Advertisement

ಪ್ರವಾಸ ಪ್ರಯಾಸ

03:45 AM Apr 28, 2017 | |

ಕೆಲವು ಸಂದರ್ಭಗಳೇ ಹಾಗೆ, ನಾವು ಬಯಸದಿದ್ದರೂ ಅವುಗಳು ನಮ್ಮ ಜೀವನದ ಹಾದಿಯಲ್ಲಿ ಅನೀರಿಕ್ಷಿತವಾಗಿ ಬಂದು ಮರೆಯಲಾಗದ ನೆನಪಾಗಿ ಉಳಿಯುತ್ತವೆ. ನಾನು ಸ್ನಾತಕೋತ್ತರ ಪದವಿಯ ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವಾಗ ನಾವು ಸ್ನೇಹಿತರೆಲ್ಲಾ ಟೂರ್‌ಗೆ ಹೋಗುವ ಎಂದು ಯೋಚಿಸಿ ಯೋಗ್ಯ, ಎಲ್ಲರಿಗೂ ಒಪ್ಪಿಗೆಯಾಗುವ ಸ್ಥಳದ ಕುರಿತಾದ ಚರ್ಚೆಯಲ್ಲಿದ್ದೆವು. ಕೊನೆಗೆ ಮುಳ್ಳಯ್ಯನಗಿರಿಗೆ ಹೋಗುವ ನಿರ್ಧಾರ ಮಾಡಲಾಯಿತು. ಆದರೆ, ಅದೇಕೋ ನನಗೆ ಈ ನಿರ್ಧಾರ ಒಪ್ಪಿಗೆಯಾಗಲಿಲ್ಲ. ನಾನು ಬೇರೆಯ ಸ್ಥಳದ ಪ್ರಸ್ತಾಪವನ್ನಿಟ್ಟಿದ್ದರಿಂದ ನೇರವಾಗಿ “ಬರುವುದಿಲ್ಲ’ ಎಂದು ಹೇಳಿದ್ದೆ. 

Advertisement

22 ವಿದ್ಯಾರ್ಥಿಗಳಿದ್ದ ನಮ್ಮ ಕ್ಲಾಸಿನಲ್ಲಿ ಕೆಲವು ನನ್ನ ಸ್ನೇಹಿತರು ತಮ್ಮದೇ ಬೇರೆ ಬೇರೆ ಕಾರಣಗಳಿಗಾಗಿ ಬರಲಾಗದು ಎಂದು ತಿಳಿಸಿದ್ದರು. ಕೊನೆಯಲ್ಲಿ ಒಟ್ಟು ಹದಿಮೂರು ಜನ ಸ್ನೇಹಿತರು ಹೊರಡಲು ಸಿದ್ಧತೆಯನ್ನು ನಡೆಸುತ್ತಿದ್ದರು. ಈ ಸಂಖ್ಯೆ ವ್ಯಾನ್‌ನ 13+1 ಸಂಖ್ಯೆಯ ಸೀಟುಗಳಿಗೆ ಸರಿಯಾಗಿ, ಮತ್ತೆ ಬೇರೆಯವರು ಹೋಗಲು ಬಯಸಿದರೆ ಸಾಧ್ಯವಿರಲಿಲ್ಲ. ಟೂರ್‌ ಗೆ ಹೋಗುವ ಹಿಂದಿನ ದಿನ ಕೆಲವು ಸ್ನೇಹಿತರು ಬಂದು, ನೀನೂ ಬರಬೇಕೆಂದು ಕೇಳಿಕೊಂಡರು. ಕಾರಣ, ತಯಾರಾಗಿದ್ದ ಹದಿಮೂರು ಸ್ನೇಹಿತರಲ್ಲಿ ಒಬ್ಬಳು ಯಾವುದೋ ಕಾರಣಕ್ಕೆ ಬರಲಾಗುತ್ತಿಲ್ಲವೆಂದು ತಿಳಿಸಿದ್ದಳು. ಅಂದರೆ ಅವಳಿಂದಾಗಿ ಉಳಿಯುವ ಆ ಖಾಲಿ ಸೀಟನ್ನು ನನ್ನಿಂದ ಭರ್ತಿ ಮಾಡಿಸುವ ವಿಚಾರವಾಗಿತ್ತು! ಅಷ್ಟು ಹೊತ್ತಿ¤ಗೆ ನನ್ನ ಅಸಮಾಧಾನವೂ ಶಮನವಾಗಿತ್ತಾದ್ದರಿಂದ, ಬರಲು ಒಪ್ಪಿಕೊಂಡೆ. ಎಲ್ಲರಿಗೂ ಬೆಳಿಗ್ಗೆ ಐದು ಗಂಟೆಗೆ ಹೊರಡುವುದೆಂದು ತಿಳಿಸಲಾಯಿತು. ಅಷ್ಟು ಬೇಗ ಏಳುವ ಅಭ್ಯಾಸವಿಲ್ಲದ ನಾನು ಟೂರ್‌ನ ನೆಪದಲ್ಲಿ ಏಳಬೇಕಾಯಿತು. ಎಲ್ಲರೂ ಸೇರುವ ಹೊತ್ತಿಗೆ ಆರು ಗಂಟೆಯಾಗಿತ್ತು. 

