Advertisement

ನಾಮಪತ್ರ ತಿರಸ್ಕರಿಸಿದ್ದಕ್ಕೆ ಜೆಡಿಎಸ್‌, ಬಿಜೆಪಿ ಆಕ್ಷೇಪ

03:08 PM May 19, 2019 | Suhan S |

ಬಂಗಾರಪೇಟೆ: ಪುರಸಭೆಯ ನಂ.16 ವಿಜಯನಗರ ಪೂರ್ವ ವಾರ್ಡ್‌ನಲ್ಲಿ ಪಕ್ಷದ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿರುವುದಕ್ಕೆ ಜೆಡಿಎಸ್‌ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಚುನಾವಣಾಧಿಕಾರಿಗಳು ಕಾಂಗ್ರೆಸ್‌ ಏಜೆಂಟರಂತೆ ವರ್ತಿಸುತ್ತಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಚಂದ್ರಮೌಳೇಶ್ವರ್‌ಗೆ ದೂರು ನೀಡಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಗೆ ಶನಿವಾರ ಜಮಾಯಿಸಿದ್ದ ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಬಣಕನಹಳ್ಳಿ ನಟರಾಜ್‌ ನೇತೃತ್ವದಲ್ಲಿ ಮುಖಂಡರು, ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಆಭ್ಯರ್ಥಿಗಳಿಗೆ ಬಿ ಫಾರಂ ನೀಡುವ ಸಂದರ್ಭದಲ್ಲಿ ಪರಿಶೀಲನೆ ಮಾಡಿ ನೀಡಲಾಗಿತ್ತು. ಆದರೂ ಚುನಾವಣಾಧಿಕಾರಿಗಳು ಕಾಂಗ್ರೆಸ್‌ ಪಕ್ಷದ ಏಜೆಂಟ್‌ಗಳಂತೆ ವರ್ತನೆ ಮಾಡುತ್ತಿದ್ದು, ಜೆಡಿಎಸ್‌ ಅಭ್ಯರ್ಥಿಯ ಬಿ ಫಾರಂ ಅನ್ನು ಉದ್ದೇಶಪೂರ್ವಕವಾಗಿಯೇ ತೆಗೆದುಹಾಕಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಸ್ಪರ್ಧಿಸಿದ್ದ ನಂ.16 ವಿಜಯನಗರ ಪೂರ್ವ ವಾರ್ಡ್‌ನಿಂದ ಟಿ.ರಾಜು ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಎ ಫಾರಂ ಮಾತ್ರ ಹಾಕಿದ್ದು, ಬಿ ಫಾರಂ ಸಲ್ಲಿಸುವಂತೆ ಚುನಾವಣಾಧಿಕಾರಿಗಳು ಕೇಳಿದ್ದಾರೆ. ಆದರೆ, ಬಿ ಫಾರಂ ಇನ್ನೂ ನೀಡಿಲ್ಲ, ಪಕ್ಷದ ಮುಖಂಡರು ಬಂದು ನೀಡಲಿದ್ದಾರೆ ಎಂದು ರಾಜು ಹೇಳಿದ್ದಾರೆ. ಆದರೂ ನಾಮಪತ್ರ ಪರಿಶೀಲನೆ ಸಮಯಕ್ಕೂ ಮುನ್ನವೇ ನಾಮಪತ್ರ ತಿರಸ್ಕೃತಗೊಳಿಸಿದ್ದಾರೆ ಎಂದು ಜೆಡಿಎಸ್‌ ದೂರಿದೆ.

ನಾಮಪತ್ರಗಳ ಪರಿಶೀಲನೆ ಮುಗಿದ 24 ಗಂಟೆಗಳ ನಂತರ ತಹಶೀಲ್ದಾರ್‌ ಕೆ.ಬಿ. ಚಂದ್ರಮೌಳೇಶ್ವರ್‌ ವಿರುದ್ಧ ತೀವ್ರ ಗರಂ ಆದ ಜಿಲ್ಲಾ ಜೆಡಿಎಸ್‌ ಮುಖಂಡರು, ಪುರಸಭೆ ಚುನಾವಣಾಧಿ ಕಾರಿ ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ ಏಜೆಂಟ್:ಬಂಗಾರಪೇಟೆಯ ಪುರಸಭೆ ಚುನಾವಣೆ ನಡೆಯುತ್ತಿರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇದರಿಂದ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಸರ್ಕಾರಿ ವಾಹನದಲ್ಲಿ ಓಡಾಡುತ್ತಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಿಕೊಳ್ಳಲು ಹೊಸದಾಗಿ ಕೊಳವೆಬಾವಿ ಕೊರೆಯಿಸುತ್ತಿದ್ದಾರೆ. ರಸ್ತೆಗಳಿಗೆ ಡಾಂಬರು ಹಾಕುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಕಾಂಗ್ರೆಸ್‌ ಪಕ್ಷದ ಏಜೆಂಟ್ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಇಲ್ಲ ಸಲ್ಲದ ಆಕ್ಷೇಪ: ಜಿಲ್ಲಾ ಜೆಡಿಎಸ್‌ ಪಕ್ಷದ ಉಪಾಧ್ಯಕ್ಷ ಬಣಕನಹಳ್ಳಿ ನಟರಾಜ್‌ ಮಾತನಾಡಿ, ಚುನಾವಣೆಯು ಪಾರದರ್ಶಕತೆಯಿಂದ ನಡೆಸದೇ ಕಾಂಗ್ರೆಸ್‌ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಸಲ್ಲದ ಆಕ್ಷೇಪಣೆಗಳನ್ನು ನೀಡಿ ರದ್ದು ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳು ಚುನಾವಣೆ ಕರ್ತವ್ಯಕ್ಕೆ ಬೇಕಾಗಿಲ್ಲ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಅವರನ್ನು ಒತ್ತಾಯಿಸಿದರು.

