Advertisement

ಬೀಳ್ಕೊಡುಗೆ ಎಂಬ ಆತ್ಮೀಯತೆ

03:45 AM Feb 19, 2017 | Harsha Rao |

ಆದಿಕವಿ ವಾಲ್ಮೀಕಿ ತನ್ನ ಸುಂದರಕಾಂಡದಲ್ಲಿ ಒಂದು ಆಕರ್ಷಕವಾದ ಉಪಮೆಯನ್ನು ಕೊಡುತ್ತಾನೆ. ಅದರ ವಿಶೇಷ ಸಂದರ್ಭ ಹೀಗಿದೆ. ಸಮುದ್ರವನ್ನು ಲಂ ಸಲು ಹನುಮಂತ ಆಕಾಶದೆತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಆಗ ಅವನು ನಿಂತ ಪರ್ವತದ ಗಿಡ, ಮರ, ಬಳ್ಳಿಗಳೆಲ್ಲವೂ ಅವನ ಮಹಾನ್‌ ಗಾತ್ರದ ದೇಹಕ್ಕೆ ಒತ್ತಿಕೊಂಡು ಕೊಸರಾಡುತ್ತವೆ.

Advertisement

ಅವನ್ನೆÇÉಾ ಗಣನೆಗೆ ತೆಗೆದುಕೊಳ್ಳದ ಹನುಮಂತ, ಒಮ್ಮೆ ಉಸಿರನ್ನು ದೀರ್ಘ‌ವಾಗಿ ಎಳೆದುಕೊಂಡು ಸಮುದ್ರದ ಮೇಲೆ ಹಾರಿಬಿಡುತ್ತಾನೆ. ಆಗ ಅವನನ್ನು ಒತ್ತಿ ನಿಂತ ಹಸಿರು ರಾಶಿ, ಅವನು ಜಿಗಿದ ಪರ್ವತದ ದಾರಿಯಲ್ಲಿ ಅಡ್ಡಬಂದ ಇತರ ಸಸ್ಯಸಮೂಹವೆಲ್ಲವೂ ಬೇರು ಸಮೇತ ಕಿತ್ತು ಹೋಗಿ, ಅವನ ಜೊತೆಯಲ್ಲಿಯೇ ಸ್ವಲ್ಪ ದೂರ ಸಾಗಿ, ಅನಂತರ ಸಮುದ್ರದಲ್ಲಿ ಬಿದ್ದು ಹೋಗುತ್ತವೆ. ಈ ದೃಶ್ಯವನ್ನು ವರ್ಣಿಸುವಾಗ ಆದಿಕವಿ ನಮ್ಮ ಪ್ರೀತಿಪಾತ್ರರು ಊರಿಗೆ ಹೊರಟು ನಿಂತಾಗ, ಅವರ ಜೊತೆ ಆಪ್ತರೆಲ್ಲರೂ ಸ್ವಲ್ಪ ದೂರದ ತನಕ ಹೋಗಿ ಕಳುಹಿಸಿ ಬರುವಂತೆ ಸಸ್ಯರಾಶಿಯು ಹನುಮಂತನೊಡನೆ ಸ್ಪಲ್ಪ ದೂರ ಹಾರಿದವು ಎಂದು ಹೇಳುತ್ತಾನೆ. ಈ ಉಪಮೆ ನನ್ನನ್ನು ಬಹುವಾಗಿ ಸೆಳೆದು ನಿಲ್ಲಿಸಿತು. ವಾಲ್ಮೀಕಿ ರಾಮಾಯಣ ಬರೆದು ಸುಮಾರು ಐದು ಸಾವಿರ ವರ್ಷಗಳಾದವು ಎಂದು ಅಂದಾಜು ಮಾಡಿದರೆ, ಅಂದಿನಿಂದಲೂ ಊರಿಗೆ ಹೊರಟವರ ಜೊತೆಯಲ್ಲಿ ಸ್ವಲ್ಪ ದೂರ ಹೋಗಿ ಬೀಳ್ಕೊಡುವ ಸಂಪ್ರದಾಯ ಭಾರತದಲ್ಲಿ ರೂಢಿಯಲ್ಲಿದೆ ಎಂದು ತಿಳಿದು ರೋಮಾಂಚನವಾಯಿತು.

