ಮೈಸೂರು: ಜ್ಯುಬಿಲಿಯಂಟ್ ಔಷಧ ಕಂಪನಿ ಮೈಸೂರಿನಲ್ಲಿ ಕೊರೊನಾ ಹರಡಲು ಕಾರಣವಾಗಿದ್ದರೂ, ಕಾರ್ಖಾನೆ ಪುನಾರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣ ವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನಾ ಅನುಮಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಂಪನಿ ಇದ್ದಕ್ಕಿದ್ದಂತೆ ಹಳ್ಳಿಗಳನ್ನು ದತ್ತು ಪಡೆಯಲು, ಕಿಟ್ ವಿತರಿಸಲು ಕಾರಣವೇನು ಎಂದು ಪ್ರಶ್ನಿಸಿ, ಇದರ ಹಿಂದೆ ಸರ್ಕಾರ ಮುಚ್ಚಿಡುತ್ತಿರುವ ಯಾವುದೋ ರಹಸ್ಯ ಇದೆ. ಕಂಪನಿಗೆ ಕೊರೊನಾ ತಗುಲಿದ್ದು ಹೇಗೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಅಷ್ಟರಲ್ಲೇ ಮತ್ತೆ ಕಂಪನಿ ಪುನಾರಾ ರಂಭ ಮಾಡಲಾಗಿದೆ.
ಕಂಪನಿ ಹಳ್ಳಿ ದತ್ತು ತೆಗೆದುಕೊಳ್ಳುವ ಬಗ್ಗೆ, ಕಿಟ್ ವಿತರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಇದಕ್ಕೆ ಕಾರಣವೇನು ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದರು. ಬಿಜೆಪಿ ನಾಯಕರಲ್ಲೇ ಗೊಂದಲ ಇದೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಆರಂಭದಲ್ಲಿ ಶಾಸಕ ಹರ್ಷವರ್ಧನ್ ಈ ಬಗ್ಗೆ ಧ್ವನಿ ಎತ್ತಿದರು. ನಂತರ ಅವರೂ ಸುಮ್ಮನಾಗಿದ್ದಾರೆ.
ಅಲ್ಲದೆ ಅಂತಹ ತುರ್ತು ಪರಿಸ್ಥಿತಿಯಲ್ಲಿ ಸೋಮಣ್ಣನವರನ್ನು ವರ್ಗಾವಣೆ ಮಾಡಿದರು. ಇದಕ್ಕೆ ಕಾರಣವೇನು ಎಂಬುದು ಗೊತ್ತಿಲ್ಲ. ಸರ್ಕಾರ ತನಿಖೆ ಯನ್ನು ಪಾರದರ್ಶಕವಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ಮಾತನಾಡಿ, ಅಧಿವೇಶನದಲ್ಲಿ ಜ್ಯುಬಿಲಿ ಯಂಟ್ ಬಗ್ಗೆ ಮಾತನಾಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದೇವೆ.
ಕಂಪನಿ ವಿರುದ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂಬುದನ್ನು ತಿಳಿಯಬೇಕು. ಚೀನಾ ಹಾಗೂ ಇತರೆ ದೇಶಗಳ ಜೊತೆ ಕಂಪನಿಗೆ ನಂಟಿದೆ. ಎಲ್ಲವನ್ನೂ ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಹೆಡತಲೆ ಮಂಜುನಾಥ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಹಾಜರಿದ್ದರು.