Advertisement

ಕೊಯ್ಯೂರು ಗ್ರಾಮದಲ್ಲಿ ಮಲ್ಲಿಗೆ ಆದಾಯದ ಘಮ

11:23 PM Apr 25, 2019 | mahesh |

ಬೆಳ್ತಂಗಡಿ: ತಾಲೂಕಿನ ಕೊಯ್ಯೂರು ಗ್ರಾಮಕ್ಕೆ ಗ್ರಾಮವೇ ಮಲ್ಲಿಗೆ ಬೆಳೆದು ಆಚ್ಚರಿ ಮೂಡಿಸಿದೆ. ಬಹುತೇಕ ಮನೆ-ದೇವಸ್ಥಾನಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಕೊಯ್ಯೂರು ಗ್ರಾಮದಲ್ಲಿ ಬೆಳೆದ ಶಂಕರ್‌ಪುರ ಮಲ್ಲಿಗೆ ವಿತರಣೆಯಾಗುತ್ತಿದೆ. ಸುಮಾರು 400ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಶೇ. 80ರಷ್ಟು ಮನೆಗಳು ಮಲ್ಲಿಗೆ ಕೃಷಿಯಲ್ಲಿ ಆದಾಯ ಕಂಡುಕೊಂಡಿವೆ. ಬೇಸಗೆಯಲ್ಲೂ ಮನೆ ಮನೆ ತೆರಳಿದರೆ ಮಲ್ಲಿಗೆ ಘಮ… ಇರುವ ಅಲ್ಪಸ್ವಲ್ಪ ನೀರಲ್ಲಿ ಮಲ್ಲಿಗೆ ಬೆಳೆದ ಗ್ರಾಮವು ಸ್ವಾವಲಂಬಿ ಜೀವನ ನಡೆಸುತ್ತಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ. ಪಾರಂಪರಿಕ ಕೃಷಿಯಿಂದ ವಿಮುಖರಾಗುತ್ತಿರುವ ಕಾಲದಲ್ಲಿ ಪರ್ಯಾಯ ಕೃಷಿಯತ್ತ ವಾಲಿ ಗ್ರಾಮ ಹೊಸತನ ಕಂಡುಕೊಂಡಿದೆ.

Advertisement

ಕೊಯ್ಯೂರು ಕ್ರಾಸ್‌ನಿಂದ ಬೆಳಾಲು ವರೆಗೆ, ಮಲೆಬೆಟ್ಟುವಿನಿಂದ ಬಜಿಲ ವರೆಗೆ 100ಕ್ಕೂ ಹೆಚ್ಚು ಮನೆಗಳ ಜನರು ನಿರಂತರ ಮಲ್ಲಿಗೆ ಕೃಷಿಯಲ್ಲಿ ತೊಡಗಿಕೊಂಡಿದೆ. 50 ಗಿಡ, ಸಾವಿರ ರೂ. ಆದಾಯ ಕೊಯ್ಯೂರು ಗ್ರಾಮದ ಉಮಿಯ ಮನೆಯ ಕೃಷ್ಣಪ್ಪ ಗೌಡ ಅವರು ಸುಮಾರು 50ಕ್ಕೂ ಹೆಚ್ಚಿನ ಮಲ್ಲಿಗೆ ಗಿಡಗಳಿಂದ ತನ್ನ ಕುಟುಂಬ ನಿರ್ವಹಿಸುತ್ತಿದ್ದಾರೆ. ಶಂಕರ್‌ಪುರ ಮಲ್ಲಿಗೆ ಗಿಡ ಹೊಂದಿರುವ ಇವರು, ಒಂದು ಗಿಡ 10 ವರ್ಷ ಮಲ್ಲಿಗೆ ನೀಡಬಲ್ಲದ್ದಾಗಿದ್ದರಿಂದ 50 ಗಿಡಗಳಲ್ಲಿ ಕನಿಷ್ಠ 25 ಚೆಂಡು ಮಲ್ಲಿಗೆ ಪಡೆಯುತ್ತಿದ್ದಾರೆ. ದಿನವೊಂದಕ್ಕೆ ನಾಲ್ಕು ತಾಸು ಸಮಯ ಮೀಸಲಿಟ್ಟರೆ ಸಾವಿರ ರೂ. ಸಂಪಾದಿಸಬಹುದು.ಸುತ್ತಮುತ್ತಲ ಕಾಂತಪ್ಪ, ರಘುರಾಮ ಸರಿಸುಮಾರು 50 ಗಿಡಗಳಿಂದ 6ರಿಂದ 8 ಅಟ್ಟಿ ಕಟ್ಟಿ ಮಲ್ಲಿಗೆ ದಿನಂಪತ್ರಿ ನೀಡುತ್ತಿದ್ದಾರೆ.

ಶುಭ ಸಮಾರಂಭಕ್ಕೆ ಮನೆಯಿಂದಲೇ ಮಲ್ಲಿಗೆ
ಈ ಗ್ರಾಮದಲ್ಲಿ ಶುಭ ಸಮಾರಂಭಕ್ಕೆ ಪೇಟೆಯಿಂದ ಹೂ ಖರೀದಿಸಿ ತರುವ ಪದ್ಧತಿಯಿಲ್ಲ. ಸುಮಾರು 10 ವರ್ಷಗಳಿಂದಲೂ ಇಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಮನೆಯಿಂದಲೇ ಮಲ್ಲಿಗೆ ರವಾನೆಯಾಗುತ್ತದೆ. ಆದರೆ ಹೊರಗಿನವರಿಗೆ ಮಲ್ಲಿಗೆ ಕೇಳಿದರೆ ಸಿಗುವುದಿಲ್ಲ. ಏಕೆಂದರೆ ಬೆಳ್ತಂಗಡಿ ಮಲ್ಲಿಗೆ ಮಾರುಕಟ್ಟೆಗೆ ದಿನನಿತ್ಯ ನೀಡುವುದರಿಂದ ಸಣ್ಣದೊಂದು ಒಡಂಬಡಿಕೆ ಈ ಊರಿನದಾಗಿದೆ.

