ಬದುಕಿನಲ್ಲಿ ಏನಾದರೂ ಒಂದು ದುರಂತ ಸಂಭವಿಸಿ ದರೆ “ಅಯ್ಯೋ ಎಲ್ಲ ಮುಗಿಯಿತಲ್ಲಾ’ ಎನ್ನುವ ನಿರಾಶಾವಾದ ಬೇಡ. ಬದಲಾಗಿ ಮತ್ತೆ ನಮ್ಮ ಬದುಕಿನಲ್ಲಿ ಸಂತೋಷ, ನಗುವನ್ನು ಸೃಷ್ಟಿಸುವ ಸಂದರ್ಭಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳುವತ್ತ ಗಮನ ಹರಿಸಬೇಕು.
“ನಿಮ್ಮ ಖುಷಿಗೆ ನೀವೇ ಹೊಣೆಗಾರರು’ ಎಂಬುದು ಬಲ್ಲವರ ಮಾತು. ಯಾರು ನಿಮ್ಮ ದುಃಖಗಳನ್ನು ಹಂಚಿಕೊಳ್ಳಲಾರರು. ಹಾಗೊಂದು ವೇಳೆ ನಿಮ್ಮ ದುಃಖಕ್ಕೆ ಒಂದಿಷ್ಟು ಜನ ಅನುಕಂಪ ತೋರಿಯಾರು, ಮತ್ತೂಂದಿಷ್ಟು ಜನ ಸಹಾಯಹಸ್ತ ಚಾಚಿಯಾರು. ಆದರೆ ನೀವು ನಿಮ್ಮ ದುಃಖ, ಕಷ್ಟದಿಂದ ಹೊರಬರಲು ನೀವು ಎದ್ದು ನಿಲ್ಲಬೇಕು, ಎದುರಿಸುವ ಛಾತಿ ತೋರಿಸಬೇಕು. ನೀವೇ ಹಿಂದಡಿ ಇಟ್ಟರೆ ನಿಮಗೆ ಯಾರು ಸಹಾಯ ಮಾಡಲು ಮುಂದೆ ಬಂದರೂ ಅವರೂ ಹಿಂದೆ ಸರಿಯುವುದು ಅನಿವಾರ್ಯ. ಕಷ್ಟಕ್ಕೆ ಅಂಜದೇ ಎಲ್ಲವನ್ನೂ ತಡೆಹಿಡಿಯಬೇಕು. ನಮ್ಮಿಂದ ಬಗೆಹರಿಸಲು ಸಾಧ್ಯವಿಲ್ಲ ಎಂದು ನಾವು ಕೈ ಕಟ್ಟಿ ಕುಳಿತು ಕೊಳ್ಳಬಾರದು. ಫಲಿತಾಂಶ ಏನಿದ್ದರೂ ಆ ಬಳಿಕದ್ದು. ನೀವು ಕಣಕ್ಕಿಳಿಯುವ ಮೊದಲೇ ಇದು ನನ್ನಿಂದಾಗದ್ದು ಎಂಬ ತೀರ್ಮಾನಕ್ಕೆ ಬಂದುಬಿಟ್ಟಿರೆ ಫಲಿತಾಂಶದ ಮಾತಾದರೂ ಎಲ್ಲಿಂದ? ಕಣಕ್ಕಿಳಿದ ಬಳಿಕ ಫಲಿತಾಂಶಕ್ಕೆ ತಲೆಕೆಡಿಸಿಕೊಳ್ಳಬೇಡಿ. ಎಲ್ಲವನ್ನೂ ಕಾಲಕ್ಕೆ ಬಿಟ್ಟು ಬಿಡಿ, ಕಾಲ ಎಲ್ಲದಕ್ಕೂ ಉತ್ತರ ನೀಡುತ್ತದೆ. ಆದರೆ ನಿಮ್ಮ ಪ್ರಯತ್ನಗಳು ಮಾತ್ರ ಮುಂದುವರಿಯಲಿ. ಎಂಥ ಸಂಕಷ್ಟವೇ ಬರಲಿ, ಎಲ್ಲದಕ್ಕೂ ನಿಮ್ಮ ನಗುವೊಂದಿದ್ದರೆ ಸಾಕು. ಅದೇ ನಿಮ್ಮ ಬದುಕನ್ನು ಮುನ್ನಡೆಸುತ್ತದೆ.