ಬಾಲ್ಯದಲ್ಲಿ ಮನೆಗೆ ಯಾರೇ ಬರಲಿ, ಅವರನ್ನು ಬಸ್‌ನಿಲ್ದಾಣದವರೆಗೆ ಹೋಗಿ ಬೀಳ್ಕೊಡುವ ಸಂಪ್ರದಾಯ ಊರಲ್ಲಿ ಎಲ್ಲರ ಮನೆಯಲ್ಲಿಯೂ ಇತ್ತು. ಅದೊಂದು ರೀತಿಯ ಗೌರವ ತೋರುವ, ಪ್ರೀತಿ ತೋರುವ, ಖುಷಿ ಪಡುವ ಆಚರಣೆಯಾಗಿತ್ತು. ದಿನದ ಯಾವ ಹೊತ್ತೇ ಆಗಲಿ, ಮನೆಯ ಒಂದಿಬ್ಬರಾದರೂ ಅವರೊಡನೆ ಹೋಗಿ, ಬಸ್‌ ಹತ್ತಿಸಿ ಬರುವುದು ಕಡ್ಡಾಯವಾಗಿತ್ತು. ಅವರ ಲಗೇಜ್‌ ಎಲ್ಲವನ್ನೂ ನಾವು ಹೊತ್ತುಕೊಂಡು, ಅವರು ಬರಿಗೈಯಲ್ಲಿ ನಡೆಯುತ್ತಾ, ದಾರಿಯಲ್ಲಿ ಸಿಕ್ಕ ಪರಿಚಿತರಿಗೆÇÉಾ ತಾವು ಊರಿಗೆ ಹೊರಟ ವಿಷಯವನ್ನು ತಿಳಿಸುತ್ತಾ ಹೋಗುವುದು ಸಂಭ್ರಮದ ಸಂಗತಿಯಾಗಿತ್ತು. ಅವರು ನಿಲ್ದಾಣ ತಲುಪಿದ ಮೇಲೆ ಏನಾದರೂ ಮರೆತಿದ್ದು ನೆನಪಾದರೆ, ತಕ್ಷಣ ಮನೆಗೆ ಓಡಿ ಹೋಗಿ ಬಸ್ಸು ಬರುವುದರೊಳಗೆ ಅದನ್ನು ತರುತ್ತಿ¨ªೆವು.

ನಮ್ಮೂರಿನ ಬಸ್ಸುಗಳಿಗೋ ವೇಳೆಯೆಂಬುದು ಇರುತ್ತಿರಲಿಲ್ಲ. ಗಂಟೆಗಟ್ಟಲೆ ತಡವಾಗಿ ಬಂದರೂ ಅವರನ್ನು ವಿಚಾರಿಸುವವರು ಯಾರೂ ಇರುತ್ತಿರಲಿಲ್ಲ. ಹದಗೆಟ್ಟ ರಸ್ತೆಗಳಲ್ಲಿ ಯಾರು ತಾನೆ ಸಮಯ ಪರಿಪಾಲನೆ ಮಾಡಲು ಸಾಧ್ಯ? ಹೊತ್ತು ಗೊತ್ತಿಲ್ಲದೆ ಬರುವ ಬಸ್ಸಿಗೆ ಇರುವೆಯೂ ನುಸುಳದಂತೆ ಜನರು ಮುತ್ತುತ್ತಿದ್ದರು. ಅಂತಹ ಬಸ್ಸಿನಲ್ಲಿಯೇ ಹೇಗೋ ಹೊಂದಾಣಿಕೆ ಮಾಡಿ, ಅವರಿಗೊಂದು ಕುಳಿತುಕೊಳ್ಳಲು ಅಂಗೈ ಅಗಲದ ಜಾಗ ಮಾಡಿಕೊಟ್ಟರೆ ತೀರಿತು, ಅತಿಥಿ ಸತ್ಕಾರ ಪೂರ್ತಿಯಾಗಿ ಮಾಡಿದಂತಹ ಭಾವ ನಮ್ಮೆಲ್ಲರಿಗೂ ಮೂಡುತ್ತಿತ್ತು. ಮನೆಗೆ ಹೋದ ಮೇಲೆಯೂ ಎಲ್ಲರೂ ಬಸ್ಸಿನಾಗೆ ಸೀಟ್‌ ಸಿಕ್ತಾ? ಎಂದು ಮೊದಲನೆಯ ಪ್ರಶ್ನೆ ಕೇಳುತ್ತಿದ್ದರು. ಈ ಅತಿಥಿಗಳೇನೂ ದೂರದ ಊರಿನವರಾಗಿರುತ್ತಿರಲಿಲ್ಲ. ಬಳ್ಳಾರಿ ಜಿÇÉೆಯ ಆಚೆಯವರು ನಮ್ಮ ಮನೆಗೆ ಬಂದ ನೆನಪೇ ನನಗೆ ಅಷ್ಟಾಗಿ ಇಲ್ಲ. ಆದರೂ ಒಂದು ವಾರ ಕಳೆಯುವುದರಲ್ಲಿ, ಹದಿನೈದು ಪೈಸೆಯ ಕಾರ್ಡಿನಲ್ಲಿ ಸುಖವಾಗಿ ಸೇರಿದೆವು ಎಂಬ ಎರಡು ಪದ ಅವರಿಂದ ಬಂದ ನಂತರವೇ ನಮಗೆ ಸಮಾಧಾನವಾಗುತ್ತಿತ್ತು.