ವಿದ್ಯಾಭ್ಯಾಸ ನೀಡಿದ ಆದಾಯ
ಕೊಯ್ಯೂರು ಗ್ರಾಮಕ್ಕೆ ಕೃಷಿಯೊಂದೇ ಆದಾಯದ ಮೂಲ. ಮನೆ ಮಕ್ಕಳ ವಿದ್ಯಾಭ್ಯಾಸ, ಮದುವೆ ಖರ್ಚು, ಕೊಟ್ಟಿಗೆ ರಿಪೇರಿ, ದಿನ ಖರ್ಚಿಗೆ ಮಲ್ಲಿಗೆಯಿಂದ ಬಂದ ಆದಾಯ ಜೀವನಾಧಾರವಾದ ನಿದರ್ಶನಗಳು ಇಲ್ಲಿ ಹಲವು ಮನೆಗಳಲ್ಲಿ ಕಾಣಸಿಗುತ್ತವೆ.

ಕಡಿಮೆ ನೀರು ಹೆಚ್ಚು ಆದಾಯ
ಒಂದು ಗಿಡ 10-15 ವರ್ಷ ಬಾಳುತ್ತದೆ. 5 ಸೆಂಟ್ಸ್‌ ಅಥವಾ 6 ಫೀಟ್‌ ಅಗಲ-7 ಫೀಟ್‌ ಉದ್ದ ಸ್ಥಳದಲ್ಲಿ ಸುಮಾರು 50 ಗಿಡ ನೆಡಬಹುದಾಗಿದೆ. ದಿನಕ್ಕೆ ಪ್ರತಿ ಗಿಡಕ್ಕೆ 5 ಲೀ. ನೀರುಣಿಸಿದರೆ 365 ದಿನಗಳು ಮಲ್ಲಿಗೆ ಕೈಸೇರುತ್ತದೆ. ದೇಹಕ್ಕೆ ಶ್ರಮವಿಲ್ಲದೆ, ನಷ್ಟ ರಹಿತವಾಗಿ ಮಲ್ಲಿಗೆಗೆ ಮಾರ್ಚ್‌, ಎಪ್ರಿಲ್‌, ಮೇ ತಿಂಗಳು ಬೇಡಿಕೆ ಹೆಚ್ಚು. ಉಳಿದ ಸಮಯಗಳಲ್ಲಿ ಪಾರಂಪರಿಕ ಕೃಷಿ ಇರುವುದರಿಂದ ಕೊಯ್ಯೂರು ಗ್ರಾಮ ಮಲ್ಲಿಗೆ ಕೃಷಿಗೆ ಹೆಸರುವಾಸಿಯಾಗಿದೆ.

Advertisement

 50 ಗಿಡಗಳಿಂದ 25 ಚೆಂಡು
ಹತ್ತು ವರ್ಷಗಳಿಂದ ಮಲ್ಲಿಗೆ ಕೃಷಿಯಲ್ಲಿ ತೊಡಗಿಕೊಂಡಿದ್ದು, ಕುಟುಂಬದ ಆದಾಯದ ಭಾಗವಾಗಿದೆ. ಸರಾಸರಿ 50 ಗಿಡಗಳಿಂದ 25 ಚೆಂಡು ಕಟ್ಟಬಹುದು.
– ಕೃಷ್ಣಪ್ಪ ಗೌಡ, ಉಮಿಯಾ, ಮಲ್ಲಿಗೆ ಕೃಷಿಕರು

 600 ರೂ. ಆದಾಯ
ಆರೋಗ್ಯಕರ ಮಲ್ಲಿಗೆ ಕೃಷಿ ಮಹಿಳೆಯರಿಗೆ ವರದಾನವಾಗಿದೆ. ದಿನವೊಂದಕ್ಕೆ 500ರಿಂದ 600 ರೂ. ಸಂಪಾದಿಸುವುದು ನಮಗೆ ಖುಷಿ ನೀಡಿದೆ.
 - ಚೇತನಾ, ಆದೂರ್‌ ಪೆರಾಲ್‌, ಮಲ್ಲಿಗೆ ಕೃಷಿಕರು

 50ರಿಂದ 60 ಅಟ್ಟಿ
ಧರ್ಮಸ್ಥಳ ಯೋಜನೆ ಮೂಲಕ ಮಲ್ಲಿಗೆ ಕೃಷಿ ಹಲವು ಮಂದಿ ಕೈಹಿಡಿದಿದೆ. ಕೊಯ್ಯೂರು ಗ್ರಾಮದ ಬರೆಮೇಲು, ಜಂಕಿನಡ್ಕ, ಆದೂರ್‌ ಪೆರಾಲ್‌ ಸಹಿತ ವಿವಿಧೆಡೆಗಳಿಂದ ದಿನವೊಂದಕ್ಕೆ 50ರಿಂದ 60 ಅಟ್ಟಿ ಮಲ್ಲಿಗೆ ನಮ್ಮಲ್ಲಿಗೆ ಬರುತ್ತದೆ. ಚೆಂಡಿಗೆ 150 ರೂ. ನಿಂದ 1200 ರೂ. ವರೆಗೆ ಮಲ್ಲಿಗೆ ಮಾರಾಟವಾದ ದಿನಗಳಿವೆ.
– ಮಂಜುನಾಥ್‌ ಕುಡ್ವ, ಹೂವಿನ ವ್ಯಾಪಾರಿ

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next