ನಮ್ಮ ಪಯಣ ಸುರತ್ಕಲ್‌ನ ನಮ್ಮ ಕಾಲೇಜ್‌ ಕ್ಯಾಂಪಸ್‌ನಿಂದ ಆರಂಭವಾಯಿತು. ನಾನು ಡ್ರೈವರ್‌ನ ಆಚೆ ಬದಿಗಿನ ಸಿಂಗಲ್‌ ಸೀಟಿನಲ್ಲಿ ಆಸೀನನಾಗಿದ್ದೆ. ನಿಧಾನವಾಗಿ ಸೂರ್ಯಕಾಂತಿ ಭೂಮಿಯ ಮೇಲೆ ಹರಡುತ್ತ ಇತ್ತು. ಆಗಷ್ಟೇ ಮಂಗಳೂರು ನಗರ ದಾಟಿ ನಮ್ಮ ವಾಹನ ಸಾಗುತ್ತಲಿದೆ, ಆಗ ಶುರುವಾಯಿತು ನೋಡಿ ವಾಂತಿಯ ಸ್ಪರ್ಧೆ! 

ನನ್ನ ಒಬ್ಬಳು ಸ್ನೇಹಿತೆಗೆ ಶುರುವಾದ ವಾಂತಿಯಿಂದಾಗಿ ವಾಹನವನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಲಾಯಿತು. ವಾಹನ ನಿಲ್ಲಿಸಿದಾಗ ಅವಳೊಂದಿಗೆ ಇನ್ನೂ ಮೂರ್ನಾಲ್ಕು ಸ್ನೇಹಿತರು ವಾಂತಿ ಮಾಡಿಕೊಂಡರು. ಸ್ವಲ್ಪ ಹೊತ್ತು ಕಾದು ವಾಹನ ಏರಿದ ತರುವಾಯ  ಎಲ್ಲರಿಗೂ ಹೊಟ್ಟೆ ಹಸಿವಾಗಿದೆಯೆನಿಸಿ ಡ್ರೈವರ್‌ಗೆ ಯಾವುದಾದರೂ ಒಳ್ಳೆಯ ಹೊಟೇಲ್‌ ಹತ್ತಿರ ನಿಲ್ಲಿಸಲು ತಿಳಿಸಿದೆವು. ಹೊಟೇಲ್‌ಗೆ ಹೋಗಿ ಎಲ್ಲರೂ ತಮ್ಮ ತಮ್ಮ ಇಷ್ಟದ ತಿಂಡಿ ತಿಂದು ಹೊರಬರುತ್ತಿದ್ದಂತೆ ಮತ್ತೂಬ್ಬಳು ಸ್ನೇಹಿತೆ ತಿಂದದ್ದನ್ನೆಲ್ಲಾ ಕಕ್ಕರಿಸಿ ಬಿಡಬೇಕೇ! ಈ ವಾಂತಿ ಪುರಾಣ ಮುಗಿಯುವ ಲಕ್ಷಣಗಳೇ ಕಾಣಲಿಲ್ಲ. ಮತ್ತೆ ವಾಹನ ಏರಿದ ನಂತರ ನಾನು ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಸಿಂಗಲ್‌ ಸೀಟನ್ನು ವಾಂತಿಯಿಂದ ತತ್ತರಿಸಿದ ಒಬ್ಬಳು ಸ್ನೇಹಿತೆಗೆ ಬಿಟ್ಟುಕೊಡಬೇಕಾಯಿತು. 

