ಹಾಸನ: ಮುಂಗಾರು ಮಳೆ ಆರಂಭವಾಗಿದ್ದರೂ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಇನ್ನೂ ಆರಂಭವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಒಳ ಹರಿವು ಬಹುತೇಕ ನಿಂತೇ ಹೋಗಿದೆ. ನೀರಿನ ಸಂಗ್ರಹವಂತೂ ಆತಂಕಕಾರಿ ಮಟ್ಟದಲ್ಲಿದೆ.
ಕಳೆದ ವರ್ಷ ಜೂ.13 ರಂದು ಜಲಾಶಯಕ್ಕೆ 37,946 ಕ್ಯೂಸೆಕ್ ಒಳ ಹರಿವಿತ್ತು. ಆದರೆ ಈ ವರ್ಷ ನೀರಿನ ಒಳ ಹರಿವು ಕೇವಲ 139 ಕ್ಯೂಸೆಕ್ ಮಾತ್ರ. ಕಳೆದ ವರ್ಷ ಜೂನ್ ಆಂತ್ಯದ ವೇಳೆಗೆ ಜಲಾಶಯ ಭರ್ತಿಯ ದಿನಗಣನೆ ಆರಂಭವಾಗಿತ್ತು. ಜುಲೈ 15 ರ ವೇಳೆಗೆ ಭರ್ತಿಯಾಗಿ ನದಿಗೆ 20 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿತ್ತು. ಆದರೆ ಈ ವರ್ಷ ಜೂನ್ ತಿಂಗಳಾಂತ್ಯಕ್ಕೆ ಒಂದು ಟಿಎಂಸಿ ನೀರು ಸಂಗ್ರಹವಾಗುವ ಸೂಚನೆಯೂ ಕಾಣುತ್ತಿಲ್ಲ.
ಜಿಲ್ಲೆಯಲ್ಲಿ ಶೇ.45 ಮಳೆ ಕೊರತೆ: ಜಿಲ್ಲೆಯಲ್ಲಿ ಈ ವರ್ಷ ಫೂರ್ವ ಮುಂಗಾರು ಮಳೆ ಶೇ. 45 ಕೊರತೆಯಾಗಿದೆ. ಮುಂಗಾರು ಮಳೆ ಆರಂಭವಾದರೂ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯುತ್ತಿಲ್ಲ. ಮೋಡ ಕವಿದ ವಾತಾವರಣದ ನಡುವೆ ಚದುರಿದಂತೆ ಮಳೆಯಾಗುತ್ತಿದ್ದು, ರೈತರು ಮುಂಗಾರು ಬೆಳೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಳೆ ಆಶ್ರಯದ ಪ್ರದೇಶದಲ್ಲಿ ಮೆಕ್ಕೆಜೋಳ, ಆಲೂಗಡ್ಡೆ, ತಂಬಾಕು ನಾಟಿ ಆರಂಭವಾಗಿದೆ. ಆದರೆ ಹೇಮಾವತಿ ಯೋಜನೆಯ ಅಚ್ಚುಕಟ್ಟು ರೈತರಲ್ಲಿ ಈ ವರ್ಷ ಬೆಳೆ ಮಾಡಲಾಗುವುದಿಲ್ಲವೇನೋ ಎಂಬ ಆತಂಕ ಶುರುವಾಗಿದೆ.
ಬತ್ತಿದ ಹಳ್ಳ ಕೊಳ್ಳಗಳು: ಹೇಮಾವತಿ ಜಲಾಶಯ ಯೋಜನೆಯ ಜಲಾನಯನ ಪ್ರದೇಶ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕನ್ನು ಆವರಿಸಿದೆ. ಆದರೆ ಈ ವರ್ಷ ಈ ಪ್ರದೇಶಗಳಲ್ಲಿ ಹಳ್ಳ, ಕೊಳ್ಳಗಳು ಬತ್ತಿಹೋಗಿವೆ. ಹಾಗಾಗಿ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಆರಂಭವಾಗಬೇಕಾದರೆ ಹಳ್ಳಕೊಳ್ಳಗಳು ತುಂಬಿ ಹರಿಯಬೇಕು. ಆದರೆ ಇದುವರೆಗೂ ಮಲೆನಾಡಿನಲ್ಲಿ ಹದ ಮಳೆಯೂ ಆಗಿಲ್ಲದೇ ಇರುವುದು ಆತಂಕ ಮೂಡಿಸಿದೆ. ಯಗಚಿ ವ್ಯಾಪ್ತಿಯಲ್ಲೂ ಮಳೆ ಕೊರತೆ: ಹೇಮಾವತಿ ಯೋಜನೆಯ ಜಲಾನಯನ ಪ್ರದೇಶವಾದ ಯಗಚಿ ಜಲಾಶಯ ವ್ಯಾಪ್ತಿಯಲ್ಲೂ ಮಳೆಯಾಗುತ್ತಿಲ್ಲ. ಕಳೆದ ವರ್ಷ ಯಗಚಿ ಜಲಾಶಯ ಯೋಜನೆಯ ಜಲಾನಯ ಪ್ರದೇಶದಲ್ಲಿ ಮಳೆಯ ಕೊರತೆ ಕಾಡಿತು. ಹಾಗಾಗಿ ಹೇಮಾವತಿ ಜಲಾಶಯ ಭರ್ತಿಯಾದರೂ ಕೇಲವ 3.5 ಟಿಂಎಸಿ ಸಂಗ್ರಣಾ ಸಾಮರ್ಥಯದ ಬೇಲೂರು ಸಮೀಪದ ಯಗಚಿ ಜಲಾಶಯ ಭರ್ತಿಯಾಗಿರಲಿಲ್ಲ. ಯಗಚಿ ಜಲಾಶಯಕ್ಕೆ ಒಳ ಹರಿವು ಆರಂಭವಾಗಬೇಕಾದರೆ ಚಿಕ್ಕಮಗಳೂರು ತಾಲೂಕಿನಲ್ಲಿ ಮಳೆ ಆಗಬೇಕು. ಆದರೆ ಕಳೆದ ವರ್ಷ ಮೂಡಿಗೆರೆ, ಸಕಲೇಶಪುರ ತಾಲೂಕಿನಲ್ಲಿ ಸುರಿದಷ್ಟು ಪ್ರಮಾಣದ ಮಳೆ ಚಿಕ್ಕಮಗಳೂರು ತಾಲೂಕಿನಲ್ಲಿ ಸುರಿಯಲಿಲ್ಲ. ಹಾಗಾಗಿ ಯಗಚಿ ಜಲಾಶಯವು ಆಗಸ್ಟ್ ಅಂತ್ಯಕ್ಕೆ ಭರ್ತಿಯಾಯಿತು.
ಮುಂಗಾರು ಈಗಷ್ಟೇ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚುರುಕಾಗಿ ಜಲಾಶಯಕ್ಕೆ ನೀರು ಹರಿದು ಬರಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.
● ಎನ್.ನಂಜುಂಡೇಗೌಡ