ಹುಡುಗರಾದ ನಮಗೆ ಈ ಬೀಳ್ಕೊಡುಗೆಯಲ್ಲಿ ಮತ್ತೂಂದು ಆಕರ್ಷಣೆ ಇರುತ್ತಿತ್ತು. ಅವರು ಬಸ್ಸು ಹತ್ತಿ ಕುಳಿತ ಮೇಲೆ, ಒಂದು ನಾಲ್ಕಾಣೆಯನ್ನೋ ಎಂಟಾಣೆಯನ್ನೋ ನಮ್ಮ ಕೈಗೆ ಹಾಕಿ, ಏನಾದ್ರೂ ಕೊಂಡುಕೊಂಡು ತಿನ್ನಪ್ಪಾ ರಾಜ ಎನ್ನುತ್ತಿದ್ದರು. ಅಮ್ಮ ಬೈತಾಳೆ ರ್ರೀ… ಎಂದು ನಾಚುತ್ತಲೇ ಅದನ್ನು ತೆಗೆದುಕೊಳ್ಳುತ್ತಿ¨ªೆವು. ಅದೊಂದು ದೊಡ್ಡ ನಿಧಿ ಕೈಗೆ ಸಿಕ್ಕ ಖುಷಿ ನಮ್ಮದಾಗಿ ರುತ್ತಿತ್ತು. ಅಂತಹ ಒಂದೆರಡು ನಾಲ್ಕಾಣೆ ಎಂಟಾಣೆಗಳು ಸೇರಿದಾಗ, ಒಂದು ಸಿನಿಮಾಕ್ಕೆ ಸ್ವಂತ ಖರ್ಚಿನಲ್ಲಿ ಹೋಗುವ ಗತ್ತನ್ನು ತೋರುತ್ತಿ¨ªೆವು. ಅದಕ್ಕೆ ಅಪ್ಪ-ಅಮ್ಮರ ಒಪ್ಪಿಗೆ ಬೇಕಿರುತ್ತಿರಲಿಲ್ಲ. ನನ್ನ ದುಡ್ಡು ನನ್ನ ಇಷ್ಟ ಎಂದು ಬೀಗುತ್ತಿ¨ªೆವು.

