದ ಎರಡು ವರ್ಷಗಳಿಂದ ಬೆಳೆಗಳಿಗೆ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಕಬಿನಿ ಜಲಾಶಯ ಭರ್ತಿಯಾದಾಗಿನಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
ಇದರಿಂದ ಈ ಭಾಗದ ರೈತರ ಬೆಳೆಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ. ತಮಿಳುನಾಡಿನ ರೈತರಿಗೆ ಮೂರನೇ ಬೆಳೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ನಮ್ಮ ರೈತರಿಗೆ ಒಂದು ಬೆಳೆಗೆ ನೀರು ನೀಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೆಳೆಗೆ ನೀರು ಹರಿಸಿ: ಕಬಿನಿ ಜಲಾಶಯ ಭರ್ತಿಯಾಗಿ 25 ದಿನಗಳಾಗಿದ್ದು ಜಲಾಶಯದಿಂದ ಇದುವರೆಗೂ 25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಆದರೆ ಕಬಿನಿ ಅಚ್ಚಕಟ್ಟು ಭಾಗದ ರೈತರ ವ್ಯವಸಾಯಕ್ಕೆ ನೀರು ಬಿಡುವ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಬಿನಿ ಬಲದಂಡೆ ನಾಲೆ ವ್ಯಾಪ್ತಿಯ ರೈತರು ಎರಡು ವರ್ಷದಿಂದ ಯಾವುದೇ ಬೆಳೆ ಬೆಳೆಯದೆ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಈ ವರ್ಷವೂ ಅದೇ ಸ್ಥಿತಿ ಬರದಂತೆ ಎಚ್ಚರ ವಹಿಸಬೇಕಿದೆ ಎಂದು ಎಚ್ಚರಿಸಿದರು.
ಹೋರಾಟದ ಎಚ್ಚರಿಕೆ: ಅಲ್ಲದೆ ಕೆಆರ್‌ಎಸ್ ಜಲಾಯಶ ಭರ್ತಿಯಾಗದಿದ್ದರೂ ಆ ಭಾಗದ ನಾಲೆಗಳಿಗೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಲಾಗುತ್ತಿದ್ದು, ಕಬಿನಿ ಅಣೆಕಟ್ಟೆಯ ನೀರನ್ನು ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ. ಹೀಗಾಗಿ ಸರ್ಕಾರ ಈ ಕೂಡಲೇ ಕಬಿನಿ ಅಚ್ಚಕಟ್ಟು ನಾಲೆಗಳಿಗೆ ನೀರು ಹರಿಸುವ ತೀರ್ಮಾನ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರಗೂರು ಶಂಕರ, ಕೆರೆಹುಂಡಿ ರಾಜಣ್ಣ, ಪರಶಿವಮೂರ್ತಿ, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಇನ್ನಿತರರು ಭಾಗವಹಿಸಿದ್ದರು.