Advertisement

ಕಾಕ್ಲಿಯರ್‌ ಅಳವಡಿಕೆ

03:45 AM Jan 01, 2017 | |

ಕಿವುಡುತನ ಎನ್ನುವುದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಒಂದು ಸಾಮಾನ್ಯ ರೀತಿಯ ರೋಗ ಪರಿಸ್ಥಿತಿ. ಕಿವುಡುತನದಲ್ಲಿಯೂ ಬೇರೆ ಬೇರೆ ಶ್ರೇಣಿ/ಮಟ್ಟ ಮತ್ತು ವಿಧಗಳು ಇವೆ. ಕಿವುಡುತನಕ್ಕೆ ಬೇರೆ ಬೇರೆ ಅಂಶಗಳು ಕಾರಣ ಆಗಿರಬಹುದು. ಕಂಡಕ್ಟಿವ್‌ ಹಿಯರಿಂಗ್‌ ಲಾಸ್‌ ಎನ್ನುವುದು ಹೊರಕಿವಿ ಮತ್ತು ಮಧ್ಯಕಿವಿಯನ್ನು ಬಾಧಿಸುವ ಒಂದು ವಿಧದ ಕಿವುಡುತನ. ಕಿವಿಯ ಸೋಂಕು, ಕಿವಿಯ ಮೇಣ ಮತ್ತು ಇನ್ನಿತರ ಜನ್ಮಜಾತ ತೊಂದರೆಗಳು ಈ ಕಿವುಡುತನಕ್ಕೆ ಕಾರಣ ಆಗಿದ್ದು, ಔಷಧಿ ಮತ್ತು ಶಸ್ತ್ರಚಿಕಿತ್ಸಾ  ವಿಧಾನಗಳಿಂದ ಇದಕ್ಕೆ ಚಿಕಿತ್ಸೆ ನೀಡಬಹುದು ಮತ್ತು ಕಿವುಡುತನವನ್ನು ಸರಿಪಡಿಸಿಕೊಳ್ಳಬಹುದು. ಇನ್ನೊಂದು ರೀತಿಯ ಕಿವುಡುತನ ಅಂದರೆ ಸೆನ್ಸರಿನ್ಯೂರಲ್‌ ಕಿವುಡುತನ ಅಥವಾ ನರಸಂವೇದನಾ ಕಿವುಡುತನ. ಒಳಕಿವಿಯ ಮೇಲೆ ಇದರ ಪರಿಣಾಮ ಹೆಚ್ಚು. ಈ ಕಿವುಡುತನ ಕಾಣಿಸಿಕೊಳ್ಳಲು ಇರುವ ಪ್ರಮುಖ ಕಾರಣ ಅಂದರೆ ವಯಸ್ಸಾಗುವುದು, ನರದ ತೊಂದರೆ, ಕೆಲವು ಔಷಧಿಗಳ ಅಡ್ಡ ಪರಿಣಾಮಗಳು, ದೊಡ್ಡ ಶಬ್ದಕ್ಕೆ ಕಿವಿಗಳನ್ನು ಒಡ್ಡಿಕೊಳ್ಳುವುದರಿಂದ ಆಗುವ ಹಾನಿಗಳು ಮತ್ತು ಹುಟ್ಟುವಾಗಲೇ ಒಳಕಿವಿಯ ಕೆಲವು ಭಾಗಗಳಿಗೆ ಹಾನಿ ಆಗಿರುವುದು. 