Advertisement

ಯಾರಾದರೂ ತೀರ್ಥಯಾತ್ರೆಗೆ ಹೊರಟರೆಂದರೆ ತೀರಿತು, ಬರೀ ಮನೆಯವರು ಮಾತ್ರವಲ್ಲ. ಇಡೀ ಓಣಿಯ ಜನವೆÇÉಾ ಕಳುಹಿಸಿ ಕೊಡಲು ಬರುತ್ತಿದ್ದರು. ಬರೀ ಬಡತನದಲ್ಲಿ ಬೇಯುತ್ತಿದ್ದ ಸಂಸಾರಗಳಲ್ಲಿ ತೀರ್ಥಯಾತ್ರೆಗೆ ಹೋಗಲು ಎಷ್ಟು ಜನರ ಬಳಿ ಹಣವಿದ್ದೀತು? ಆದರೆ ನಮಗೆ ಸ್ವತಃ ಹೋಗಲಾಗದಿದ್ದರೂ, ಅಲ್ಲಿಗೆ ಹೊರಟವರನ್ನು ಕಳುಹಿಸಿ ಕೊಟ್ಟು ಬಂದರೂ ತೀರ್ಥಯಾತ್ರೆಯ ಪುಣ್ಯ ನಮಗೆ ಲಭ್ಯವಾಗುತ್ತದೆ ಎಂಬ ಗಟ್ಟಿ ನಂಬಿಕೆ ನಮ್ಮೆಲ್ಲರಲ್ಲೂ ಇತ್ತು. ಆದ್ದರಿಂದಲೇ ತೀರ್ಥಯಾತ್ರೆಯ ಬೀಳ್ಕೊಡುಗೆ ಬಹು ಮಹತ್ವ¨ªಾಗಿರುತ್ತಿದ್ದವು. ನಮ್ಮ ಕೈಲಾದ ಹಣವನ್ನು ಅವರ ಕೈಗೆ ಕೊಟ್ಟು ದೇವರ ಹುಂಡಿಯಲ್ಲಿ ಹಾಕಲು ಹೇಳುತ್ತಿ¨ªೆವು. ಯಾತ್ರೆಯಲ್ಲಿ ಬಹಳ ಆರ್ಥಿಕ ಸಂಕಷ್ಟ ಒದಗಿತೆಂದರೆ ಅವರು ಆ ಹಣವನ್ನು ಉಪಯೋಗಿಸಿಕೊಂಡರೆ ಪಾಪವಿಲ್ಲವೆಂಬ ಮತ್ತೂಂದು ನಂಬಿಕೆಯೂ ನಮ್ಮ ಮಧ್ಯದಲ್ಲಿತ್ತು. ಹಣ ಕೊಡುವ ಶಕ್ತಿ ಇಲ್ಲದವರು, ಅವರಿಗೆ ಮಾರ್ಗ ಮಧ್ಯದಲ್ಲಿ ತಿನ್ನಲು ಸಹಕಾರಿಯಾಗಲೆಂದು ಏನಾದರೂ ತಿನಿಸನ್ನು ಮಾಡಿ ಕೊಡುತ್ತಿದ್ದರು. ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಆ ಅನಾರೋಗ್ಯಕ್ಕೆ ಸಂಬಂಧಿಸಿದ ತಾಮ್ರದ ಅಥವಾ ಬೆಳ್ಳಿಯ ಚಿತ್ರವನ್ನು ಹುಂಡಿಯಲ್ಲಿ ಹಾಕಲು ಹೇಳುತ್ತಿದ್ದರು. ಕಣ್ಣಿನ ಬೇನೆಯಿದ್ದರೆ ಕಣ್ಣಿನ ಚಿತ್ರದ ಬೆಳ್ಳಿಯ ತಗಡು, ಗರ್ಭಿಣಿಗೆ ಸುರಕ್ಷಿತ ಹೆರಿಗೆಯಾಗಬೇಕೆಂದರೆ ಹೊಟ್ಟೆಯ ಚಿತ್ರದ ತಗಡು, ಮಗುವು ದೊಡ್ಡದಾದರೂ ಮಾತು ಬರದಿದ್ದರೆ ಬಾಯಿಯ ಚಿತ್ರ ಹೀಗೆ. ಮದುವೆಗೆ ಬಂದ ಮಗಳಿಗೆ ಗಂಡು ಸಿಕ್ಕಿಲ್ಲದಿದ್ದರೆ ಒಂದು ಚಿಕ್ಕ ಮಂಗಳಸೂತ್ರವನ್ನು ಕಳುಹಿಸುವ ಸಂಪ್ರದಾಯವೂ ಇತ್ತು.

