ಬೆಂಗಳೂರು:ಎರಡೂ ಪಕ್ಷಗಳಿಗಿಂತ ನಮಗೆ ಕಡಿಮೆ ಸ್ಥಾನ ಇರೋದು ನಿಜ. ಆದರೆ ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಅವ್ರ ದಾರಿ ಅವ್ರು ನೋಡಿಕೊಳ್ಳಲಿ ಎಂದು ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಅಹಿಂದ ಮಾಡಿದ್ದಕ್ಕಾಗಿ ಜೆಡಿಎಸ್ ನಿಂದ ತನ್ನನ್ನು ಉಚ್ಚಾಟಿಸಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಸೇರಿಸಿ ಮುಖ್ಯಮಂತ್ರಿಯಾಗುವಂತಹ ವಾತಾವರಣವನ್ನು ನಿರ್ಮಿಸಿದವರೇ ನಾವು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿಕೆ ನೀಡುವ ಮೂಲಕ ವಾಕ್ಸಮರ ತಾರಕಕ್ಕೇರಿದೆ.
ಇದೀಗ ಸೋಮವಾರವೂ ವಿಶ್ವನಾಥ್ ಅವರು ಸಿದ್ದರಾಮಯ್ಯನವರಿಗೆ ಮತ್ತೆ ತಿರುಗೇಟು ನೀಡಿದ್ದಾರೆ. ಏತನ್ಮಧ್ಯೆ ಜೆಡಿಎಸ್ ಮುಖಂಡ ಕುಪೇಂದ್ರ ರೆಡ್ಡಿ ಅವರ ಹೇಳಿಕೆ ಮೈತ್ರಿ ಸರ್ಕಾರದ ಒಳಜಗಳಕ್ಕೆ ಮತ್ತಷ್ಟು ಬಿರುಸು ನೀಡಿದೆ.
ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಕಡಿಮೆ ಸ್ಥಾನ ಪಡೆದಿದ್ದು ಸತ್ಯ. ಕಾಂಗ್ರೆಸ್ ಪಕ್ಷದವರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದು, ನವದೆಹಲಿಯಲ್ಲಿ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ ನಡೆದ ಮಾತುಕತೆಯಲ್ಲಿ ಸಿಎಂ ಸ್ಥಾನ ಕೊಡುವ ಬಗ್ಗೆ ಅವರೇ ತೀರ್ಮಾನಿಸಿದ್ದು, ಹೀಗಾಗಿ ಅನಾವಶ್ಯಕವಾಗಿ ಸಿಎಂ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡಬಾರದು. ಒಂದು ವೇಳೆ ಅವರಿಗೆ ಕಷ್ಟವಾದರೆ ಕಾಂಗ್ರೆಸ್ ಪಕ್ಷ ಅವರ ದಾರಿಯನ್ನು ನೋಡಿಕೊಳ್ಳಲಿ ಎಂದು ತೀಕ್ಷ್ಣ ಸಂದೇಶವನ್ನು ರವಾನಿಸಿದ್ದಾರೆ.