ನಾಮಪತ್ರ ವಾಪಸ್‌ಗೆ ಒತ್ತಡ: ಪುರಸಭೆಯ 21 ವಾರ್ಡ್‌ಗಳಲ್ಲಿ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದು, ಈಗಾಗಲೇ ಒಂದು ತಿರಸ್ಕೃತಗೊಂಡಿದೆ. ಬ್ಲಾಕ್‌ವೆುೕಲ್ ಮೂಲಕ ಉಳಿದ ಅಭ್ಯರ್ಥಿಗಳಿಗೆ ನಾಮಪತ್ರ ವಾಪಸ್‌ ಪಡೆಯುವಂತೆ ಕಾಂಗ್ರೆಸ್‌ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಇಲ್ಲಸಲ್ಲದ ಆಮಿಷಗಳನ್ನೊಡ್ಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಜೆಡಿಎಸ್‌ ಉಪಾಧ್ಯಕ್ಷ ಮೂರಾಂಡಹಳ್ಳಿ ಇ.ಗೋಪಾಲ್, ಮುಖಂಡರಾದ ಎಂ.ಮಲ್ಲೇಶ ಬಾಬು, ತಾಲೂಕು ಅಧ್ಯಕ್ಷ ಬ್ಯಾಡಬೆಲೆ ಅರುಣ್‌, ಮರಗಲ್ ಮುನಿಯಪ್ಪ, ವೈ.ವಿ.ರಮೇಶ್‌, ಹರಟಿಬಾಬು, ಡಾ.ರೋಷನ್‌, ಅಮರಾವತಿನಗರ ನಾಗರಾಜ್‌, ಕಾರ್ತಿಕ್‌, ಜೀವಿತೇಶ್‌, ಟ್ರಾವೆಲ್ಸ್ ಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

ಮಾಲೂರು ಪುರಸಭೆ 6 ನಾಮಪತ್ರ ವಾಪಸ್‌:

ಮಾಲೂರು ಪುರಸಭೆಯ ಸಾರ್ವತ್ರಿಕ ಚುನಾವಣೆಯ ನಾಮಪತ್ರಗಳ ವಾಪಸ್ಸಾತಿಯ ಮೊದಲ ದಿನವಾದ ಶನಿವಾರ 6 ಮಂದಿ ಹಿಂದೆ ಪಡೆದುಕೊಂಡಿದ್ದಾರೆ. ವಾರ್ಡ್‌ ಸಂಖ್ಯೆ 2ರಿಂದ ಪಕ್ಷೇತರ ಅಭ್ಯರ್ಥಿ ವಾಸಿಂಖಾನ್‌, ವಾರ್ಡ್‌ ಸಂಖ್ಯೆ 3ರ ಮಾ.ವೆಂ.ಪ್ರಕಾಶ್‌, ವಾರ್ಡ್‌ಸಂಖ್ಯೆ 21ರ ಭಾಗ್ಯಲಕ್ಷ್ಮೀ, 24ರ ಬಿಎಸ್‌ಬಿ ಅಭ್ಯರ್ಥಿ ಆಂಜಿನಪ್ಪ, 25ರ ಮಾಲಾದ್ರಿ, 26 ರಿಂದ ಎಂ.ಸಂಧ್ಯಾ ಅವರು ನಮ್ಮ ಉಮೇದುವಾರಿಕೆಯನ್ನು ಹಿಂದೆ ಪಡೆದುಕೊಂಡಿದ್ದಾರೆ. ನಾಮಪತ್ರಗಳನ್ನು ಹಿಂದೆ ಪಡೆಯಲು ಮಾ.20ರ ಸೋಮವಾರ ಮಧ್ಯಾಹ್ನ 3ಗಂಟೆಯವರೆಗೂ ಅವಕಾಶ ಇದ್ದು, ಇನ್ನೂ ಹೆಚ್ಚಿನ ಮಂದಿ ತಮ್ಮ ಉಮೇದುವಾರಿಕೆ ಹಿಂದೆ ಪಡೆಯುವ ಸಾಧ್ಯತೆಗಳಿವೆ.
Advertisement

Udayavani is now on Telegram. Click here to join our channel and stay updated with the latest news.

Next