Advertisement

ಸಾಮಾನ್ಯವಾಗಿ ಈ ವಿಧದ ಕಿವುಡುತನವನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ ಮತ್ತು ಇಂತಹ ರೀತಿಯ ಕಿವುಡುತನದ ರೋಗಲಕ್ಷಣಗಳಿಗೆ ಯಾವುದೇ ಚಿಕಿತ್ಸಾ ಕ್ರಮಗಳು ಇನ್ನಷ್ಟೆ ಲಭ್ಯ ಆಗಬೇಕಿದೆ. ಕೊನೆಯ ವಿಧದ ಕಿವುಡುತನಕ್ಕೆ  
ಮಿಕ್ಸ್‌$x ಹಿಯರಿಂಗ್‌ ಲಾಸ್‌ ಅಥವಾ ಮಿಶ್ರ ರೀತಿಯ ಕಿವುಡುತನ ಎಂದು ಹೆಸರು. ಬಾಹ್ಯ/ಮಧ್ಯ ಕಿವಿ ಮತ್ತು ಒಳಕಿವಿಯ ಕೆಲವು ನ್ಯೂನತೆಗಳ ಕಾರಣದಿಂದಾಗಿ ಈ ರೀತಿಯ ಕಿವುಡುತನ ಕಾಣಿಸಿಕೊಳ್ಳುತ್ತದೆ. ಈ ವಿಧದ ಕಿವುಡುತನವು ಸಣ್ಣ ಮಟ್ಟದಿಂದ ಬಹಳ ತೀವ್ರ ರೂಪದಲ್ಲಿ (ಸಂಪೂರ್ಣ ಕಿವುಡುತನ) ಇರಬಹುದು. ಹೆಚ್ಚಿನ ಪ್ರಕರಣಗಳಲ್ಲಿ ವ್ಯಕ್ತಿಯ ಕೇಳುವಿಕೆಯನ್ನು ಮತ್ತು ಜೀವನ ಗುಣಮಟ್ಟವನ್ನು ಉತ್ತಮಪಡಿಸಲು ಶ್ರವಣ ಸಾಧನಗಳನ್ನು ಆರಿಸಿಕೊಳ್ಳುವುದು ಆಯ್ಕೆಯ ಒಂದು ವಿಧಾನವಾಗಿರುತ್ತವೆ. ಸಾಧಾರಣದಿಂದ ತೀವ್ರ ಸ್ವರೂಪದ ಕಿವುಡುತನ ಇರುವವರಿಗೆ ಶ್ರವಣ ಸಾಧನಗಳಿಂದ ಪ್ರಯೋಜನ ಆಗಬಹುದು, ಆದರೆ ಸಂಪೂರ್ಣ ಕಿವುಡುತನ ಇರುವವರಿಗೆ ಶ್ರವಣ ಸಾಧನಗಳಿಂದ ಹೆಚ್ಚು ಪ್ರಯೋಜನ ಆಗದು. ಈ ರೀತಿಯಲ್ಲಿ  ವಿಶೇಷ ಶ್ರವಣ ನಷ್ಟ ಆಗಿರುವ ವ್ಯಕ್ತಿಗಳಿಗೆ ಕಾಕ್ಲಿಯರ್‌  ಇಂಪ್ಲಾಂಟ್‌ ಅನ್ನು ಸೂಚಿಸುತ್ತಾರೆ. 

ಕಾಕ್ಲಿಯರ್‌ ಇಂಪ್ಲಾಂಟ್‌ಗಳು, ನಷ್ಟವಾಗಿರುವ ಅಥವಾ ಹಾನಿಗೊಳಗಾಗಿರುವ ಹೇರ್‌ ಸೆಲ್‌ಗ‌ಳಿಗೆ ಬದಲಿಯಾಗಿ/ಪರ್ಯಾಯವಾಗಿ ಕೆಲಸ ಮಾಡುತ್ತವೆ, ಅಂದರೆ ಹೇರ್‌ ಸೆಲ್‌ಗ‌ಳು ಸ್ವೀಕರಿಸುವ ಶಬ್ದದ ಫ್ರೀಕ್ವೆನ್ಸಿ ಮತ್ತು ಆಂಪ್ಲಿಟ್ಯೂಡ್‌ ಅನ್ನು ಅನುಕರಿಸಿ, ಇಂಪ್ಲಾಂಟ್‌ ಶಬ್ದವನ್ನು ಪುನಾರಚನೆ ಮಾಡುತ್ತವೆ. 

