Advertisement

ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಲೂಟಿ ಮಾಡಿದರು

04:19 PM Dec 16, 2017 | Team Udayavani |

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಂದುಕೊಂಡು ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು 11 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿ, ಮನೆಯಲ್ಲಿದ್ದ ಹಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

Advertisement

ವಿದ್ಯಾರಣ್ಯಪುರದ ವೆಂಕಟಪ್ಪ ಲೇಔಟ್‌ ನಿವಾಸಿ ಲಾವಣ್ಯ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಇವರ ಪುತ್ರ ಜಗನ್‌ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಲಾವಣ್ಯ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, 86 ವರ್ಷದ ತಾಯಿ ಮತ್ತು ಪುತ್ರ ಜಗನ್‌ ಜತೆ ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದಾರೆ. ಮನೆಯ ಸಮೀಪದಲ್ಲಿಯೇ ಪ್ರಾವಿಷ‌ನ್‌ ಸ್ಟೋರ್‌ ನಡೆಸುತ್ತಿದ್ದು,  ಗುರುವಾರ ರಾತ್ರಿ ಲಾವಣ್ಯ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು.

ಈ ವೇಳೆ ಮನೆಯಲ್ಲಿ ಲಾವಣ್ಯ ಪುತ್ರ ಜಗನ್‌ ಮತ್ತು ಅವರ ತಾಯಿ ಇಬ್ಬರೇ ಇದ್ದರು. ಆಗ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು, ನಿಮಗೆ ಕೋರಿಯಲ್‌ ಬಂದಿದೆ ಎಂದು ಮನೆ ಬಾಗಿಲು ತೆಗೆಸಿದ್ದಾನೆ. ಈ ವೇಳೆ ಶಾಲೆಯ ಹೋಂವರ್ಕ್‌ ಮಾಡುತ್ತಿದ್ದ ಪುತ್ರ ಜಗನ್‌ನ ಕೈ ಮತ್ತು ಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಮನೆಯೆಲ್ಲಾ ಹುಡುಕಾಟ ನಡೆಸಿದ್ದಾರೆ. ಬಳಿಕ ಬೀರುವಿನಲ್ಲಿ ಇಟ್ಟಿದ್ದ 20 ಸಾವಿರ ನಗದು ಮತ್ತು 25 ಗ್ರಾಂನ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.

11 ಗಂಟೆ ಸುಮಾರಿಗೆ ಲಾವಣ್ಯ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ಆರೋಪಿಗಳನ್ನು ಕಂಡ ಲಾವಣ್ಯ ಯಾರೆಂದು ಪ್ರಶ್ನಿಸಿದ್ದಾರೆ. ನಾವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಮ್ಮ ಮನೆ ಮೇಲೆ ದಾಳಿ ನಡೆಸಿದ್ದೇವೆ ಎಂದು ಆರೋಪಿಗಳು ಉತ್ತರಿಸಿದ್ದಾರೆ. ಆರೋಪಿಗಳ ವರ್ತನೆಯಿಂದ ಅನುಮಾನಗೊಂಡ ಲಾವಣ್ಯ ಇನ್ನಷ್ಟು ಪ್ರಶ್ನೆಗಳನ್ನು ಕೇಳಲು ಮುಂದಾದಾಗ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿದ್ಯಾರಣ್ಯಪುರ ಠಾಣೆಯಲ್ಲಿ ದಾಖಲಾಗಿದೆ.

ಐವರು ದರೋಡೆಕೋರರ ಸೆರೆ
ಬೆಂಗಳೂರು:
ಬಟ್ಟೆ ಅಂಗಡಿ ನೌಕರರನ್ನು ದೋಚಿದ್ದ ಐವರನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದ ಪೈಪ್‌ಲೈನ್‌ ನಿವಾಸಿ ಮನು (21), ಕೆ.ಜಿ.ನಗರದ ಭರತ್‌ (19), ಕಸ್ತೂರ ಬಾ ನಗರದ ಮಹೇಶ್‌ (20), ಉಲ್ಲಾಳದ ಶ್ರೀನಿವಾಸ್‌ (20) ಮತ್ತು ರಾಮನಗರ ಜಿಲ್ಲೆ ತಟ್ಟೆಕೆರೆ ಗ್ರಾಮದ ಪುನಿತ್‌ಕುಮಾರ್‌ (23) ಬಂಧಿತರು. 