ನಾನು ಆ ಸ್ನೇಹಿತೆ ಇದ್ದ ಸೀಟಿನಲ್ಲಿ ಹೋಗಿ ಕುಳಿತುಕೊಂಡರೆ ನನ್ನ ಪಕ್ಕದಲ್ಲಿ ಕಿಟಕಿ ಬಳಿ ಕುಳಿತವಳು ಮೊದಲಿಗೆ ಈ ವಾಂತಿಯನ್ನು ಶುರುಮಾಡಿದವಳೇ! ಅನಂತರ ಒಬ್ಬಳು ಸ್ನೇಹಿತೆಗೆ ಈ ವಾಂತಿಯ ಆಟ ಮುಗಿಯುವುದಿಲ್ಲವೆನಿಸಿರಬೇಕು, ಅವಳು ವಾಹನವನ್ನು ನಿಲ್ಲಿಸಲು ಹೇಳಿ ಪಾಲಿಥೀನ್‌ ಬ್ಯಾಗ್‌ಗಳನ್ನು ತರಲು ಹುಡುಗರಲ್ಲಿ ಕೇಳಿಕೊಂಡಳು, ಅದರಂತೆ ಅವರು 50 ಬ್ಯಾಗ್‌ಗಳನ್ನು ತಂದು ಕೊಟ್ಟೆವು. ಯಾಕೆಂದರೆ, ಇವರ ವಾಂತಿಯಾಟ ನಿರಂತರವಾಗಿ ಮುಂದುವರಿಯುವ ಲಕ್ಷಣದಿಂದ ಈ ಉಪಾಯವನ್ನು ಮಾಡಲಾಗಿತ್ತು. ಆ ಪುಣ್ಯಾತಿಗಿತ್ತಿ ಹತ್ತಿರ ಕುಳಿತ ನನಗೆ ಬಂದ ಪಾಡೇನು ಗೊತ್ತೇ? ಕ್ರಿಕೆಟ್‌ ಮ್ಯಾಚ್‌ನಲ್ಲಿ ಹನ್ನೆರಡನೇ ಆಟಗಾರ ಮೈದಾನದಲ್ಲಿ ಆಡುವವರಿಗೆ ನೀರಿನ ಬಾಟಲ್‌ ಮತ್ತು ಬ್ಯಾಟ್‌ ತಂದು ಕೊಡುವಂತೆ ನಾನು ನನ್ನ ಪಕ್ಕದಲ್ಲಿದ್ದವಳಿಗೆ ಒಂದೊಂದೇ ಪಾಲಿಥೀನ್‌ ಬ್ಯಾಗ್‌ಗಳನ್ನು ನೀಡುವ ಸರ್ವರ್‌ ಬಾಯ್‌ ಆಗಬೇಕಾಯಿತು! ಅವಳು ವಾಂತಿಯನ್ನು ಬ್ಯಾಗ್‌ನಲ್ಲಿ ಮಾಡಿ ಅದನ್ನು ಹೊರಕ್ಕೆಸೆದ ನಂತರ ನಾನು ಹೊಸದೊಂದು ಬ್ಯಾಗ್‌ನ್ನು ಅವಳ ಕೈಗಿಡುವುದೇ ನನ್ನ ಕೆಲಸವಾಗಿತ್ತು! ವಾಂತಿಯ ವಾಸನೆಯಿಂದ ನೇರವಾಗಿ ಸೀಟಿನಲ್ಲಿ ಕುಳಿತುಕೊಳ್ಳಲಾಗದೇ ಪಕ್ಕಕ್ಕೆ ಒರಗಿ ಕುಳಿತಕೊಂಡವನಿಗೆ ಮತ್ತೂಂದು ಶಾಕ್‌ ಕಾದಿತ್ತು. 