ಇಂಪ್ಲಾಂಟ್‌ಗಳ ಮೂಲಕ, ಮಾತು ಮತ್ತು ಸುತ್ತಮುತ್ತಲಿನ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಮಟ್ಟಕ್ಕೆ ಶ್ರವಣ ಸಾಮರ್ಥ್ಯವನ್ನು ಸುಧಾರಿಸಬಹುದು; ಆದರೆ ಶಬ್ದದ ಗುಣಮಟ್ಟವು ಸ್ವಾಭಾವಿಕ ಕೇಳಿಸುವಿಕೆಗಿಂತ ಭಿನ್ನವಾಗಿರಬಹುದು ಮತ್ತು ಒಳಬರುವ ಶಬ್ದದ ಮೇಲಿನ ನರವ್ಯೂಹದ ಕಾರ್ಯಾಚರಣೆ ಭಿನ್ನವಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಇಂಪ್ಲಾಂಟ್‌ ಅನ್ನು ಕಿವಿಯ ಹಿಂಭಾಗದ ಚರ್ಮದ ಅಡಿಯಲ್ಲಿ ಅಳವಡಿಸುತ್ತಾರೆ. ಈ ಸಾಧನವು ಒಳಗೊಂಡಿರುವ ಭಾಗಗಳು ಅಂದರೆ: ಬಾಹ್ಯ ಮೈಕ್ರೋಫೋನ್‌, ಸ್ಪೀಚ್‌ ಪ್ರಾಸೆಸರ್‌, ಆಂತರಿಕ ಗ್ರಾಹಕ ಮತ್ತು ಎಲೆಕ್ಟ್ರೋಡ್‌. 
 
ಈ ಶಸ್ತ್ರಚಿಕಿತ್ಸೆ ಮತ್ತು ಸಾಧನದಿಂದ ಯಾವ ಮಟ್ಟದಲ್ಲಿ ಪ್ರಯೋಜನ ಆಗಬಹುದು ಎಂಬುದನ್ನು ಬೇರೆ ಬೇರೆ ಅಂಶಗಳು ನಿರ್ಧರಿಸುತ್ತವೆ. ಕಾಕ್ಲಿಯರ್‌ ಅಳವಡಿಸುವ ಕೇಂದ್ರಗಳು ವ್ಯಕ್ತಿಗತ ಆಧಾರದಲ್ಲಿ ಮತ್ತು ವ್ಯಕ್ತಿಯ ಕೇಳುವಿಕೆಯ ಹಿನ್ನೆಲೆ, ಶ್ರವಣದೋಷಕ್ಕೆ ಕಾರಣವಾಗಿರುವ ಅಂಶಗಳು, ಕೇಳುವಿಕೆಯ ಸಾಮರ್ಥ್ಯ, ಮಾತನ್ನು ಗುರುತಿಸುವ ಸಾಮರ್ಥ್ಯ, ಆರೋಗ್ಯ ಮಟ್ಟ ಮತ್ತು  ವ್ಯಕ್ತಿಯ ಶ್ರವಣ ಪುನಃಶ್ಚೇತನ/ಪುನಃಶ್ಚೇತನದಲ್ಲಿ ಕುಟುಂಬದ ಬದ್ಧತೆ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಮಗುವು ಈ ಚಿಕಿತ್ಸೆಯನ್ನು ಪಡೆದ ನಂತರ ಅದರ ಪೂರ್ತಿ ಪ್ರಮಾಣದ  ಪ್ರಯೋಜನ ಪಡೆಯಲು  ಮಾತಿನ ತರಬೇತಿಯನ್ನೂ ಪಡೆಯಬೇಕಾಗುತ್ತದೆ. 

ಕಾಕ್ಲಿಯರ್‌ ಇಂಪ್ಲಾಂಟ್‌  
ಅಂದರೆ ಏನದು? 