Advertisement

ಇವರಿಂದ ಕೃತ್ಯಕ್ಕೆ ಬಳಸಿದ್ದ 2 ಬೈಕ್‌, 1 ಚಾಕು, 1 ಲಕ್ಷ ರೂ. ಮೌಲ್ಯದ 6 ಮೊಬೈಲ್‌ ಮತ್ತು 2 ಚಿನ್ನದ ಉಂಗುರ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಅ.17ರಂದು ಮಾಂಗಿಲಾಲ್‌ ಪರಿಹಾರ್‌ ಮತ್ತು ಇವರ ಸ್ನೇಹಿತ ರಾಕೇಶ್‌ ಮತ್ತು ಜಯಂತಿಲಾಲ್‌ ಜತೆ ತಡರಾತ್ರಿ 12 ಗಂಟೆಗೆ ಗವಿಪುರ ಬಡಾವಣೆಯ ಶೇಖರ್‌ ಆಸ್ಪತ್ರೆ ಬಳಿ ನಡೆದು ಹೋಗುವಾಗ ಎರಡು ಬೈಕ್‌ನಲ್ಲಿ ಬಂದ ಐವರು, ಚಾಕು ತೋರಿಸಿ ಬೆದರಿಸಿ 2 ಮೊಬೈಲ್‌ ಹಾಗೂ 1 ಸಾವಿರ ಹಣ ಮತ್ತು ಪರ್ಸ್‌ ಕಿತ್ತುಕೊಂಡು ಹೋಗಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಐವರು ದರೋಡೆಕೋರರನ್ನು ಬಂಧಿಸಿದ್ದಾರೆ.

ಭರತ್‌, ಶ್ರೀನಿವಾಸ್‌ ಮತ್ತು ಮಹೇಶ್‌ 2016ರಲ್ಲಿ ಪಿಇಎಸ್‌ ಕಾಲೇಜು ಬಳಿ ನಡೆದಿದ್ದ ಹರ್ಷನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಸ್ನೇಹಿತನ ಹುಟ್ಟುಹಬ್ಬ ಆಚರಣೆ ಮುಗಿಸಿಕೊಂಡು ಮದ್ಯದ ಅಮಲಿನಲ್ಲಿ ಬರುವಾಗ ವ್ಯಕ್ತಿಯೊಬ್ಬರನ್ನು ದರೋಡೆ ಮಾಡಿ ಪರಾರಿಯಾಗುತ್ತಿದ್ದರು. ಈ ವಿಚಾರ ತಿಳಿದ ಹೊಯ್ಸಳ ಸಿಬ್ಬಂದಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ.

ಒಂಟಿ ಸಂಚಾರಿಗಳ ದೋಚುತ್ತಿದ್ದವರ ಸೆರೆ
ಬೆಂಗಳೂರು:
ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 10 ಮಂದಿಯ ನಾಲ್ಕು ಪ್ರತ್ಯೇಕ ತಂಡಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ರಾಜೇಶ್‌, ಸತೀಶ್‌, ಮೊಹಮ್ಮದ್‌ ಅಫ್ರೀದ್‌, ಶಾಹೀದ್‌, ಖಾಲಿದ್‌ ಖಾನ್‌, ಪ್ರದೀಪ್‌, ವೇಣುಗೋಪಾಲ್‌, ವಿಕಾಸ್‌ ಹಾಗೂ ಆಸೀಫ್ ಪಾಷಾ, ನವಾಜ್‌ ಪಾಷಾ ಬಂಧಿತರು.

ಇವರ ಬಂಧನದಿಂದ 5 ಸುಲಿಗೆ ಪ್ರಕರಣಗಳು ಪತ್ತೆಯಾಗಿದ್ದು, 3.5 ಲಕ್ಷ ಮೌಲ್ಯದ 12 ಮೊಬೈಲ್‌, 1 ಲ್ಯಾಪ್‌ಟಾಪ್‌, 4 ಬೈಕ್‌ಗಳು, ಒಂದು ಡ್ಯಾ†ಗರ್‌, 2 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ಆರೋಪಿಗಳು, ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ದೋಚುತ್ತಿದ್ದರು. ಇತ್ತೀಚೆಗೆ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ದರೋಡೆ ಪ್ರಕರಣಗಳು ದಾಖಲಾಗಿದ್ದವು.

ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದಾಗ 10 ಮಂದಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಪೈಕಿ ರಾಜೇಶ್‌ ಮತ್ತು ಸತೀಶ್‌ ನಗರದ 8 ಕಡೆಗಳಲ್ಲಿ ಸುಲಿಗೆ ಮಾಡಿದ್ದಾರೆ. ಈ ಪೈಕಿ ಒಂದು ಪ್ರಕರಣ ಪತ್ತೆಯಾಗಿದೆ. ಇನ್ನುಳಿದ ಆರೋಪಿಗಳ ವಿರುದ್ಧ ಇತರೆ ಯಾವುದೇ ಪ್ರಕರಣಗಳಿಲ್ಲ. ಆದರೆ, ಮೋಜಿನ ಜೀವನಕ್ಕಾಗಿ ಮದ್ಯದ ಅಮಲಿನಲ್ಲಿ ದರೋಡೆ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next