ತೀರ್ಥಯಾತ್ರೆಯ ಬೀಳ್ಕೊಡುಗೆ ಕೇವಲ ನಮ್ಮೂರಿಗೆ ಸೀಮಿತವಾದದ್ದಲ್ಲ. ನಾನು ಕೈಲಾಶ- ಮಾನಸಸರೋವರ ಯಾತ್ರೆಗೆ ಹೋದಾಗ ಅದರ ವಿರಾಟಸ್ವರೂಪವನ್ನು ಕಂಡಿದ್ದೇನೆ. ಉತ್ತರ ಭಾರತೀಯ ರಿಗೆ ಕೈಲಾಸ-ಮಾನಸಸರೋವರ ಯಾತ್ರೆಯೆಂದರೆ ಅತ್ಯಂತ ಮುಖ್ಯವಾದದ್ದು ಮತ್ತು ಪವಿತ್ರವಾದದ್ದು. ಕೇವಲ ಆರ್ಥಿಕವಾಗಿ ಸದೃಢವಾಗಿದ್ದರೆ ಸಾಲದು, ದೈಹಿಕವಾಗಿಯೂ ಸದೃಢವಾಗಿದ್ದವರಿಗೆ ಮಾತ್ರ ಈ ಯಾತ್ರೆ ಮಾಡಲು ಸಾಧ್ಯ. ಆದ್ದರಿಂದ ಕೆಲವೇ ಕೆಲವು ಪುಣ್ಯಾತ್ಮರು ಮಾತ್ರ ಶಿವನ ಮನೆಗೆ ಹೋಗಿ ಬರಬಲ್ಲರು ಎಂಬ ನಂಬಿಕೆ ಇದೆ. ಆ ಕಾರಣವಾಗಿ ಇಡೀ ಊರಿಗೇ ಊರೇ ಅಂತಹ ತಂಡಗಳನ್ನು ಅತ್ಯಂತ ಸಂಭ್ರಮದಿಂದ ಬೀಳ್ಕೊಡುತ್ತದೆ. ನಾವು ದೆಹಲಿಯಿಂದ ಯಾತ್ರೆ ಪ್ರಾರಂಭಿಸಿದೆವು. ನಮ್ಮ ಮಾರ್ಗಮಧ್ಯದಲ್ಲಿ ಹಲವು ಸಮುದಾಯಗಳು ನಮಗೆ ಊಟಕ್ಕೆ ಹಾಕುವುದು, ಯಾತ್ರೆಗೆ ಬೇಕಾದ ಕೆಲವು ಸಾಮಾನುಗಳನ್ನು ಉಡುಗೊರೆಯಾಗಿ ಕೊಡುವುದು, ಮೇಳದ ಸಮೇತ ನಮ್ಮನ್ನು ಊರಿನ ಗಡಿಯ ತನಕ ಕಳುಹಿಸಿ ಬರುವುದು ಇತ್ಯಾದಿಗಳೆÇÉಾ ನಡೆಯುತ್ತಿದ್ದವು. ಯಾತ್ರೆಯನ್ನು ಪೂರ್ತಿ ಮುಗಿಸಿ ಬಂದ ಮೇಲಂತೂ ನಮ್ಮನ್ನು ಅವರು ಸಾûಾತ್‌ ಶಿವನ ರೂಪವೆಂದೇ ಪರಿಗಣಿಸುತ್ತಿದ್ದರು. ಹಿರಿಯ-ಕಿರಿಯರೆಲ್ಲರೂ ನಮಗೆ ಹೂವಿನ ಹಾರ ಹಾಕಿ, ನಮಸ್ಕಾರ ಮಾಡಿ ಆಪ್‌ ತೋ ಭಗವಾನ್‌ ಹೈ ಎಂದು ಗದ್ಗದಿತರಾಗುತ್ತಿದ್ದರು. ಎಂಬತ್ತು ದಾಟಿದ ಹಿರಿಯರು ನನ್ನ ಕಾಲಿಗೆರಗಿದಾಗ ಹೌಹಾರಿ ಹಿಂದಕ್ಕೆ ಜಿಗಿದಿದ್ದೇನೆ.

