Advertisement

ರೇಣುಕಾಚಾರ್ಯರ ನಡೆಗೆ ಜೆಡಿಎಸ್‌ ಆಕ್ರೋಶ

03:18 PM Nov 24, 2018 | Team Udayavani |

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಆರ್‌. ಶ್ರೀನಿವಾಸರನ್ನು ನಾಲಾಯಕ್‌… ಎಂದಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಿ. ಚಿದಾನಂದಪ್ಪ ಒತ್ತಾಯಿಸಿದ್ದಾರೆ. ಜಿಲ್ಲಾ ಮಂತ್ರಿ ಎಸ್‌.ಆರ್‌. ಶ್ರೀನಿವಾಸ್‌ ಬಗ್ಗೆ ರೇಣುಕಾಚಾರ್ಯ ಹೀನಾಯವಾಗಿ ಮಾತನಾಡಿರುವುದು ಖಂಡನೀಯ.

Advertisement

ಶ್ರೀನಿವಾಸ್‌ ಸಹ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರಿಗೂ ಅನುಭವ ಇದೆ. ರೇಣುಕಾಚಾರ್ಯರಿಂದ ಸಲಹೆ, ಸೂಚನೆ ಪಡೆಯುವ ಅಗತ್ಯ ಅವರಿಗೆ ಇಲ್ಲ. ಜಿಲ್ಲಾ ಮಂತ್ರಿಯಾಗಿದ್ದವರ ಬಗ್ಗೆ ರೇಣುಕಾಚಾರ್ಯ ಹೇಳಿಕೆ ಸರಿ ಅಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೊನ್ನಾಳಿ ತಾಲೂಕಿಗೆ ಮಾತ್ರವೇ ಪ್ರತ್ಯೇಕ ಮರಳು ನೀತಿ ಇಲ್ಲ. ಇಡೀ ರಾಜ್ಯಕ್ಕೆ ಒಂದೇ ನೀತಿ ಇದೆ. ಹೊನ್ನಾಳಿಯಲ್ಲಿ ತಾಂತ್ರಿಕ ಕಾರಣಕ್ಕೆ ಮರಳು ಒದಗಿಸುವಲ್ಲಿ ವಿಳಂಬ ಆಗಿರಬಹುದು. ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಅದನ್ನ ಸರಿ ಮಾಡಿದ್ದಾರೆ. ಆದರೂ, ಶಾಸಕರಾದವರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜೆಡಿಎಸ್‌ನ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಅಧ್ಯಕ್ಷ ಹೊದಿಗೆರೆ ರಮೇಶ್‌ ಮಾತನಾಡಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯರ ವರ್ತನೆ, ಹೇಳಿಕೆ ಅವರ ಘನತೆಗೆ ತಕ್ಕುದ್ದಲ್ಲ. ಮಾಜಿ ಸಚಿವರೂ ಆಗಿರುವ ಶಾಸಕ ರೇಣುಕಾಚಾರ್ಯರೇ ಕಾನೂನು ಕೈಗೆತ್ತಿಕೊಂಡರೆ ಜನ ಸಾಮಾನ್ಯರು ಹೇಗೆ ಕಾನೂನು ಗೌರವಿಸುತ್ತಾರೆ ಎಂಬುದನ್ನ ಅವರು ಅರ್ಥ ಮಾಡಿಕೊಳ್ಳಬೇಕು.
 
ಅವರು ಉದ್ದೇಶಪೂರ್ವಕ ವಾಗಿಯೇ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮೂಲಕ ಹೀರೋ ಆಗಲು ಹೊರಟಿದ್ದಾರೆ. ಕೊನೆಗೆ ಅವರೇ ವಿಲನ್‌ ಆಗುತ್ತಾರೆ ಎಂಬುದನ್ನ ಮರೆಯಬಾರದು ಎಂದು ಎಚ್ಚರಿಸಿದರು.

ದುಂಡಾವರ್ತನೆ ಮಾಡುತ್ತಿರುವ ರೇಣುಕಾಚಾರ್ಯ ರೌಡಿ ಎಂಎಲ್‌ಎ ಆಗದೆ ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್‌ ಬಗ್ಗೆ ಅವರ ಪದ ಬಳಕೆ ಸರಿ ಅಲ್ಲ. ಅವರೊಬ್ಬರಿಗೆ ಮಾತ್ರವೇ ಜನ ಬೆಂಬಲ ಇದೆ ಎಂಬುದಾಗಿ ತಿಳಿದುಕೊಂಡಿದ್ದರೆ ಅದು ಅವರ ಮೂರ್ಖತನ. ಜಿಲ್ಲಾ ಉಸ್ತುವಾರಿ ಸಚಿವರ ಹಿಂದೆ ಯಾರೂ ಇಲ್ಲವೇ ಇಲ್ಲ ಎಂದು ರೇಣುಕಾಚಾರ್ಯ ತಿಳಿದುಕೊಂಡಿದ್ದಾರೆ.

