Advertisement

ಬೇಜವಾಬ್ದಾರಿಯಿಂದ ವರ್ತಿಸಿದ ಮುಖ್ಯಾಧಿಕಾರಿ ತರಾಟೆಗೆ

02:30 PM Nov 30, 2017 | Team Udayavani |

ಸಿದ್ದಾಪುರ: ಇಲ್ಲಿನ ಪಪಂ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷೆ ಸುಮನಾ ಕಾಮತ್‌ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಆರಂಭದಲ್ಲಿ ಹಿಂದಿನ ಠರಾವುಗಳ ದೃಢೀಕರಣ ಓದುವಾಗ ವಿಷಯ ಪ್ರಸ್ತಾವಿಸಿದ ಸದಸ್ಯ ಗುರುರಾಜ ಶಾನಭಾಗ್‌ ಪಟ್ಟಣದಲ್ಲಿ ಹಾದುಹೋಗುವ ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸಿಕೊಡುವ ಕುರಿತಂತೆ ಸಂಬಂಧಿಸಿದವರಿಗೆ ಪತ್ರ ಬರೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಮುಖ್ಯಾಧಿಕಾರಿ ಪತ್ರ ಬರೆದಿದ್ದೇವೆ, ಇನ್ನೂ ಬಟವಾಡೆ ಮಾಡಿಲ್ಲ ಎಂದಾಗ ಹಲವು ಸದಸ್ಯರು ಅವರನ್ನು ತರಾಟೆಗೆ ತೆಗದುಕೊಂಡರು. 

ಪತ್ರ ಬರೆದು ಅದನ್ನು ಕಳುಹಿಸಿಲ್ಲ ಎಂದರೆ ಏನು?  ಯಾಕೆ ತಡ. ಹಿಂದಿನ ವಿಶೇಷ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಿದ್ದರೂ ಈವರೆಗೆ ಕಳುಹಿಸಿಲ್ಲ ಎಂದರೆ ಬೇಜವಾಬ್ದಾರಿ ತೋರಿಸುತ್ತೀದ್ದೀರಿ. ಸಚಿವ ದೇಶಪಾಂಡೆ ಸಭೆ ಕರೆದರೆ ರಾತ್ರಿಯೂ ಹೋಗುತ್ತೀರಿ. ಪತ್ರ ಕಳುಹಿಸಲಾಗುವದಿಲ್ಲವೇ ಎಂದು ಕೆ.ಜಿ.ನಾಯ್ಕ ತರಾಟೆಗೆ ತೆಗೆದುಕೊಂಡರು. ಲೋಕೋಪಯೋಗಿ ಇಲಾಖೆ ಪಪಂ ವ್ಯಾಪ್ತಿಗೆ
ಬರುವ ರಸ್ತೆಯ ರಿಪೇರಿ ಮಾಡಿಲ್ಲ. ನೀವು ತಡ ಮಾಡಿದರೆ ಸಂಚಾರಕ್ಕೆ ತೊಂದರೆ ಎಂದು ದೂರಿದರು.

ಜಮಾ- ಖರ್ಚು ವಿವರ ನೀಡುವಾಗ ಪಟ್ಟಣದ ವಿವಿಧ ಭಾಗಗಳಲ್ಲಿ ಅಳವಡಿಸುವ ಬ್ಯಾನರ್‌, ಪ್ಲೆಕ್‌‌ ಮುಂತಾದವುಗಳಿಂದ 1080 ರೂ. ಸಂಗ್ರಹವಾಗಿದೆ ಎಂದಾಗ ಸದಸ್ಯರು ಪುನಃ ಮುಖ್ಯಾಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಊರ ತುಂಬ  ಬ್ಯಾನರ್‌, ಪ್ಲೆಕ್ಸಗಳು ಇದ್ದೇ ಇರುತ್ತವೆ. ಅವುಗಳಿಂದ ಇಷ್ಟು ಕಡಿಮೆ ಮೊತ್ತ ಸಂಗ್ರಹವಾಗಿದೆ ಎಂದರೆ ಏನರ್ಥ. ಬಸ್‌ ಸ್ಟಾಂಡ್‌, ಗಾರ್ಡನ್‌ ಸರ್ಕಲ್‌, ತಿಮ್ಮಪ್ಪ ನಾಯಕ ವೃತ್ತದಲ್ಲಿ ತಿಂಗಳುಗಟ್ಟಲೆ ಇರುತ್ತವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ನಾಯ್ಕ ದೂರಿದರು. ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಗಾರ್ಡನ್‌ ಸುತ್ತ ಬ್ಯಾನರ್‌ ಕಟ್ಟಲು ಕೊಡಬೇಡಿ ಎಂದು ಹಿಂದೆಯೇ ಹೇಳಿದ್ದೆವು. ಪಪಂ ಸೋಲಾರ್‌ ಕಂಬಕ್ಕೂ ಬ್ಯಾನರ್‌ ಕಟ್ಟುತ್ತಾರೆ. ದೊಡ್ಡ ಪ್ಲೆಕ್‌ಗಳನ್ನು ಇಡುತ್ತಾರೆ. ಅವುಗಳನ್ನು ಜಪ್ತಿ ಮಾಡಿ ಅಳವಡಿಸಿದವರ ಮೇಲೆ ದೂರು ಕೊಟ್ಟು ಕೇಸ್‌ ಹಾಕಿ ಎಂದ ಕೆ.ಜಿ. ನಾಯ್ಕ ರಸ್ತೆ ಬದಿಯ ತಳ್ಳುಗಾಡಿಗಳು ಕಾಯಂ ಆಗಿ ಇದ್ದಲ್ಲೇ ಇರುತ್ತವೆ. ಹಾಗೇ ನಿಲ್ಲಿಸಲು ಕೊಡಬೇಡಿ. ನಾಳೆ ಬೆಳಗ್ಗೆ ನೋಡುತ್ತೇನೆ ಎಂದರು. ಗಾಡಿಬಿಡಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯರು ಸಿಬ್ಬಂದಿಗೆ ಸೂಚಿಸಿದರು. 

ಸ್ವಚ್ಛ ಭಾರತ ಅಭಿಯಾನದಡಿ ವೈಯುಕ್ತಿಕ ಶೌಚಾಲಯ ಹೊಂದಿವರಿಗೆ ಪ್ರೋತ್ಸಾಹಧನ, ಹೆಚ್ಚುವರಿ ಸಹಾಯಧನಕ್ಕೆ ಅರ್ಹ ಫಲಾನುಭವಿಗಳ ಆಯ್ಕೆ, ಘನತ್ಯಾಜ್ಯ ವಸ್ತು ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳ ಕಾಮಗಾರಿ ಟೆಂಡರ್‌ ಮುಂತಾಗಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.

Advertisement

ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಮಾರುತಿನಾಯ್ಕ, ಕೆ.ಜಿ. ನಾಯ್ಕ, ಮಾರುತಿ ಕಿಂದ್ರಿ, ಗುರುರಾಜ ಶಾನಭಾಗ, ಸುರೇಶನಾಯ್ಕ ರವಿಕುಮಾರ ನಾಯ್ಕ, ಚಂದ್ರಮ್ಮ ಎನ್‌., ಪುಷ್ಪಾ ಗೌಡರ್‌, ಮೋಹಿನಿ ನಾಯ್ಕ, ಮುಖ್ಯಾಧಿಕಾರಿ ಸತೀಶ ಗುಡ್ಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next