Advertisement

ನಾನು ಕುಳಿತಿದ್ದ ಸೀಟಿನ ಪಕ್ಕದ ಬದಿಗಿನ ಸೀಟಿನಲ್ಲಿನ ಸ್ನೇಹಿತೆಗೂ ವಾಂತಿ ಶುರುವಾಗಿ ಅವಳೂ ತನ್ನ ಮುಖಕ್ಕೆ ಬ್ಯಾಗ್‌ ಹಿಡಿದಿದ್ದಾಳೆ. ಅವಳೇ ಹೇಳಿದಂತೆ, ಅವಳು ಈ ಮುಂಚೆ ವಾಹನದಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ವಾಂತಿ ಮಾಡಿಕೊಂಡ ಪ್ರಸಂಗವೇ ಇರಲಿಲ್ಲವಂತೆ. ಹಿಂತಿರುಗಿ ಒಮ್ಮೆ ನೋಡಿದರೆ ಹಿಂದಿನ ಸೀಟುಗಳಲ್ಲಿನ ಬಹುತೇಕ ಎಲ್ಲ ಸ್ನೇಹಿತರ ಕೈಯಲ್ಲೂ ಪಾಲಿಥೀನ್‌ ಬ್ಯಾಗ್‌ಗಳಿವೆ. ಅಯ್ಯೋ ದೇವರೇ! ಇ
ಲ್ಲೇನೂ ವಾಂತಿ ಮಾಡಿಕೊಳ್ಳುವ ಸ್ಪರ್ಧೆಯನ್ನೇನಾದರೂ ಇಟ್ಟುಕೊಳ್ಳಲಾಗಿದೆಯೇ? ಎಂದನಿಸಿತು. ನನ್ನ ಪಕ್ಕದಲ್ಲಿಯೂ ಅದೇ ಸುತ್ತಮುತ್ತಲೂ ಅದೇ ಅಂದಾಗ ನಾನು ಈ ಟೂರ್‌ಗೆ ಬರಲೇ ಬಾರದಿತ್ತೆನಿಸಿತು. ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸ್ನೇಹಿತೆ ಮೂಸಂಬಿ ಹಣ್ಣು ತಂದಿದ್ದಳು; ಅದನ್ನು ಅವಳು ಕೆಲವು ಸ್ನೇಹಿತರಿಗೆ ನೀಡುತ್ತಿದ್ದಾಳೆ, ನಾನು ಅವಳತ್ತ ನೋಡಿದರೆ, “ಬೇಜಾರು ಮಾಡಿಕೋ ಬ್ಯಾಡ! ನಿನಗೇನೂ ವಾಂತಿ ಸಮಸ್ಯೆಯಿಲ್ಲ’ ಎನಬೇಕೇ! “ಇರಲಿ’ ಎಂದು ಸುಮ್ಮನಾದೆ. 

ಕೊನೆಗೆ ಮಧ್ಯಾಹ್ನದ ಹೊತ್ತಿಗೆ ವ್ಯಾನ್‌ ಮುಳ್ಳಯ್ಯನಗಿರಿಯಲ್ಲಿನ ವಾಹನಗಳ ಪಾರ್ಕಿಂಗ ಜಾಗಕ್ಕೆ ಬಂದು ನಿಂತಿತು. ವ್ಯಾನ್‌ನಿಂದ ಇಳಿದ ನಮಗೆ ಎಲ್ಲೆಡೆಯೂ ಹಸಿರುಹೊದ್ದ ಬೆಟ್ಟ ಸಾಲುಗಳು ಗೋಚರಿಸಿದವು. ನಂತರ ಮುಳ್ಳಯ್ಯನಗಿರಿ ಬೆಟ್ಟವನ್ನೇರುವ ಉತ್ಸಾಹದಿಂದ ಹೆಜ್ಜೆಹಾಕುತ್ತಿದ್ದ ನಮಗೆ ಆಶ್ಚರ್ಯಕರ ವಿಷಯವೊಂದು ಕಾದಿತ್ತು. ಯಾವ ನನ್ನ ಸ್ನೇಹಿತೆ ಮೊದಲಿಗೆ ಈ ವಾಂತಿಯನ್ನು ಆರಂಭಿಸಿ ಉಳಿದವರು ವಾಂತಿಮಾಡಿಕೊಳ್ಳಲು ಕಾರಣವಾಗಿದ್ದಳ್ಳೋ ಅವಳೇ ಈಗ ಎಲ್ಲರಿಗಿಂತ ವೇಗವಾಗಿ ಮುಂದೆ ಮುಂದೆ ನಡೆಯುತ್ತಿದ್ದಾಳೆ. 