ನಮಗೂ ಹೊನ್ನಾಳಿಯಲ್ಲಿ ಜನರಿದ್ದಾರೆ. ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಸೈನಿಕರಾಗಿ ನಿಲ್ಲುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್‌ ಅವರನ್ನೇ ಕರೆದುಕೊಂಡು ಬಂದು ಹೊನ್ನಾಳಿಯಲ್ಲೇ ಸಭೆ ಮಾಡುತ್ತೇವೆ. ರೇಣುಕಾಚಾರ್ಯ ಅದೇನು ಮಾಡಿಕೊಳ್ಳುತ್ತಾರೋ ನೋಡುತ್ತೇವೆ ಎಂದು ಸವಾಲು ಹಾಕಿದರು.

ಹೊನ್ನಾಳಿಯಲ್ಲಿ ನಿಜವಾಗಿಯೂ ಸಮಸ್ಯೆ ಇದ್ದರೆ ಸಂಬಂಧಿತರೊಡನೆ ಚರ್ಚಿಸಿ, ಶಾಂತಯುತವಾಗಿ ಬಗೆ ಹರಿಸಿಕೊಳ್ಳಬಹುದಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಯಾರಿಗೂ ತೊಂದರೆ ಆಗದಂತೆ ಮರಳಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಮೌಖೀಕ ಸೂಚನೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ರೇಣುಕಾಚಾರ್ಯ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಿತ್ತು. ಅವರಿಗೆ ಅದು ಬೇಕಾಗಿಯೇ ಇಲ್ಲ. ಮರಳು ಹೆಸರಲ್ಲಿ ರಾಜಕೀಯ ಬಣ್ಣ ಬಳಿದುಕೊಂಡು ಹೀಗೆಲ್ಲಾ ಮಾಡುತ್ತಿದ್ದಾರೆ. ಅವರು ರೌಡಿ ಎಂಎಲ್‌ಎ ಎಂದು ಒಳಗೆ ಹೋಗುವ ಬದಲು ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕು. ಇಲ್ಲ ರಾಜೀನಾಮೆ ನೀಡಿ, ಮನೆಯಲ್ಲಿ ಇರಬೇಕು. ಅವರು ಇದೇ ರೀತಿ ವರ್ತನೆ ಮುಂದುವರೆಸಿದರೆ ನಾವೂ ಅವರಂತೆ ವರ್ತಿಸಬೇಕಾಗುತ್ತದೆ ಎಂದು ಹೇಳಿದರು. 

Advertisement

ಪಕ್ಷದ ಕಾರ್ಯಾಧ್ಯಕ್ಷ ಟಿ. ಗಣೇಶ್‌ ದಾಸಕರಿಯಪ್ಪ, ಮಹಿಳಾ ವಿಭಾಗ ಜಿಲ್ಲಾ ಅಧ್ಯಕ್ಷೆ ಶೀಲಾಕುಮಾರ್‌, ಟಿ. ಅಸYರ್‌,
ಕೆ.ಎಚ್‌. ಮಂಜುನಾಥ್‌, ಬಾತಿ ಶಂಕರ್‌, ಬಿ. ದಾದಾಪೀರ್‌, ವೆಂಕಟೇಶ್‌ ಕಣ್ಣಾಳ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಹೀಗೆಲ್ಲಾ ಮಾಡ್ತಿರೋದು ಲೀಡರ್‌ ಆಗಲು…
ರಾಜ್ಯ ಬಿಜೆಪಿಯಲ್ಲಿ ಇರುವ ಒಡಕಿನ ಸಂದರ್ಭದಲ್ಲಿ ಏನಾದರೂ ಮಾಡಿ ಲೀಡರ್‌ ಆಗಬೇಕೆಂದು ರೇಣುಕಾಚಾರ್ಯ ಹೀಗೆಲ್ಲಾ ಮಾಡುತ್ತಿದ್ದಾರೆ. ಯಡಿಯೂರಪ್ಪ ಗೆಲ್ಲಬೇಕು. ಶ್ರೀರಾಮುಲು ಪಲ್ಟಿ ಹೊಡೆಯಬೇಕು ಎಂಬ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ರಾಮುಲು ಅವರನ್ನ ಸೋಲಿಸಲು ಸಂಚು ರೂಪಿಸಲಾಯಿತು. ಬಳ್ಳಾರಿಯಲ್ಲಿ ಹಣ ಕೊಟ್ಟಿದ್ದರೆ ಗೆಲ್ಲುತ್ತಿದ್ದೆವು ಎಂದು ರೇಣುಕಾಚಾರ್ಯ ಹೇಳಿರುವುದ ನೋಡಿದರೆ ಅವರು ಈವರೆಗೆ ಹಣ ಕೊಟ್ಟೇ ಬಳ್ಳಾರಿಯಲ್ಲಿ ಗೆಲ್ಲಲಾಗುತ್ತಿತ್ತು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಂತದ್ದು ಯಾವುದೂ ನಡೆಯುವುದೇ ಇಲ್ಲ.
 ಹೊದಿಗೆರೆ ರಮೇಶ್‌, ಜೆಡಿಎಸ್‌ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next