Advertisement

ಜೆಡಿಎಸ್-ಕಾಂಗ್ರೆಸ್‌ ಮೈತ್ರಿಯಿಂದ ಬಿಜೆಪಿಗೇ ಲಾಭ

01:32 PM Mar 24, 2019 | Lakshmi GovindaRaju |

ಮೈಸೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದ ಬಿಜೆಪಿಗೆ ಒಳ್ಳೆಯ ಪರಿಣಾಮ ಬೀರಿದ್ದು, ಎರಡೂ ಪಕ್ಷಗಳ ಮತವೂ ಬಿಜೆಪಿಗೆ ಬರಲಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಡಾ.ವಾಮನಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಗಳಲ್ಲಿ ತ್ರಿಕೋನ ಸ್ಪರ್ಧೆ ಇರುತ್ತಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದರಿಂದ ನೇರ ಸ್ಪರ್ಧೆ ಏರ್ಪಟ್ಟಿದೆ. ಇದರಿಂದಾಗಿ ಒಟ್ಟು ಮತದಾನದ ಶೇ.51ಕ್ಕಿಂತಲೂ ಹೆಚ್ಚು ಮತ ಪಡೆಯುವ ಸದಾವಕಾಶವನ್ನು ಬಿಜೆಪಿಗೆ ಕೊಟ್ಟಿದ್ದೇವೆ. ಈ ಪಂಥಾಹ್ವಾನವನ್ನು ನಾವು ಸ್ವೀಕರಿಸಿದ್ದೇವೆ ಎಂದರು.

ಎರಡೂ ಪಕ್ಷಗಳ ಮೈತ್ರಿಯಿಂದ ಜನರಲ್ಲಿ ಬಿಜೆಪಿ ಬಗ್ಗೆ ಒಳ್ಳೆಯ ಪರಿಣಾಮವೂ ಬೀರಿದೆ. ಎರಡೂ ಪಕ್ಷಗಳ ಮತದ ಜೊತೆಗೆ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಬಯಸುವ ಜನರ ಮತ ಕೂಡ ಬಿಜೆಪಿಗೆ ಬರಲಿದೆ.

ಹೊಸ ಮತ್ತು ಯುವ ಮತದಾರರು ಖಂಡಿತವಾಗಿ ಬಿಜೆಪಿಗೇ ಮತ ಹಾಕುವ ವಿಶ್ವಾಸವಿದೆ. ಜೊತೆಗೆ ಸಾಮಾನ್ಯ ಮತದಾರರು ಯಾವತ್ತೂ ನನ್ನ ಮತ ಇಂಥದ್ದೇ ಪಕ್ಷಕ್ಕೆ ಎಂದು ಗೆರೆ ಹಾಕಿಕೊಂಡು ಕುಳಿತಿರಲ್ಲ, ಮೋದಿ ಸರ್ಕಾರದ ಸಾಧನೆಗಳನ್ನು ನೋಡಿ ಜನ ಸಾಮಾನ್ಯರು ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 143 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗಣನೀಯ ಮುನ್ನಡೆ ಸಿಕ್ಕಿತ್ತು ಎಂದರು.

Advertisement

ಇತರೆ ಪಕ್ಷಗಳಂತೆ ಬಿಜೆಪಿ ಮೂರು ದಿನದ ಚುನಾವಣೆ ಮಾಡುವುದಿಲ್ಲ. ಚುನಾವಣೆ ಎದುರಿಸಲು ನಮ್ಮದೇ ಆದ ಕಾರ್ಯತಂತ್ರಗಳಿವೆ. ಚುನಾವಣೆಯ ಮೂರ್‍ನಾಲ್ಕು ತಿಂಗಳ ಮೊದಲೇ ನಾವು ಚುನಾವಣಾ ತಯಾರಿ ಶುರು ಮಾಡುತ್ತೇವೆ,

ಪಕ್ಷದ ಪ್ರತಿಯೊಬ್ಬರಿಗೂ ಕೆಲಸ ಹಂಚಿ ಪ್ರತಿ ಬೂತ್‌ಗಳನ್ನು ತಲುಪಿ, ಬೂತ್‌ ಮಟ್ಟದಿಂದ ಕೆಲಸ ಮಾಡುತ್ತೇವೆ. ಹೀಗಾಗಿ ನಾವು ನೂರು ದಿನದ ಚುನಾವಣೆ ಮಾಡುತ್ತೇವೆ. ಬೇರೆ ಪಕ್ಷಗಳಲ್ಲಿ ಈ ರೀತಿಯ ವ್ಯವಸ್ಥೆ ಇಲ್ಲವೇ ಇಲ್ಲ ಎಂದರು.

ಗೆಲುವು ನಮ್ಮದೇ: ಪ್ರತಾಪ್‌ ಸಿಂಹ ಕೆಲಸ ಮಾಡುವ ಸಂಸದ, ಅವರೇನು ಸ್ಟೈಲ್‌ ಕೊಟ್ಟುಕೊಂಡು ಓಡಾಡುವವರಲ್ಲ, ಭ್ರಷ್ಟಾಚಾರಿಯಲ್ಲ, ಪ್ರಖರ ರಾಷ್ಟ್ರವಾದಿ ನಮ್ಮ ಅಭ್ಯರ್ಥಿ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರಭಾರಿಯಾಗಿ ಕಳೆದ 12 ದಿನಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ನಾವು ಯಾವ ಊರಿಗೆ ಹೋದರೂ ಬಿಜೆಪಿಯವರ ನಮ್ಮ ಮತ ಮೋದಿಗೆ ಅನ್ನುತ್ತಾರೆ. ಆ ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಮೋದಿಯವರ ಅಲೆ ಇದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next