ಎಂಥ ಪರಿಸ್ಥಿತಿ, ಸನ್ನಿವೇಶಗಳನ್ನು ಎದುರಿಸಿ ಮತ್ತೆ ಗಟ್ಟಿಯಾಗಿ ಎದ್ದು ನಿಲ್ಲು ವುದಕ್ಕೆ, ಗೆಲುವಿನ ಜತೆಗಿನ ಮುಗು ಳ್ನಗೆ ಬೀರುವುದಕ್ಕೆ, ಜತೆಗೆ ಎಲ್ಲರಿಗೆ ಮಾದರಿಯಾಗುವುದಕ್ಕೆ ಯಾರಿದ್ದಾರೋ ಇಲ್ಲವೋ ಒಟ್ಟಿನಲ್ಲಿ ನಮ್ಮ ಬದುಕು ನಮ್ಮ ಕೈಯೊಳಗಿರಬೇಕು ಎನ್ನುವ ಒಂದೇ ಒಂದು ಅಚಲ ನಿರ್ಧಾರ ಸಾಕು ನಮ್ಮ ಬದುಕು ಬದಲಾಗಲು. ಇವೆಲ್ಲವು ಗಳಿಲ್ಲದ ಜೀವನವನ್ನು ಊಹಿಸಲೂ ಅಸಾಧ್ಯ. ಇವೆಲ್ಲವೂ ಮೇಳೈಸಿದಾಗಲಷ್ಟೇ ಪ್ರತಿಯೊಂದರ ಮಹತ್ವ ಗೊತ್ತಾಗುವುದು. ಇಲ್ಲವಾದಲ್ಲಿ ಜೀವನದ ವಾಸ್ತವವೇನು? ಎಂಬುದು ನಮ್ಮ ಅರಿವಿಗೆ ಬರುವು ದಾದರೂ ಹೇಗೆ?
ಇನ್ನೊಬ್ಬರಂತಾಗಬೇಕು ಎಂಬ ಚಿಂತನೆ ಯನ್ನು ಬಿಟ್ಟು ಬಿಡಿ. ನಿಮಗೆ ಅವರ ಹಾಗೆ ಆಗಬೇಕು ಎಂಬ ಭಾವನೆ ಮನಸ್ಸಿನಲ್ಲಿ ಮೂಡಿತು ಎಂದರೆ ನೀವು ಅವರನ್ನು ಮಾದರಿಯಾಗಿ ಪರಿಗಣಿಸಬೇಕೇ ಹೊರತು ನೀವೂ ಅವರಂತಾಗುವ ಗುರಿ ಇಟ್ಟುಕೊಂಡರೆ ನೀವು ನಿಮ್ಮನ್ನೇ ಕೀಳಂ ದಾಜಿಸಿದಂತಾಗುತ್ತದೆ ಅಥವಾ ಅವರ ಮೇಲಿನ ನಿಮ್ಮ ಗೌರವ ಕಡಿಮೆಯಾಗಿದೆ ಎಂದೇ ಅರ್ಥ. ಹಾಗಾಗಿ ನೀವು ಯಾರಾಗಬೇಕೆಂದುಕೊಂಡಿರುವಿರೋ ಅವರನ್ನು ನಿಮ್ಮ ಆದರ್ಶ ಅಥವಾ ಮಾರ್ಗದರ್ಶಕ ಎಂದು ಪರಿಗಣಿಸಿ, ಆ ಹಾದಿಯಲ್ಲಿ ಮುನ್ನಡೆಯಿರಿ. ಆಗ ತನ್ನಿಂತಾನೇ ನೀವು ನಿಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ. ಏಕೆಂದರೆ ಈ ಸೃಷ್ಟಿಯಲ್ಲಿ ನೀವೇ ಒಂದು ಮಾಸ್ಟರ್ ಪೀಸ್. ಇಲ್ಲಿ ನಿಮಗೆ ನೀವೇ ಸಾಟಿ. ನೀವಿಲ್ಲಿಗೆ ಬಂದಿದ್ದೀರಿ ಎನ್ನುವುದು ವಾಸ್ತವ. ಇಲ್ಲಿರುವುದನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಿ. ನೀವು ಇನ್ನೊಬ್ಬರಾಗದೆ ನೀವಾಗಿ ಬದುಕಿ. ಇದರಿಂದಲೇ ಬದುಕು ಬಂಗಾರ. ನಿಮ್ಮ ಹೃದಯದ ಮಾತುಗಳಿಗೆ ಬೆಲೆ ಕೊಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳಿ. ಇನ್ನೊಬ್ಬರ ಮಾತುಗಳಿಂದ ಗೊಂದಲಕ್ಕೆ ಒಳಗಾ ಗಬೇಡಿ. ಯಾಕೆಂದರೆ ನಿಮ್ಮ ಹೃದಯದ ಮಾತು ನಿಮ್ಮದಾಗಿರುತ್ತದೆ.
ಈ ಕ್ಷಣಿಕ ಜೀವನದಲ್ಲಿ “ನಗು’ ಎಂಬ ಹೂವು ಸದಾ ಹಸಿರಾಗಿರಲಿ. ನಗು ನಗುತ್ತಾ ಬಾಳಿ.
– ಯಶೋದಾ ಲತೀಶ್, ಸುಳ್ಯ