ಬಿಸಿಲೇರುತ್ತಿದ್ದಂತೆ ಸಾವಿರಾರು ಜನ ಸಾಗರೋಪಾದಿಯಲ್ಲಿ ಸೇರಿಕೊಂಡಿದ್ದರ ಪರಿಣಾಮ, ಕ್ಯೂ ದಿಕ್ಕಾಪಾಲಾಗಿ, ಪೊಲೀಸರು ಜನರನ್ನು ನಿಯಂತ್ರಿಸಲಾಗದೆ ಕೊನೆಗೆ ಲಾಠಿ ಬೀಸಲಾರಂಭಿಸಿದರು. ನಮ್ಮ ಬೆಟಾಲಿಯನ್ ಎದ್ದೆವೋ, ಬಿದ್ದೆವೋ ಎಂದು ಓಡಿದೆವು.
1970ನೇ ಇಸವಿ. ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದೆ. ಬಿಸಿರಕ್ತ, ಕಲ್ಲುಗುದ್ದಿ ನೀರು ಬರಿಸುವ ವಯಸ್ಸದು. ಕನ್ನಡವೆನೆ ಕುಣಿದಾಡುವುದೆನ್ನೆದೆ ಎನ್ನುತ್ತ, ಕನ್ನಡ ಚಿತ್ರಗಳನ್ನು ಮಾತ್ರ ನೋಡುತ್ತ, ಕನ್ನಡದಲ್ಲಿಯೇ ಉಸಿರಾಡುತ್ತಿದ್ದು ಕಾಲ. ಏಕೆಂದರೆ, ನಮ್ಮ ಕನ್ನಡ ಅಲ್ವಾ? ಡಾ.ರಾಜ್‌ಕುಮಾರ್ ಎಂದರೆ ಅಚ್ಚುಮೆಚ್ಚು. ಅವರ ಯಾವುದೇ ಹೊಸ ಚಿತ್ರ ಬಿಡುಗಡೆಯಾಗಲಿ. ಮೊದಲ ದಿನ, ಮೊದಲ ಶೋಗೆ ನಮ್ಮ ಗೆಳೆಯರ ಬೆಟಾಲಿಯನ್ ತಪ್ಪದೇ ಹಾಜರಾಗುತ್ತಿತ್ತು.
ಆಗಲೇ ಬಂದಿದ್ದು ರಾಜ್‌ಕುಮಾರ್ ಅವರ ಮಹತ್ತರ ಚಿತ್ರ “ಶ್ರೀ ಕೃಷ್ಣದೇವರಾಯ’. ಮೆಜೆಸ್ಟಿಕ್‌ನ ವೈಭವೋಪೇತ ಚಿತ್ರಮಂದಿರ ಸಾಗರ್‌ನ (ಈಗ ಸಾಗರ್ ಚಿತ್ರಮಂದಿರವನ್ನು ನೆಲಸಮಗೊಂಡಿದ್ದು, ಆ ಸ್ಥಳದಲ್ಲಿ ಪೋತೀಸ್ ಶೋ ರೂಂ ಎದ್ದು ನಿಂತಿದೆ) ಪ್ರಾರಂಭದ ಆಕರ್ಷಣೆಯಾಗಿ ಆ ಚಿತ್ರದ ಕಟೌಟ್ ನಿಲ್ಲಿಸಿದ್ದರು. ಈ ರೀತಿ ಕಟೌಟ್ ನಿಲ್ಲಿಸಿದ್ದಾರೆ ಅಂದರೆ, ಒಂದೆರಡು ವಾರಗಳಲ್ಲಿ ಚಿತ್ರ ಬಿಡುಗಡೆ ಆಗುತ್ತದೆ ಅಂತಲೇ ಅರ್ಥ. ನಾವೆಲ್ಲ, ಈ ಕಟೌಟ್‌ನ ಬಗ್ಗೆ ತಿಳಿದು ಪುಳಕಿತರಾದೆವು. ಅಷ್ಟು ಹೊತ್ತಿಗೆ, ಬಿಡುಗಡೆಯ ಒಂದು ವಾರ ಮೊದಲೇ ಅಡ್ವಾನ್ಸ್ ಬುಕಿಂಗ್ ಟಿಕೆಟ್ ಕೊಡಲಾರಂಭಿಸಿದ್ದರು. ಸರಿ, ನಾವು ಮೊದಲ ದಿನ, ಮೊದಲ ಶೋನ ಗಿರಾಕಿಗಳು ಅಲ್ವೇ? ಹಾಗಾಗಿ, ಟಿಕೆಟ್‌ಗಾಗಿ ಮೊದಲೇ ಹಾಜರಾಗಿ ಕ್ಯೂ ನಿಂತೆವು. ಬೆಳಗ್ಗೆ 7 ಗಂಟೆಗೇ ರಶ್ ಆಗಿತ್ತು. ಬಿಸಿಲೇರುತ್ತಿದ್ದಂತೆ ಸಾವಿರಾರು ಜನ ಸಾಗರೋಪಾದಿಯಲ್ಲಿ ಸೇರಿಕೊಂಡಿದ್ದರ ಪರಿಣಾಮ, ಕ್ಯೂ ದಿಕ್ಕಾಪಾಲಾಗಿ, ಪೊಲೀಸರು ಜನರನ್ನು ನಿಯಂತ್ರಿಸಲಾಗದೆ ಕೊನೆಗೆ ಲಾಠಿ ಬೀಸಲಾರಂಭಿಸಿದರು. ನಮ್ಮ ಬೆಟಾಲಿಯನ್ ಎದ್ದೆವೋ, ಬಿದ್ದೆವೋ ಎಂದು ಓಡಿದೆವು. ಈ ನೂಕು ನುಗ್ಗಲಿನ ನಡುವೆಯೇ ನಾಲ್ಕಾರು ಜನ ನನ್ನನ್ನು ಎತ್ತಿ, ಅವರ ತಲೆಯ ಮೇಲಿನಿಂದ ಸಾಗಿಸಿ ಹೊರಗೆಸೆದಂತಾಯಿತು. ಏನಾಗುತ್ತಿದೆ, ಯಾಕಾಗುತ್ತಿದೆ ಏನೂ ಅರಿವಿಗೆ ಬರುತ್ತಿರಲಿಲ್ಲ. ಒಂಥರಾ ಪ್ರಜ್ಞಾಹೀನ ಸ್ಥಿತಿ. ನಿಧಾನಕ್ಕೆ ಕಣ್ಣಗಲಿಸಿದಾಗ, ಬೆಳಕು, ಬೆಳಕಾಗಿ ಕಂಡಿತು. ನೋಡಿದರೆ, ನಾನು ಫುಟ್‌ಪಾತ್ ಮೇಲೆ ಬೋರಲು ಬಿದ್ದಿದ್ದೆ. ನನ್ನ ಜೊತೆ ಕ್ಯೂ ನಿಂತು ಕೊಂಡಿದ್ದ ಗೆಳೆಯರು ಎಲ್ಲಿದ್ದಾರೋ, ಅವರೆಲ್ಲ ಹೇಗಿದ್ದಾರೋ ಅಂತ ನೋಡೋಣ ಅಂದರೆ ಯಾರು ಕೂಡ ಕಾಣಲಿಲ್ಲ. ಚಿತ್ರಮಂದಿರದಲ್ಲಿ ಟಿಕೆಟ್‌ಗಾಗಿ ಭೀಕರ ಹೋರಾಟದ ಪರಿಣಾಮ ಯಾವ ಮಟ್ಟಕ್ಕಿತ್ತೆಂದರೆ, ನನ್ನ ಶರ್ಟ್‌ನ ಒಂದು ತೋಳು ಹರಿದು ಬಾವಲಿಯಂತೆ ನೇತಾಡುತ್ತಿತ್ತು, ಪ್ಯಾಂಟ್ ಅಲ್ಲಲ್ಲಿ ತೂತಾಗಿತ್ತು, ಪರಚಿದ ಗಾಯ, ಮೂಗಿನಿಂದ ರಕ್ತ ಒಸರುತ್ತಿತ್ತು. ಕಾಲಿನ ಎರಡೂ ಚಪ್ಪಲಿಗಳು ಮಂಗಮಾಯವಾಗಿದ್ದವು. ಬರಿಗಾಲ ದಾಸ.
ಸಿನಿಮಾನೂ ಬೇಡ, ಏನೂ ಬೇಡ ಎಂದು ಕೊಂಡು ಹಾಸ್ಟೆಲ್‌ಗೆ ಬಂದು ಮುಲಾಮು ಹಚ್ಚಿಕೊಂಡು ಮಲಗಿದೆ. ನಾಲ್ಕೈದು ದಿನ ಹೊರಗೇ ಬರಲು ಆಗಲಿಲ್ಲ. ಇದಾಗಿ 2ನೇ ವಾರದಲ್ಲಿ ಶ್ರೀ ಕೃಷ್ಣದೇವರಾಯನನ್ನು ನೋಡಲು ರಶ್ ಸ್ವಲ್ಪ ಕಡಿಮೆ ಆಗಿತ್ತು. ಕಡೆಗೊಮ್ಮೆ, ಅದೇ ಗೆಳೆಯರೊಂದಿಗೆ, ಅದೇ ಸಾಗರ್‌ಚಿತ್ರಮಂದಿರದಲ್ಲಿ , ಬಿಡದೇ ಶ್ರೀ ಕೃಷ್ಣದೇವರಾಯರನನ್ನು ನೋಡಿ, ವಿಷಲ್ ಹೊಡೆದು ಸಂಭ್ರಮಿಸಿದೆವೆನ್ನಿ. ಪ್ರತಿ ವರ್ಷ ಹಂಪಿ ಉತ್ಸವ ಬಂದಾಗ, ಈ ಶ್ರೀ ಕೃಷ್ಣದೇವರಾಯರ ನೆನಪಾಗುತ್ತದೆ. ಆಗ ಆವತ್ತು ಆ ಕೃಷ್ಣ ದೇವರಾಯನನ್ನು ನೋಡಲು ಹೋದಾಗ ಆದ ಗಾಯದ ಗುರುತನ್ನು ಈಗಲೂ ತಡಕಾಡುತ್ತೇನೆ.
ಕೆ. ಶ್ರೀನಿವಾಸರಾವ್