ರೈಲ್ವೇ ನಿಲ್ದಾಣಗಳಲ್ಲಿ ಬೀಳ್ಕೊಡುಗೆ ಬಸ್‌ ನಿಲ್ದಾಣದಷ್ಟು ಸುಲಭವಲ್ಲ. ಏಕೆಂದರೆ ಇಲ್ಲಿ ಪ್ಲಾಟ್‌ ಫಾರ್ಮ್ ಟಿಕೇಟು ತೆಗೆಸಬೇಕು. ಆದರೆ ಭಾರತ ಮೂಲದ ರೈಲ್ವೇಗೆ ನಮ್ಮ ಸಂಸ್ಕೃತಿಯ ಪರಿಚಯವೂ ಇದೆಯಾದ ಕಾರಣ, ಅತ್ಯಂತ ಕ್ಷುಲ್ಲಕ ಬೆಲೆಯನ್ನು ಪ್ಲಾಟ್‌ ಫಾರ್ಮ್ ಟಿಕೆಟ್ಟಿಗೆ ನಿಗದಿಸಿರುವುದು ಕಂಡು ಬರುತ್ತದೆ.  ಅದು ಎಂತಹವರಿಗೂ ದೊಡ್ಡ ಹೊರೆಯೇನೂ ಅಲ್ಲ.  ಆ ಕಾರಣವಾಗಿಯೇ ಈಗಲೂ ರಾಶಿರಾಶಿಯಾಗಿ ಜನರು ಬೀಳ್ಕೊಡಲು ಬರುತ್ತಾರೆ. ರೈಲು ಹೊರಟರೂ ಅದರ ಜೊತೆಯಲ್ಲಿ ಓಡುತ್ತಾ, ಕಿಟಕಿಯಲ್ಲಿ ಕುಳಿತ ಆತ್ಮೀಯರಿಗೆ ಕೈ ಮಾಡುತ್ತಾ ಪ್ಲಾಟ್‌ ಫಾರ್ಮ್ ಕೊನೆಯ ತನಕ ಸಾಗುವ ದೃಶ್ಯ ಅತ್ಯಂತ ಆದ್ರìವಾದದ್ದು. ಅನುಭವಸ್ಥರು ಹೇಳುವ ಪ್ರಕಾರ ನಮ್ಮ ರೈಲು ಮತ್ತು ಬಸ್‌ ನಿಲ್ದಾಣಗಳಲ್ಲಿ ವ್ಯಕ್ತವಾಗುವಷ್ಟು ಪ್ರೀತಿ-ಪ್ರೇಮಗಳು ಯಾವ ಮದುವೆ ಮನೆಯಲ್ಲೂ ವ್ಯಕ್ತವಾಗುವುದಿಲ್ಲವಂತೆ!
ಆರಂಭ ಕಾಲದಲ್ಲಿ ವಿಮಾನ ನಿಲ್ದಾಣಗಳೂ ಬೀಳ್ಕೊಡುಗೆಯನ್ನು ಪೋ›ತ್ಸಾಹಿಸುತ್ತಿದ್ದವು. ಬೀಳ್ಕೊಡುವ ಸಂಪ್ರದಾಯ ಒಂದೆಡೆಯಾದರೆ, ವಿಮಾನ ಹಾರುವುದನ್ನು ಮೊದಲ ಬಾರಿಗೆ ನೋಡುವ ಪುಳುಕ ಮತ್ತೂಂದೆಡೆ. ಐವತ್ತು ರೂಪಾಯಿ ಶುಲ್ಕ ತೆಗೆದುಕೊಂಡು ನಮ್ಮನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಿದ್ದರು. ದುಬಾರಿಯೆನ್ನಿಸಿದರು ಹೋಗುತ್ತಿದ್ದವು. ಆದರೆ ಆಧುನಿಕತೆ ಹೆಚ್ಚಾದಂತೆ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕು, ಪ್ರೀತಿ-ಪ್ರೇಮದ ವ್ಯಕ್ತ ಪಡಿಸುವಿಕೆ  ಹಿನ್ನೆಲೆಗೆ ಸರಿಯುತ್ತದೆ. ಆ ಕಾರಣಕ್ಕಾಗಿಯೇ ಇರಬೇಕು, ಇತ್ತೀಚಿನ ದಿನಗಳಲ್ಲಿ ವಿಮಾನದ ನಿಲ್ದಾಣದ ಒಳಕ್ಕೆ ಹೋಗುವುದಕ್ಕೆ ಪ್ರಯಾಣಿಕರ ಹೊರತಾಗಿ ಯಾರಿಗೂ ಅನುಮತಿ ಸಿಗುವುದಿಲ್ಲ. ಸುಮ್ಮನೆ ಗೇಟಿನಲ್ಲಿ ನಿಲ್ಲುವುದಕ್ಕೆ ಯಾರು ತಾನೆ ಹೋಗುತ್ತಾರೆ? ಅದು ದಿನದಿನಕ್ಕೆ ಕಡಿಮೆಯಾಗುತ್ತದೆ.