“ಅಲ್ಲಾ ಇವಳು ಬೆಳಿಗ್ಗೆ ತಿಂದದ್ದನ್ನೆಲ್ಲಾ ವಾಂತಿ ಮಾಡಿಕೊಂಡಿರುವಾಗ ಇವಳಿಗೆ ಈ ಶಕ್ತಿ ಎಲ್ಲಿಂದಾದರೂ ಬಂತು?’ ಎಂದು ಒಬ್ಬ ಸ್ನೇಹಿತೆಯಲ್ಲಿ ಪ್ರಶ್ನಿಸಿದೆ. ಅವಳಿಗೂ ಇದು ಆಶ್ಚರ್ಯವನ್ನುಂಟು ಮಾಡಿತು. ಸುಮಾರು ಒಂದೆರಡು ಗಂಟೆಗಳ ಕಾಲ ಅಲ್ಲಲ್ಲಿ ಪೋಟೋಗೆ ಪೋಸ್‌ ಕೊಡುತ್ತ, ದಣಿವಾರಿಸಿಕೊಳ್ಳುತ್ತ, ಒಬ್ಬರ ಕೈ ಒಬ್ಬರು ಹಿಡಿದು ಮುಂದೆ ಸಾಗಿದೆವು. ಅಂತೂ ಇಂತೂ ಕರ್ನಾಟಕದಲ್ಲಿಯೇ ಅತಿ ಎತ್ತರದ ಬೆಟ್ಟವಾದ  ಮುಳ್ಳಯನಗಿರಿ ಬೆಟ್ಟವನ್ನು ಏದುಸಿರು ಬಿಡುತ್ತಾ ಏರಿದ್ದಾಯಿತು. ಮುಳ್ಳಯ್ಯನಗಿರಿ ಬೆಟ್ಟದ ಮೇಲೆ ನಿಂತು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಾ  ನೋಡಿದಾಗ, ಬರುವಾಗ ಅನುಭವಿಸಿದ ಆ ನರಕಯಾತನೆಯನ್ನು ಮರೆತು ಯಾವುದೋ ಕನಸಿನ ಲೋಕದಲ್ಲಿರುವ ಅನುಭವವಾಗಿತ್ತು!

ಮುಳ್ಳಯನಗಿರಿ ಬೆಟ್ಟದಿಂದ ಕೆಳಗಿಳಿಯುವ ಹೊತ್ತಿಗೆ ಸಾಯಂಕಾಲ ಸಮೀಪಿಸುತ್ತಿತ್ತು. ಪುನಃ ವ್ಯಾನ್‌ ಏರಿದಾಗ ಈಗ ಹೋಗುವ ಸಮಯದಲ್ಲಾದರೂ ಯಾರೂ ವಾಂತಿ ಮಾಡಿಕೊಳ್ಳದೇ ಪಯಣ ಸುಖವಾಗಿರಲಿ ಎಂದುಕೊಂಡೆ. ಅಯ್ಯೋ! ಹಾಗೆ ನಾನಂದುಕೊಂಡರೆ ಆಗಿ ಬಿಡುತ್ತಾ? ಮತ್ತೆ ಅದೇ ವಾಂತಿಯ  ನರಕಯಾತನೆಯ ವಾಸನೆ ಬಡಿಯಲಾರಂಭಿಸಿತು! ಅಂತೂ ವಾಹನದಲ್ಲಿ ಪ್ರಯಾಣ ಮಾಡುವಾಗ ವಾಂತಿ ಮಾಡಿಕೊಳ್ಳದ ದಾಖಲೆಯನ್ನು ಯಾರ್ಯಾರು ಹೊಂದಿದ್ದರೋ ಅವರೆಲ್ಲರ ದಾಖಲೆಯ ಓಟಕ್ಕೆ ಈ ಟೂರ್‌ ವಿರಾಮವನ್ನು ತಂದಿತ್ತು. 

ಆದರೆ, ಅದೃಷ್ಟಕ್ಕೆ ನಾನು, ನನ್ನ ಇನ್ನೊಬ್ಬ ಸ್ನೇಹಿತ ವಾಂತಿ ಮಾಡಿಕೊಳ್ಳದೇ ಅನಿರೀಕ್ಷಿತವಾಗಿ ಎದುರಾದ ವಾಂತಿ ಮಾಡಿಕೊಳ್ಳದ ಸ್ಪರ್ಧೆಯಲ್ಲಿ ವೀಜೆತರಾಗಿ ಹೊಮ್ಮಿದ್ದೆವು. ಕಾಲೇಜಿಗೆ ಮರಳಿದ ಮೇಲೆ ನನ್ನ ಇನ್ನುಳಿದ ಸ್ನೇಹಿತರೊಂದಿಗೆ ಟೂರ್‌ನ ಅನುಭವ ಹಂಚಿಕೊಳ್ಳುವಾಗ ವಾಂತಿ ತಂದ ಫ‌ಜೀತಿಯನ್ನು ಹೇಳಿ ನಕ್ಕಿದ್ದೇ ನಕ್ಕಿದ್ದು.

ಶಿವಲಿಂಗದೇಸಾಯಿ ದಾಳಿ
ಪೂರ್ವ ವಿದ್ಯಾರ್ಥಿ
ಎನ್‌ಐಟಿಕೆ, ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next