ಮೈಸೂರು: ಏ ಮರಿಸ್ವಾಮಿ ನೀನ್ ನನ್ನ ಜತೆ ಇದ್ದೀಯಲ್ಲ ಬಾರಯ್ಯ ಇಲ್ಲಿ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ಬಾರಿ ಕರೆದರೂ ಕ್ಯಾರೆ ಎನ್ನದೇ ಕೊನೆಗೂ ವಾಹನದ ಬಳಿ ಬಂದಾಗ, ನಾನು ಜೆಡಿಎಸ್ ಕಾರ್ಯಕರ್ತ, ನಿಮಗೆ ವೋಟ್ ಹಾಕಲ್ಲ ಎಂದು ನೇರವಾಗಿ ಹೇಳಿದ ಪ್ರಸಂಗ ನಡೆಯಿತು.
ಬುಧವಾರ ಚಾಮುಂಡೇಶ್ವರಿ ಕ್ಷೇತ್ರದ ಹಳಕೆಸರೆ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರಚಾರ ಕಾರ್ಯ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮರಿಸ್ವಾಮಿ ದೂರದಲ್ಲಿ ಇದ್ದಿರುವುದನ್ನು ಸಿಎಂ ಗಮನಕ್ಕೆ ತಂದಿದ್ದರು. ಆಗ ಸಿಎಂ ಮೈಕ್ ಹಿಡಿದು ಏ ಮರಿಸ್ವಾಮಿ ಬಾರಯ್ಯ ಇಲ್ಲಿ ಎಂದು ಕರೆದು ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ಆಹ್ವಾನಿಸಿದ್ದರು.
ಆಗ ಮರಿಸ್ವಾಮಿ ನಾನು ಜೆಡಿಎಸ್ ನಲ್ಲಿದ್ದೇನೆ ಬರಲ್ಲ ಎಂದರು. ಆಯ್ತು ನೀ ಬರೋದು ಬೇಡ, ವೋಟ್ ಮಾತ್ರ ಕಾಂಗ್ರೆಸ್ ಗೆ ಹಾಕು ಎಂದರು. ನಿಮ್ಮನ್ನು ಡಿಸಿಎಂ ಮಾಡಿದ ಮಹಾಸ್ವಾಮಿಗೆ ನಮಸ್ಕಾರ. ಅದು ಆಗ ಕಣಯ್ಯಾ, ಈಗ ನಾನು ಸಿಎಂ ಎಂದು ಹೇಳಿದರು.ನಾನು ವೋಟು ಹಾಕಲ್ಲ, ಬರೋದು ಇಲ್ಲಾ. ಆಯ್ತು ಹೋಗು ಬುಡು, ನಿನ್ನ ಕರೆದು ಮಾತನಾಡಿಸಿ ತಪ್ಪು ಮಾಡಿದೆ. ಅವನು ಯಾರಿಗೆ ಬೇಕಾದ್ರೂ ವೋಟ್ ಹಾಕಲಿ, ನೀವು ಕಾಂಗ್ರೆಸ್ ಗೆ ಮತ ಹಾಕಿ ಎಂದು ಮನವಿ ಮಾಡಿಕೊಂಡರು.
ಬಳಿಕ ಸಿಎಂ ಸಿದ್ದರಾಮಯ್ಯ ಪ್ರಚಾರದ ವಾಹನ ಇಳಿದು ಕಾರು ಹತ್ತುವ ವೇಳೆ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಹಾಗೂ ಜೆಡಿಎಸ್ ಗೆ ಜೈ ಎಂದು ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ಇರಿಸು ಮುರಿಸು ತಂದ ಘಟನೆ ನಡೆಯಿತು.