ಯಾವುದೂ ಅತಿಯಾದರೆ ಕಷ್ಟವೇ ಸರಿ. ಇತ್ತೀಚೆಗೆ ನನ್ನ ಗೆಳೆಯರೆಲ್ಲರೂ ವಿಪರೀತವಾಗಿ ವಿದೇಶಿ ಪ್ರಯಾಣ ಮಾಡುತ್ತಿರುತ್ತಾರೆ. ಆ ವಿದೇಶಿ ವಿಮಾನಗಳ್ಳೋ, ನಿಶರಾತ್ರಿಯಲ್ಲಿಯೇ ಹೊರಡುತ್ತವೆ. ಅವರನ್ನು ಮತ್ತೆ ಮತ್ತೆ ಕಳುಹಿಸಿ ಬರಲು ಯಾರಿಗೆ ತಾನೆ ಸಾಧ್ಯ? ಅಂತಹ ಸಂಪ್ರದಾಯ ಹೊರಟು ಹೋಗಿದೆ. ಮನೆಯವರೆಲ್ಲರೂ ಗಾಢವಾದ ನಿದ್ರೆ ಮಾಡುತ್ತಿರುವಾಗ, ಇವರೊಬ್ಬರು ಮಾತ್ರ ಎದ್ದು, ಸ¨ªಾಗಿ ಅವರಿಗೆ ಎಚ್ಚರವಾಗದಂತೆ ಬರಿಗಾಲಿನಲ್ಲಿ ಮೆತ್ತಗೆ ನಡೆದಾಡುತ್ತಾ ರೆಡಿಯಾಗಿ, ಇಂಟರ್‌ ಲಾಕ್‌ ಬಾಗಿಲನ್ನು ಹಾಕಿಕೊಂಡು ಟ್ಯಾಕ್ಸಿಯಲ್ಲಿ ಹೋಗುತ್ತಾರೆ. ಮತ್ತೆ ಇನ್ನೊಂದು ರಾತ್ರಿ ಯಾವಾಗಲೋ ಹಿಂತಿರುಗುವ ಸಾಧ್ಯತೆ ಇರುವುದರಿಂದ, ಮನೆಯ ಡೂಪ್ಲಿಕೇಟ್‌ ಕೀಲಿಯನ್ನು ತಪ್ಪದೆ ಸೂಟ್‌ ಕೇಸಿನೊಳಕ್ಕೆ ಇಟ್ಟುಕೊಂಡು ಹೋಗುತ್ತಾರೆ.

