ವಿಜಯಪುರ: ಜಿಲ್ಲೆಯ ಏತ ನೀರಾವರಿ ಯೋಜನೆಗಳ ಮೂಲಕ ಕಾಲುವೆಗಳಿಗೆ ನೀರು ಹರಿಸುವ ಜೊತೆಗೆ ಕೆರೆ ತುಂಬುವ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಂಡಿದ್ದು, ನೀರಾವರಿ ಯೋಜನೆಗಳು ನಿರ್ಣಾಯಕ ಹಂತಕ್ಕೆ ತಲುಪಿವೆ. ಹೀಗಾಗಿ ಸೆಪ್ಟಂಬರ್ ಅಂತ್ಯದೊಳಗೆ ಜಿಲ್ಲೆಯ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿ ಎಂದು ಜಲಸಂಪನ್ಮೂಲ ಸಚಿವ ಡಾ| ಎಂ.ಬಿ.ಪಾಟೀಲ ಹೇಳಿದರು. ಗುರುವಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳವಾಡ ಏತ ನೀರಾವರಿ ಮೂರನೇ ಲಿಫ್ಟ್ ಮಸೂತಿ ಮುಖ್ಯ ಸ್ಥಾವರದ ಪಂಪ್ ಗಳಿಗೆ ಪ್ರಾಯೋಗಿಕ ಚಾಲನೆ ನೀಡಿ ಅವರು ಮಾತನಾಡಿದರು. ಏನೆಲ್ಲ ಸಮಸ್ಯೆ, ಸಂಕಷ್ಟಗಳ ಮಧ್ಯೆಯೂ ಕೇವಲ ಕಳೆದ 4 ವರ್ಷಗಳಲ್ಲಿ ಜಿಲ್ಲೆಯ ಬಹುತೇಕ ಏತ ನೀರಾವರಿ ಯೋಜನೆಗಳನ್ನು ತ್ವರಿತ ಅನುಷ್ಠಾನ ಪೂರ್ಣಗೊಂಡಿದೆ ಎಂದರು. 54 ಟಿಎಂಸಿ ಅಡಿ ನೀರಿನ ಮುಳವಾಡ ಏತ ನೀರಾವರಿ ಯೋಜನೆ ಮಸೂತಿ ಸ್ಥಾವರ ಇಂದು ಪ್ರಾಯೋಗಿಕ ಚಾಲನೆ ಪಡೆದಿದೆ. ಇದರೊಂದಿಗೆ ಈ ಭಾಗದ ಬಹುದಿನಗಳಿಂದ ರೈತರ ಜಮೀನಿಗೆ ನೀರು ಹರಿಸುವ ಕನಸು ನನಸಾಗಿದೆ. ಇದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ. ಆರಂಭದ ಈ ಹಂತದಲ್ಲಿ ಕಾಲುವೆ ಮೂಲಕ 4 ಕೆರೆ ತುಂಬಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಅಂದಾಜು 7 ಸಾವಿರ ಕೋಟಿ ರೂ. ವೆಚ್ಚದ ಮುಳವಾಡ, 3600 ಕೋಟಿ ರೂ. ವೆಚ್ಚದ ತುಬಚಿ-ಬಬಲೇಶ್ವರ, ಚಿಮ್ಮಲಗಿ, ಗುತ್ತಿ ಬಸವಣ್ಣ ಯೋಜೆನ ಸೇರಿ ಬಹುತೇಕ ನಿರಾವರಿ ಯೋಜನೆಗಳು ಅನುಷ್ಠಾನದ ಅಂತಿಮ ಹಂತದಲ್ಲಿವೆ. ಬೂದಿಹಾಳ-ಪೀರಾಪುರ, ಚಡಚಣ ಯೋಜನೆಗಳು ಶೀಘ್ರವೇ ಚಾಲನೆ ಪಡೆಯಲಿವೆ. ನಾಗರಬೆಟ್ಟ ಯೋಜನೆಗೆ ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ಒಪ್ಪಿಗೆ ಪಡೆಯುತ್ತೇವೆ. ಆ ಮೂಲಕ ಬಸವಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಜನಿಸಿದ ಋಣ ತೀರಿಸುವುದಾಗಿ ಹೇಳಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಯೋಜನಾ ವೆಚ್ಚ ಸುಮಾರು 50 ಸಾವಿರ ಕೋಟಿ ರೂ. ಗೆ ತಲುಪಿದೆ. ಆಲಮಟ್ಟಿ ಜಲಾಶಯ ಹಿನ್ನೀರಿನ
ಸಂತ್ರಸ್ತರಗೆ ಭೂಸ್ವಾ ಧೀನ ಪರಿಹಾರ ಮತ್ತು ಪುನರವಸತಿಗೆ 30 ಸಾವಿರ ಕೋಟಿ ರೂ. ಬೇಕಿದೆ. ಜಲಾಶಯ ಪೂರ್ಣ ಪ್ರಮಾಣದಲ್ಲಿ ಎತ್ತರಿಸುವವರೆಗೆ ಕಾಲುವೆಗಳಿಗೆ ನೀರು ಹರಿಸಿ, ಜಿಲ್ಲೆಯ 203 ಕೆರೆ ಭರ್ತಿ ಮಾಡಲಾಗುತ್ತಿದೆ ಎಂದರು. ಕೃಷ್ಣಾ ಕಣಿವೆಯಲ್ಲಿ 5 ವರ್ಷಗಳಲ್ಲಿ 55 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನೀರಾವರಿ ಯೋಜನೆ ಕೈಗೆತ್ತಿಕೊಂಡಿದ್ದು, ಬಹುತೇಕ ಪೂರ್ಣಗೊಂಡಿವೆ. ಸಿ.ಎಂ. ಸಿದ್ಧರಾಮಯ್ಯ ನೇತೃತ್ವದ ನಮ್ಮ ಸರ್ಕಾರದಲ್ಲೇ ನೀರಾವರಿ ಯೋಜನೆ ಪೂರ್ಣಗೊಳಿಸಿ ನುಡಿದಂತೆ ನಡೆದ ಸರ್ಕಾರ ಎನಿಸಿಕೊಂಡಿದೆ ಎಂದರು. ಬಸವನ ಬಾಗೇವಾಡಿ ಶಾಸಕರೂ ಆಗಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು
ಒಳಚರಂಡಿ ಮಂಡಳಿ ಅಧ್ಯಕ್ಷ ಶಿವಾನಂದ ಎಸ್ .ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಎಡವೆ, ವೂಡಾ ಅಧ್ಯಕ್ಷ ಆಝಾದ ಪಟೇಲ, ಜಿ.ಪಂ. ಅಧ್ಯಕ್ಷೆ ನೀಲಮ್ಮ ಮೇಟಿ, ಸದಸ್ಯೆ ಶಾಂತಾಬಾಯಿ ನಾಗರಾಳ, ತಾ.ಪಂ. ಅಧ್ಯಕ್ಷೆ ಬೇಬಿ ಇಂಗಳೇಶ್ವರ, ಕೆಬಿಜೆಎನ್‌ಎಲ್ ಸಿಇ ಜಗನ್ನಾಥ ರೆಡ್ಡಿ, ತಹಶೀಲ್ದಾರ ಎಂ.ಎನ್.ಚೋರಗಸ್ತಿ, ಉಪಸ್ಥಿತರಿದ್ದರು. ಮಂಜಪ್ಪ ಸ್ತಾವಿಕವಾಗಿ ಮಾತನಾಡಿದರು