ಬೆಂಗಳೂರು: ಬಿಜೆಪಿಯವರ ಪಾಲಿಗೆ ಇಂದಿರಾಗಾಂಧಿ ಈಗಲೂ ಸಿಂಹಸ್ವಪ್ನ. ಹೀಗಾಗಿ, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಆ ಪಕ್ಷದ ಮುಖಂಡರು ಪ್ರಸ್ತಾಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಬಗ್ಗೆ ಯೋಚಿಸುವುದೇ ಸಣ್ಣತನದ ಕೆಲಸ. ರಾಜಕೀಯವಾಗಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಎಂದು ತಿಳಿಸಿದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರರು ದೇಶದ ಏಕತೆ, ಸಾರ್ವಭೌಮತ್ವ ಕಾಪಾಡಿ, ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ನಾಯಕರಾಗಿದ್ದಾರೆ. ಹೆಸರು ಬದಲಾಯಿಸಬಹುದು, ಆದರೆ, ದೇಶದ ಜನರ ಮನಸ್ಸಿನಲ್ಲಿ ಚಿರಸ್ಥಾಯಿ ಆಗಿರುವ ಅವರು ಹೆಸರು ಅಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇಂದಿರಾ ಗಾಂಧಿ ಅವರ ಹೆಸರಿರುವ ಯೋಜನೆಗಳನ್ನು ಬಿಜೆಪಿ ಅವರು ಬದಲಾವಣೆ ಮಾಡಬಹುದು. ಆದರೆ ಇಂದಿರಾ ಗಾಂಧಿ ಅವರ ಕೊಡುಗೆ ಹಾಗೂ ಅವರ ವ್ಯಕ್ತಿತ್ವವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಬಡವರ ಹಸಿವು ನೀಗಿಸಲು ಮಾಡಲಾದ ಇಂದಿರಾ ಕ್ಯಾಂಟೀನ್ ಗೆ ಅನುದಾನ ಬಿಡುಗಡೆ ಮಾಡದೇ ಅದನ್ನು ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಈ ಇಂದಿರಾ ಕ್ಯಾಂಟೀನ್ ಅಗತ್ಯತೆ ಎಲ್ಲರಿಗೂ ಎಷ್ಟು ಮುಖ್ಯವಾಗಿತ್ತು ಎಂಬುದು ಜನರಿಗೆ ತಿಳಿದಿದೆ. ಹೈಕೋರ್ಟ್ ನಿರ್ದೇಶನದ ನಂತರ ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಯಿತು ಎಂದು ಹೇಳಿದರು.
ಇದನ್ನೂ ಓದಿ:ರೈತರ ಧ್ವನಿಯನ್ನು ಹತ್ತಿಕ್ಕಿದಂತೆ ಸಂಸತ್ತಿನಲ್ಲಿ ನಮ್ಮ ಧ್ವನಿ ಹತ್ತಿಕ್ಕಿದ್ದಾರೆ : ಕೌರ್
ಜಮೀರ್ ಅಹ್ಮದ್ ಅವರ ಮೇನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಹಾಗೂ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇನ್ನು ಜಮೀರ್ ಅಹ್ಮದ್ ಅವರು ಅಧಿಕಾರಿಗಳ ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಹೇಳಿದ ಮಾತೇ ನಮ್ಮೆಲ್ಲರ ಅಭಿಪ್ರಾಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಜಾರಿಗೆ ತಂದೆವು. ಆಗ ಹೆಸರು ಬದಲಿಸಲು ಸಾಕಷ್ಟು ಒತ್ತಡ ಇದ್ದವು. ಆದರೂ ನಾವು ಆ ಕೆಲಸ ಮಾಡಲಿಲ್ಲ. ವಾಜಪೇಯಿ ವಸತಿ ಯೋಜನೆಯ ಹೆಸರು ಬದಲಾಯಿಸಲಿಲ್ಲ. ನಮಗೂ ಬಿಜೆಪಿಯವರಿಗೂ ಇರುವ ವ್ಯತ್ಯಾಸ ಇಷ್ಟೇ.
-ಯು.ಟಿ.ಖಾದರ್