ಬೆಂಗಳೂರಿನ ಭೀಕರ ವಾಹನ ದಟ್ಟಣೆಯೂ ಈ ಸಂಪ್ರದಾಯಕ್ಕೆ ಇತಿಶ್ರೀ ಹಾಡುತ್ತಿದೆ. ಮೆಜೆಸ್ಟಿಕ್‌ ಹೋಗಬೇಕೆಂದರೆ ಒಂದು ಇಡೀ ದಿನ ನಾಶವಾದಂತೆಯೇ ಸರಿ; ಅರ್ಧ ದಿನ ಹೋಗಿ ಬರಲು, ಇನ್ನರ್ಧ ದಿನ ಅದರ ಸುಸ್ತನ್ನು ಸುಧಾರಿಸಿಕೊಳ್ಳಲು. ವಿಮಾನ ನಿಲ್ದಾಣವಂತೂ ಐವತ್ತು ಕಿಲೋಮೀಟರ್‌ ದೂರ. ಅದರ ಮಾತನ್ನು ಎತ್ತುವುದೂ ತಪ್ಪಾಗುತ್ತದೆ. ಆದ್ದರಿಂದ ಮನೆಗೆ ಯಾರಾದರೂ ಬರುತ್ತಾರೆಂದರೆ ಲಕ್ಷಣವಾಗಿ ಸಿಟಿ ಬಸ್‌ ನಂಬರ್‌ ಹೇಳುವುದೋ, ಪೇಡ್‌ ಆಟೋ ಮಾಡಿಕೊಂಡು ಬನ್ನಿಯೆಂದು ತಿಳಿಸುವುದೋ, ಇನ್ನೂ ಹೆಚ್ಚು ಉತ್ಸಾಹ ಇದ್ದರೆ ಟ್ಯಾಕ್ಸಿ ಬುಕ್‌ ಮಾಡುವುದೋ ಮಾಡಬಲ್ಲವರಾಗಿದ್ದೇವೆ. ಆದರೆ ಈ ಅಸಹಾಯಕತೆಯನ್ನು ಬಹಳಷ್ಟು ಜನರು ಅರ್ಥ ಮಾಡಿಕೊಳ್ಳದೆ ನಮ್ಮನ್ನು ತಪ್ಪಿಸ್ಥರಾಗಿಯೇ ನೋಡುವ ಸಾಧ್ಯತೆಯೇ ಹೆಚ್ಚು.

ಇಂತಹ ದಿನಗಳನ್ನು ಆದಿಕವಿ ವಾಲ್ಮೀಕಿ ಕಂಡಿದ್ದರೆ ಹನುಮಂತನ ಸಾಗರೋಲ್ಲಂಘನವನ್ನು ಹೇಗೆ ವರ್ಣಿಸುತ್ತಿದ್ದ ಎಂದು ನನಗೆ ಕುತೂಹಲವಾಗುತ್ತದೆ. ಬಹುಶಃ ಹನುಮಂತನು ಆಕಾಶದೆತ್ತರಕ್ಕೆ ಬೆಳೆದು ಹಾರಿದ್ದರಿಂದ, ಹಲವು ವಾಹನಗಳು ಜಖಂಗೊಂಡು, ಬೆಂಗಳೂರಿನಲ್ಲಿ ವಾಹನ ದಟ್ಟಣೆ ಸರಿಪಡಿಸಲಾರದಷ್ಟು ಹೆಚ್ಚಾಗಿದೆ. ಶಿಖರಗಾಮಿ ಕಟ್ಟಡಗಳು ಬಿರುಕು ಬಿಟ್ಟು ಅಪಾರ ಆರ್ಥಿಕ ಹಾನಿ ಉಂಟಾಗಿದೆ. ಮೊಬೈಲ್‌ ಟವರ್‌ಗಳು ಕುಸಿದು ಬಿದ್ದು, ಎÇÉಾ ಮೊಬೈಲ್‌ ಗಳು ಅನುಪಯೋಗಿಯಾಗಿವೆ. ಈ ಎÇÉಾ ಕಾರಣದಿಂದಾಗಿ ಪುರಜನರು ಹನುಮಂತನ ಮೇಲೆ ಸರ್ವೋತ್ಛ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಲು ತಯಾರಿ ನಡೆಸಿ¨ªಾರೆ!
ಪುಣ್ಯಾತ್ಮ ಆದಿಕವಿ ಈ ಸಂಭ್ರಮವನ್ನು ಅನುಭವಿಸಲು ಈಗ ಬದುಕಿಲ್ಲ.

– ವಸುಧೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next