ಕಾಕ್ಲಿಯರ್‌ ಇಂಪ್ಲಾಂಟ್‌ ಎನ್ನುವುದು ಒಂದು ಎಲೆಕ್ಟ್ರಾನಿಕ್‌ ಸಾಧನ, ಉಪಯುಕ್ತ ಶಬ್ದಗಳನ್ನು ಗ್ರಹಿಸಲು ಇದನ್ನು ಶಸ್ತ್ರಚಿಕಿತ್ಸೆಯ ಮೂಲಕ ಒಳಕಿವಿಯ ಒಳಭಾಗದಲ್ಲಿ ಇರಿಸುತ್ತಾರೆ. ಈ ಶ್ರವಣ ಸಾಧನವು ಕೇಳುವಿಕೆಯ ಶಕ್ತಿಯನ್ನು ಮತ್ತು ಇಂಪ್ಲಾಂಟ್‌ ಬಳಸುವವರ ಸಂವಹನಾ ಸಾಮರ್ಥ್ಯವನ್ನು ಉತ್ತಮಪಡಿಸುತ್ತದೆ. ತೀವ್ರದಿಂದ ಗಂಭೀರ ರೂಪದ ಶ್ರವಣದೋಷ ಇರುವ ರೋಗಿಗಳಿಗೆ ಇದು ಬಹಳ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಚಿಕಿತ್ಸೆ. ತಮ್ಮ ಕಾಕ್ಲಿಯಾ (ಒಳಗಿವಿಯ ಸುರುಳಿ)ದಲ್ಲಿನ ಸಂವೇದನಾ ಕೋಶಗಳು ಹಾನಿಗೀಡಾಗಿರುವ ಕಾರಣದಿಂದ ಕಿವುಡರಾಗಿರುವ ರೋಗಿಗಳಿಗೆ ಕಾಕ್ಲಿಯರ್‌ ಅಳವಡಿಕೆಯಿಂದ ಶ್ರವಣಶಕ್ತಿಯನ್ನು ಮರಳಿ ಪಡೆಯಲು ಸಹಾಯ ಆಗಬಹುದು. ನಮ್ಮ ಶರೀರದಲ್ಲಿನ ಹೆಚ್ಚಿನ ಜೀವಕೋಶಗಳು ಒಮ್ಮೆ ಹಾನಿಗೊಳಗಾದರೆ ಮತ್ತೆ ಚೇತರಿಸಿಕೊಳ್ಳುತ್ತವೆ, ಆದರೆ ಸಂವೇದನಾ ಕೋಶಗಳು ಒಮ್ಮೆ ಹಾನಿಗೊಳಗಾದರೆ ಅವು ಮತ್ತೆ ಪುನಃಶ್ಚೇತನಗೊಳ್ಳುವುದಿಲ್ಲ.   

Advertisement

ಉಚಿತ ಇಂಪ್ಲಾಂಟ್‌ ಸಾಧನಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಒಂದು ಪ್ರಾಯೋಗಿಕ ಯೋಜನೆಯಲ್ಲಿ 133 ಜನ ರೋಗಿಗಳಿಗೆ ಉಚಿತ ಶ್ರವಣ ಸಾಧನವನ್ನು ಒದಗಿಸುವ ಮೂಲಕ ಕರ್ನಾಟಕ ರಾಜ್ಯದ ಜನತೆಯನ್ನು ಶ್ರವಣ ದೋಷದಿಂದ ಮುಕ್ತಗೊಳಿಸುವ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರ ಮಹತ್ವಾಕಾಂಕ್ಷೆಯ ಯೋಜನೆ ಅಕ್ಟೋಬರ್‌ 28, ಬುಧವಾರದಂದು ವಾಸ್ತವಿಕ ರೂಪವನ್ನು ಪಡೆಯಿತು. ಕರ್ನಾಟಕದಲ್ಲಿ  ವಿವಿಧ ಯೋಜನೆಗಳು ಕಾರ್ಯರೂಪದಲ್ಲಿದ್ದು, ಜಿಲ್ಲೆಯ ಸುಮಾರು 11 ಮಕ್ಕಳು ಈಗಾಗಲೆ ಉಚಿತ ಕಾಕ್ಲಿಯರ್‌ ಇಂಪ್ಲಾಂಟ್‌ ಅನ್ನು ಪಡೆದಿರುತ್ತಾರೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಪೂರ್ತಿ ಶ್ರವಣ ದೋಷ ಇರುವ ಮಕ್ಕಳನ್ನು ಗುರುತಿಸಲಾಗುತ್ತಿದ್ದು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ  ADIP ಯೋಜನೆಯ ಅಡಿಯಲ್ಲಿ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತದೆ. 

– ಅರ್ಚನಾ ಜಿ.,
ಅಸಿಸ್ಟೆಂಟ್‌ ಪ್ರೊಫೆಸರ್‌,
ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗ,
ಮಣಿಪಾಲ ವಿಶ್ವದ್ಯಾನಿಲಯ
ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next