ಕೊಪ್ಪಳ: ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ ಮುಂದೆ ನೋಡುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಸವರಾಜ ರಾಯರಡ್ಡಿ, ಬಿ ಆರ್ ಪಾಟೀಲ್ , ಆರ್ ವಿ ದೇಶಪಾಂಡೆಗೆ ಹುದ್ದೆ ನೀಡಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ, ರಾಯರಡ್ಡಿ ಆರ್ಥಿಕವಾಗಿ ಹೆಚ್ಚು ತಿಳಿದವರು ಅವರಿಗೆ ಹುದ್ದೆ ಕೊಟ್ಟರೆ ತಪ್ಪೇನು? ಆಡಳಿತದಲ್ಲಿ ಅವರಿಗೆ ಬೇರೆ ಬೇರೆ ಜವಾಬ್ದಾರಿ ಕೊಟ್ಟಿದೆ ಎಂದರು.
ಸಿಎಂಗೆ ಆರ್ಥಿಕ ಸಲಹೆಗಾರರು ಬೇಕಾ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ರಾಯರಡ್ಡಿ ಅವರಿಗೆ ಆರ್ಥಿಕ ಜ್ಞಾನವಿದೆ. ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಆರ್ಥಿಕ ಸಲಹೆಗಾರರು ಇರಲಿಲ್ವಾ? ಹಾಗಿದರೆ ಯಡಿಯೂರಪ್ಪ ಅವರು ಆರ್ಥಿಕವಾಗಿ ಜಗತ್ಪ್ರಸಿದ್ಧ ಆಗಿದ್ದರೆ? ಕುಮಾರಸ್ವಾಮಿ ಅವರ ಹೇಳಿಕೆಗೆಲ್ಲಾ ಉತ್ತರ ಕೊಡಲು ಆಗಲ್ಲ ಎಂದರು.
ನಿಗಮ ಮಂಡಳಿ ನೇಮಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹೈಕಮಾಂಡ್ ಈಗಾಗಲೇ ಅನುಮತಿ ನೀಡಿದೆ. ನಾನು ಹಾಗೂ ಕೆಪಿಸಿಸಿ ಅಧ್ಯಕ್ಷರು ಮಾತನಾಡಿದ್ದೇವೆ, ಬಂದ ತಕ್ಷನ ನೇಮಕ ನಡೆಯಲಿದೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳರಿಂದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ. ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಭ್ರಷ್ಟಾಚಾರ, 40 ಭ್ರಷ್ಟಾಚಾರ ತನಿಖೆಗಾಗಿ ಆಯೋಗ ರಚನೆ ಮಾಡಿದೆ. ಪಿಎಸ್ಐ ಹಗರಣದ ಕುರಿತು ತನಿಖೆಗೆ ಆಯೋಗ ಮಾಡಿದೆ. ಯತ್ನಾಳ ಆಯೋಗದ ಮುಂದೆ ಹೋಗಿ ದಾಖಲೆ ಕೊಡಲಿ, ಆಯೋಗದ ಮುಂದೆ ಹೇಳಿಕೆ ಕೊಡಲಿ. ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡುವವರು ಅವರದ್ದೆ ಪಕ್ಷದ ಶಾಸಕರು. ಅವರೇ ಆಯೋಗದ ಮುಂದೆ ಹೋಗಿ ದಾಖಲೆ ಕೊಡಲಿ ಎಂದರು.